ಎಮ್ಮೆ ಏರಿ ಮಾಳವಿಕಾ ಸವಾರಿ! : ಐದು ತಾಸು ಮೇಕಪ್, ಐವರು ವೈದ್ಯರಿಂದ ಚಿಕಿತ್ಸೆ

FotoJet
Published on

ಕನ್ನಡದ ‘ನಾನು ಮತ್ತು ವರಲಕ್ಷ್ಮೀ’ ಸೇರಿ ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ನಟಿಸಿರುವ ಖ್ಯಾತಿ ಮಾಳವಿಕಾ ಮೋಹನನ್‌ಗೆ ಸಲ್ಲುತ್ತದೆ. ಚಿತ್ರದಿಂದ ಚಿತ್ರಕ್ಕೆ ವಿಭಿನ್ನ, ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮಾಳವಿಕಾ ಸದ್ಯ ತಮಿಳಿನ ಪ.ರಂಜಿತ್ ನಿರ್ದೇಶನದ ‘ತಂಗಳಾನ್’ನಲ್ಲಿ ಮಾಟಗಾತಿ ಪಾತ್ರದಲ್ಲಿ ನಟಿಸಿದ್ದಾರೆ.

ಸವಾಲಿನ ಪಾತ್ರ ನಿರ್ವಹಿಸಿರುವ ನಟಿಯು ಶೂಟಿಂಗ್ ಸಮಯದಲ್ಲಿ ಎಮ್ಮೆ ಸವಾರಿಯ ಸ್ವಾರಸ್ಯ ಹಾಗೂ ಮೇಕಪ್‌ನಿಂದಾಗಿ ಆದ ಅವಾಂತರ ಕುರಿತು ಹೇಳಿಕೊಂಡಿದ್ದಾರೆ. ಸೆಟ್‌ನಲ್ಲಿ ಎಮ್ಮೆ ಕಂಡು ಆಶ್ಚರ್ಯಪಟ್ಟಿದ್ದ ನಟಿಗೆ ಪ. ರಂಜಿತ್, ‘ಅದರ ಮೇಲೆ ನೀವು ಸವಾರಿ ಮಾಡಬೇಕು’ ಎಂದಾಗ ಭಯಪಟ್ಟಿದ್ದರಂತೆ. ‘ತಮಾಷೆ ಮಾಡುತ್ತಿದ್ದಾರೆ ಅಂತ ಅಂದುಕೊಂಡಿದ್ದೆ. ಆದರೆ, ಮತ್ತೆ ನಾನು ನಿಜವಾಗಿಯೂ ಕೇರಬೇಕು ಎಂದಾಗ ಭಯದಿಂದಲೇ ಎಮ್ಮೆ ಮೇಲೆ ಸವಾರಿ ಮಾಡಿದೆ’ ಎಂದು ಅನುಭವ ಬಿಚ್ಚಿಟ್ಟಿದ್ದಾರೆ.

ಮಾಳವಿಕಾ ಮೇಕಪ್‌ಗಾಗಿ ಐದು ತಾಸುಗಳ ಕಾಲ ಕೂರಬೇಕಿತ್ತಂತೆ. ಇದರಿಂದ ಅವರ ಮುಖದ ಮೇಲೆ ಕಲೆಗಳು ಮೂಡಿದ್ದವು. ಹೀಗಾಗಿ ಚರ್ಮ ಹಾಗೂ ಕಣ್ಣಿನ ತಜ್ಞರನ್ನು ಸೇರಿ ಐವರು ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದುಕೊಂಡಿದ್ದಾರಂತೆ ಮಾಳವಿಕಾ. ಕೋಲಾರ ಚಿನ್ನದ ಗಣಿ ಹಿನ್ನೆಲೆಯ ಈ ‘ತಂಗಳಾನ್’ನಲ್ಲಿ ಚಿಯಾನ್ ವಿಕ್ರಮ್ ಮುಖ್ಯಭೂಮಿಕೆಯಲ್ಲಿದ್ದು, ಆಗಸ್ಟ್ 15ರಂದು ಸಿನಿಮಾ ಬಿಡುಗಡೆಯಾಗಲಿದೆ. ಬಳಿಕ ಮಾಳವಿಕಾ ತೆಲುಗಿನ ‘ದ ರಾಜಾಸಾಬ್’ ಹಾಗೂ ‘ಯುದ್ರ’ ಎಂಬ ಬಾಲಿವುಡ್ ಚಿತ್ರದಲ್ಲಿ ನಟಿಸಲಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net