

ಸಾಗರ: ಅಂಗವಿಕಲ ಮಕ್ಕಳಿಗೆ ವರ್ಷಪೂರ್ತಿ ವಿವಿಧ ಚಟುವಟಿಕೆ ನಡೆಸುತ್ತಿರುವ ಚೈತನ್ಯ ಸಂಸ್ಥೆಯ ಕಾರ್ಯ ಸ್ಮರಣೀಯ ಎಂದು ಜನತಾ ಎಜುಕೇಷನ್ ಸೊಸೈಟಿ ಅಧ್ಯಕ್ಷೆ ಡಾ. ರಾಜನಂದಿನಿ ಕಾಗೋಡು ತಿಳಿಸಿದರು.
ಸಾಗರ ತಾಲೂಕಿನ ಭೀಮನಕೋಣೆಯ ಚೈತನ್ಯ ವಿಶೇಷ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಫಿಸಿಯೋಥೆರಫಿ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುವುದು ಸವಾಲಿನ ಕೆಲಸ. ಅದರಲ್ಲೂ ಅಂಗವಿಕಲ ಮಕ್ಕಳಿಗೆ ಶಿಕ್ಷಣ ನೀಡುವುದು ಅತ್ಯಂತ ಕ್ಲಿಷ್ಟಕರ. ಈ ಮಕ್ಕಳಿಗೆ ಕಲಿಸುವ ಶಿಕ್ಷಕರಿಗೆ ತಾಳ್ಮೆ, ಏಕಾಗ್ರತೆ, ಶ್ರದ್ಧೆ ಎಲ್ಲವೂ ಬೇಕಾಗುತ್ತದೆ. ಫಿಸಿಯೋಥೆರಫಿ ವ್ಯಾಯಾಮಗಳನ್ನು ಎಲ್ಲರಿಗೂ ಕಲಿಸಿದಂತೆ ಈ ಮಕ್ಕಳಿಗೆ ಕಲಿಸುವುದು ಸುಲಭವಲ್ಲ. ನಾವು ಕಲಿಸುವ ರೀತಿ ಅವರಿಗೆ ಆಟದಂತೆ ಇರಬೇಕು. ಆಗ ಈ ಮಕ್ಕಳು ಫಿಸಿಯೋಥೆರಪಿಗೆ ಸ್ಪಂದಿಸುತ್ತಾರೆ ಎಂದರು.
ಸಾಗರದ ಫಿಸಿಯೋಥೆರಪಿಸ್ಟ್ ತನುಜ್ ಶೆಟ್ಟಿ ಮಾತನಾಡಿ, ಈ ಮಕ್ಕಳು ಅತ್ಯಂತ ಸೂಕ್ಷ್ಮ. ಅವರ ಮನಸ್ಥಿತಿ ಅರಿತು ನಾವು ಫಿಸಿಯೋಥೆರಫಿ ಮಾಡಿಸಬೇಕಾಗುತ್ತದೆ. ಶಿಕ್ಷಕರು ಮತ್ತು ಪಾಲಕರು ಪ್ರತಿಮಗುವಿನ ಅವಶ್ಯಕತೆಗೆ ಅನುಗುಣವಾಗಿ ನಿರಂತರವಾಗಿ ಫಿಸಿಯೋಥೆರಫಿ ಮಾಡಿಸುವ ಅಗತ್ಯವಿದೆ ಎಂದು ಹೇಳಿದರು.
ಬಿ.ಎಚ್.ರಾಘವೇಂದ್ರ, ಕೃಷ್ಣಪ್ಪ, ಎಂ.ಡಿ.ನಾಗಾರಾಜ್ ಭಟ್, ಕೆ.ಎನ್.ಸುರೇಶ್, ಅರ್ಚನಾ ಶ್ರೀಕಾಂತ್, ರಾಬರ್ಟ್, ಸಿಂಧೂಜಾ ವೈಷ್ಣವಿ, ವೆಂಕಟೇಶ್, ಗೀತಾ, ಎಂ.ನಾಗರಾಜ್ ಇತರರಿದ್ದರು.