

ಕೇರಳ: ಮಲಯಾಳಂ ನಟಿಯೊಬ್ಬರು ಕೊಚ್ಚಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪುರುಷ ಪ್ರಯಾಣಿಕನೊಬ್ಬ ತನಗೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಮಂಗಳವಾರ ಮುಂಬೈನಿಂದ ತೆರಳುವಾಗ ವಿಮಾನದಲ್ಲಿ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.
ಮಂಗಳವಾರ ರಾತ್ರಿ ನಟಿ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಈ ವಿಷಯ ಹಂಚಿಕೊಂಡಿದ್ದು, ಘಟನೆಯನ್ನು ವಿವರಿಸುವಾಗ ಏರ್‌ಲೈನ್‌ನ ಗ್ರೌಂಡ್ ಸಿಬ್ಬಂದಿಯ ಪ್ರತಿಕ್ರಿಯೆ "ನಿರಾಶಾದಾಯಕ"ವಾಗಿತ್ತು ಎಂದು ಆರೋಪಿಸಿದ್ದಾರೆ. ಗಗನಸಖಿಯರಿಗೆ ದೂರು ನೀಡಿದರೂ ಟೇಕಾಫ್ ಆಗುವ ಮುನ್ನವೇ ಆಕೆಯನ್ನು ಬೇರೆ ಸೀಟಿಗೆ ವರ್ಗಾಯಿಸಿದ್ದು ಮಾತ್ರ ಕ್ರಮವಾಗಿದೆ ಎಂದು ನಟಿ ಅಳಲು ತೋಡಿಕೊಂಡಿದ್ದಾರೆ.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಂತರ, ಸಮಸ್ಯೆಯನ್ನು ವಿಮಾನ ನಿಲ್ದಾಣ ಮತ್ತು ವಿಮಾನಯಾನ ಅಧಿಕಾರಿಗಳಿಗೆ ತಿಳಿಸಲಾಯಿತು ಎಂದು ತಿಳಿಸಿದ್ದಾರೆ.
Instagram ನಲ್ಲಿ ದೂರಿನ ಪ್ರತಿ ಹಂಚಿಕೊಂಡ ನಟಿ
ಈ ಸಂಬಂಧ ಸ್ಥಳೀಯ ಪೊಲೀಸರಿಗೆ ನೀಡಿರುವ ದೂರಿನ ಪ್ರತಿಯನ್ನು ಇಮೇಲ್ ಮೂಲಕ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಪ್ರಯಾಣಿಕ ತನ್ನ ಸೀಟನ್ನು ಆಕ್ರಮಿಸಿಕೊಂಡು, ಜತೆಗೆ ತೀವ್ರ ವಾಗ್ವಾದದಲ್ಲಿ ತೊಡಗಿದ್ದನ್ನು ನೆನಪಿಸಿಕೊಂಡಿರುವ ನಟಿ, ಅನುಚಿತವಾಗಿ ನಡೆದುಕೊಂಡಿದ್ದನ್ನೂ ಉಲ್ಲೇಖಿಸಿದ್ದಾರೆ. ಕೂಡಲೇ ವಿಮಾನದಲ್ಲಿದ್ದ ಗಗನಸಖಿಯರಿಗೆ ವಿಷಯ ತಿಳಿಸಿದ್ದೇನೆ. ಆದರೆ, ಅವರು ತೆಗೆದುಕೊಂಡ ಕ್ರಮವೆಂದರೆ ನನ್ನನ್ನು ಮಧ್ಯದ ಸೀಟಿಗೆ ಅಂದರೆ ಮೂರು, ನಾಲ್ಕು ಸಾಲು ಮುಂದಕ್ಕೆ ಸ್ಥಳಾಂತರಿಸಲಾಯಿತು. ದುರದೃಷ್ಟವಶಾತ್, ಕಿರುಕುಳ ನೀಡಿದವರ ವಿರುದ್ಧ ಬೇರೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಾಗಿಲ್ಲ ಎಂದಿದ್ದಾರೆ.
ಪೊಲೀಸರು ಇನ್ನೂ ನಟಿಯೊಂದಿಗೆ ಮಾತುಕತೆ ನಡೆಸಿಲ್ಲ
ಏತನ್ಮಧ್ಯೆ, ನೆಡುಂಬಶ್ಶೇರಿ ಪೊಲೀಸರು ಬುಧವಾರ ಆಕೆಯಿಂದ ಇಮೇಲ್ ಸ್ವೀಕರಿಸಿದ್ದು, ಅದನ್ನು ಅವರ ಔಪಚಾರಿಕ ದೂರೆಂದು ಪರಿಗಣಿಸಲು ವಿನಂತಿಸಿದ್ದಾರೆ. "ನಾವು ಈ ವಿಷಯವನ್ನು ತನಿಖೆ ಮಾಡುತ್ತಿದ್ದೇವೆ" ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು. ಘಟನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ನಾವು ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ, ನಮಗೆ ಇನ್ನೂ ಫೋನ್‌ನಲ್ಲಿ ಮಾತನಾಡಲು ಸಾಧ್ಯವಾಗಿಲ್ಲ. ಇನ್ನೂ ಯಾವುದೇ ಪ್ರಕರಣ ದಾಖಲಾಗಿಲ್ಲ, ಅವರನ್ನು ಸಂಪರ್ಕಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.