ಬಸವ ಜಯಂತಿ ಕಾರ್ಯಕ್ರಮ ಯಶಸ್ವಿಗೊಳಿಸಿ

24ark1
ಅರಕಲಗೂಡಿನಲ್ಲಿ ಆಯೋಜಿಸಿದ್ದ ಬಸವ ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ಶಾಸಕ ಎ.ಮಂಜು ಮಾತನಾಡಿದರು. ಸೌಮ್ಯಾ, ಸೋಮಶೇಖರ್ ಇದ್ದರು.
Published on

ಅರಕಲಗೂಡು: ಪಟ್ಟಣದ ಕೊತ್ತಲು ಗಣಪತಿ ದೇವಸ್ಥಾನ ಆವರಣದಲ್ಲಿ ಏ.30ರಂದು ನಡೆಯುವ ಬಸವ ಜಯಂತಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಶಾಸಕ ಎ. ಮಂಜು ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಗವಾನ್ ಬುದ್ಧ ಅವರ ನಂತರ ನಮ್ಮ ರಾಜ್ಯದಲ್ಲಿ ಬಸವಣ್ಣನವರೇ ಅಂದು ತಾಂಡವಾಡುತ್ತಿದ್ದ ಜಾತಿ ವ್ಯವಸ್ಥೆ, ಅಸಮಾನತೆ, ಸಮಾನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮಹಾನ್ ಕಾರ್ಯವನ್ನು ತಮ್ಮ ವಚನಗಳ ಮೂಲಕ ಕೊಟ್ಟಿರುವ ಮಹಾನ್ ಚೇತನರಾಗಿದ್ದಾರೆ.ಇಂತಹ ಮಹನೀಯರ ಜಯಂತಿ ಆಚರಣೆ ಒಂದು ಸಮಾಜಕ್ಕೆ ಸೀಮಿತಗೊಳ್ಳದೆ ಸರ್ವರೂ ಸ್ವಯಂಪ್ರೇರಿತವಾಗಿ ಪಾಲ್ಗೊಂಡು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡೋಣ ಎಂದು ಹೇಳಿದರು.

ತಾಲೂಕಿನಾದ್ಯಂತ ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಯಾ ಗ್ರಾಪಂಗಳ ಆಡಳಿತ ಮನವರಿಕೆ ಮಾಡಬೇಕು.ವೀರಶೈವ ಲಿಂಗಾಯತ ಸಮಾಜದ ಮುಖಂಡರು ಕೂಡ ಕರಪತ್ರಗಳನ್ನು ಹಂಚುವ ಮೂಲಕ ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳುವ ಕೆಲಸವನ್ನು ನಿರ್ವಹಿಸಬೇಕೆಂದು ಮನವಿ ಮಾಡಿದರು.

ತಹಸೀಲ್ದಾರ್ ಸೌಮ್ಯಾ ಮಾತನಾಡಿ, ಬಸವಣ್ಣನವರ ಜಯಂತಿ ಆಚರಣೆ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿ ನಡೆಯಲು ಎಲ್ಲರ ಸಹಕಾರ ಬೇಕಿದೆ. ಆಡಳಿತ ವತಿಯಿಂದ ಅಂದು ಬೆಳಗ್ಗೆ 9 ಗಂಟೆಗೆ ಅನಕೃ ವೃತ್ತದಿಂದ ಬಸವಣ್ಣನವರ ಭಾವಚಿತ್ರವನ್ನು ಬೆಳ್ಳಿ ಸಾರೋಟಿನಲ್ಲಿ ಮೆರವಣಿಗೆ ಮಾಡಲಾಗುವುದು. ಅನುಭವ ಮಂಟಪ ಹಾಗೂ ಅವರೊಂದಿಗೆ ಇದ್ದ ಎಲ್ಲ ಮಹನೀಯರ ಭಾವಚಿತ್ರಗಳನ್ನು ಸಹ ಮೆರವಣಿಗೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ವಿಶೇಷವಾಗಿ ಮುಖ್ಯಭಾಷಣಕಾರದಿಂದ ಬಸವಣ್ಣ ಕುರಿತು ಉಪನ್ಯಾಸ ಕೂಡ ಇರುತ್ತದೆ. ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಎಲ್ಲಾ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ಇನ್ನಷ್ಟು ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಎಲ್ಲ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಚುನಾಯಿತ ಸದಸ್ಯರು, ವಿವಿಧ ಸಮಾಜದ ಸಂಘಟನೆಗಳ ಪ್ರಮುಖರು ಭಾಗವಹಿಸಬೇಕು ಎಂದರು.

ಉಪ ತಹಸೀಲ್ದಾರ್ ಸೋಮಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net