ಪರಿಹಾರ ಹಣ ಸದುಪಯೋಗ ಪಡಿಸಿಕೊಳ್ಳಿ: ಸಚಿವ ರಾಮಲಿಂಗಾರೆಡ್ಡಿ ಕಿವಿಮಾತು

ramalinga-reddy-agencies
Published on

ಬೆಂಗಳೂರು: ಪರಿಹಾರ ಹಣವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕಿವಿಮಾತು ಹೇಳಿದರು.
ಶಾಂತಿನಗರದ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸೇವೆಯಲ್ಲಿದ್ದ ನೌಕರರ ೪ ಅವಲಂಭಿತರಿಗೆ ಅಪಘಾತ ಪರಿಹಾರ ವಿಮೆಯ ಚಕ್ ನೀಡಿ ಮಾತನಾಡಿದರು.
ನಿಗಮದ ವತಿಯಿಂದ ಕಾರ್ಮಿಕರ ಕಲ್ಯಾಣಕ್ಕಾಗಿ ಹಾಗೂ ಪ್ರಯಾಣಿಕರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಿದೆ. ಮೃತಪಟ್ಟವರ ಜೀವ ಅಮೂಲ್ಯವಾದದ್ದು, ಅದನ್ನು ಮರಳಿ ತರಲಾಗುವುದಿಲ್ಲ. ಆದರೆ ಅವರ ಕುಟುಂಬದ ಆರ್ಥಿಕ ಸ್ವಾವಲಂಬನೆಗಾಗಿ ನಿಗಮವು ರೂಪಿಸಿರುವ ಯೋಜನೆ ದೂರದೃಷ್ಠಿಯನ್ನು ಹೊಂದಿರುವುದಾಗಿ ತಿಳಿಸಿದರು. ಈ ಮೊತ್ತವನ್ನು ಸದುಪಯೋಗ ಪಡಿಸಿಕೊಂಡು ಮಕ್ಕಳ ವಿದ್ಯಾಭ್ಯಾಸ ಹಾಗೂ ಮನೆ ಕಟ್ಟಿಕೊಳ್ಳಲು ಉಪಯೋಗಿಸಿಕೊಳ್ಳಿ ಬೇರೆ ಇತರೆ ಎಲ್ಲೂ ಹಣ ಪೋಲು ಮಾಡದಂತೆ ಎಚ್ಚರ ವಹಿಸಲು ತಿಳಿಸಿದರು.
ನಿಗಮವು ಯಶಸ್ವಿಯಾಗಿ ಶಕ್ತಿ ಯೋಜನೆ ಅನುಷ್ಠಾನಗೊಳಿಸಲು ಮುಖ್ಯ ಪಾತ್ರ ವಹಿಸಿರುವ ನಿಗಮದ ಚಾಲಕರು,ನಿರ್ವಾಹಕರು, ಸಿಬ್ಬಂದಿ, ಅಧಿಕಾರಿಗಳು ಹಾಗೂ ಕಾರ್ಮಿಕ ಮುಖಂಡರುಗಳ ಪಾತ್ರ ಅಭಿನಂದನೀಯ ಎಂದು ತಿಳಿಸಿದರು.
ಇದೇ ವೇಳೆ ನಿಗಮದ ವಿದ್ಯಾ ಚೇತನ ವಿದಾರ್ಥಿ ವೇತನ ಯೋಜನೆಯ ಮೊತ್ತವನ್ನು ಹೆಚ್ಚಿಸುವ ಕುರಿತು ಪರಿಶೀಲಿಸುವಂತೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿದರು.
ಕೆಎಸ್‌ಆರ್‌ಟಿಸಿ ಅಧ್ಯಕ್ಷ ಶ್ರೀನಿವಾಸ್ ಗುಬ್ಬಿ ಮಾತನಾಡಿ, ನಿಗಮದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯು ಶ್ರಮ ಜೀವಿಗಳಾಗಿದ್ದು ಅವರಿಗೆ ಸಲ್ಲಬೇಕಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕಾಗಿರುತ್ತದೆ. ಇಂದು ವಿತರಿಸಲಾಗಿರುವ ಪರಿಹಾರ ಮೊತ್ತವನ್ನು ಕುಟುಂಬ ವರ್ಗದವರು ಸಮರ್ಪಕವಾಗಿ ಬಳಸಿಕೊಂಡು ಕುಟುಂಬದ ಆರ್ಥಿಕ ಸ್ವಾವಲಂಬನೆ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಎಂದರು.
ಸೇವೆಯಲ್ಲಿದ್ದ ನೌಕರರ ೪ ಅವಲಂಭಿತರಿಗೆ ಅಪಘಾತ ಪರಿಹಾರ ವಿಮೆ ತಲಾ ರೂ.೧ ಕೋಟಿ ನೀಡಲಾಗಿದ್ದು ಇಲ್ಲಿಯವರೆಗೆ ಒಟ್ಟು ೧೭ ಸಿಬ್ಬಂದಿ ಕುಟುಂಬಕ್ಕೆ ವಿಮಾ ಹಣ ನೀಡಲಾಗಿದೆ.
ಕುಟುಂಬ ಕಲ್ಯಾಣ ಯೋಜನೆಯಡಿ ೨೩ ಸೇವೆಯಲ್ಲಿದ್ದು ಮೃತಪಟ್ಟ ನೌಕರರ ಅವಲಂಬಿತರಿಗೆ ತಲಾ ರೂ.೧೦ ಲಕ್ಷ ರೂ.ಪರಿಹಾರ ಹಣವನ್ನು ಇಲ್ಲಿಯವರೆಗೆ ಒಟ್ಟು ೩೯ ಸಿಬ್ಬಂದಿಯ ಕುಟುಂಬದವರಿಗೆ ನೀಡಲಾಗಿದೆ.
ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್, ಕಾರ್ಮಿಕ ಸಂಘಟನೆಗಳ ಮುಖಂಡರಾದ ಅನಂತಸುಬ್ಬರಾವ್, ವಿಜಯಭಾಸ್ಕರ್, ರೇವಪ್ಪ ಸೇರಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net