ಟಿಕೆಟ್ ಹಂಚಿಕೆಯತ್ತ ಚಿತ್ತ; ಮೂರೂ ಪಕ್ಷಗಳಿಂದ ಭರ್ಜರಿ ತಯಾರಿ

Politics
Published on

ಬೆಂಗಳೂರು: ರಾಜ್ಯದಲ್ಲಿ ಚುನಾವಣೆಯ ಕಾವು ದಿನೇದಿನೆ ಏರುತ್ತಿದ್ದು ರಣೋತ್ಸಾಹದಲ್ಲಿರುವ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯತ್ತ ಚಿತ್ತ ನೆಟ್ಟಿವೆ. ಆಡಳಿತ ಪಕ್ಷ ಬಿಜೆಪಿ ಜಿಲ್ಲೆಗಳಿಂದ ಪ್ರತಿ ಕ್ಷೇತ್ರಕ್ಕೆ ಮೂರು ಹೆಸರು ಕಳುಹಿಸುವಂತೆ ಸದ್ಯದಲ್ಲಿಯೇ ಸೂಚನೆ ನೀಡಲಿದೆ. ಪ್ರತಿಪಕ್ಷ ಕಾಂಗ್ರೆಸ್ ಈ ತಿಂಗಳ ಅಂತ್ಯಕ್ಕೆ 150 ಅಭ್ಯರ್ಥಿಗಳ ಹೆಸರು ಪ್ರಕಟಿಸಲು ಸಿದ್ಧತೆ ಮಾಡಿಕೊಂಡಿದೆ. ಪ್ರಾದೇಶಿಕ ಪಕ್ಷ ಜೆಡಿಎಸ್ ಮಾಜಿ ಸಿಎಂ ಕುಮಾರಸ್ವಾಮಿ ಹುಟ್ಟುಹಬ್ಬದ ದಿನ 90 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಲಿದೆ.

ವರಿಷ್ಠರ ಭೇಟಿಯ ನಂತರ: ಬಿಜೆಪಿ ವರಿಷ್ಠರು ಗುಜರಾತ್​ನಲ್ಲಿ ಸರ್ಕಾರ ರಚನೆ ಪ್ರಕ್ರಿಯೆಗಳೆಲ್ಲ ಮುಗಿದ ನಂತರ ಕರ್ನಾಟಕದತ್ತ ಮುಖ ಮಾಡಲಿದ್ದಾರೆ. ಮುಖಂಡರೆಲ್ಲ ಒಂದು ಸುತ್ತು ಪ್ರವಾಸ ಮಾಡಿದ ನಂತರವೇ ಅಭ್ಯರ್ಥಿಗಳ ಆಯ್ಕೆಯತ್ತ ಗಮನ ಹರಿಸಲಾಗುತ್ತದೆ. ಆದರೆ, ಅಷ್ಟರೊಳಗೆ ಪ್ರತಿ ಕ್ಷೇತ್ರದಿಂದ ತಲಾ ಮೂರು ಹೆಸರನ್ನು ಕಳುಹಿಸುವಂತೆ ರಾಜ್ಯ ಸಮಿತಿಯಿಂದ ಸೂಚನೆ ಹೋಗಲಿದೆ.

ಮುಖಂಡರ ಕ್ಷೇತ್ರಗಳು ಸೇರಿ ಯಾವುದೇ ಕ್ಷೇತ್ರದಿಂದ ಒಂದೇ ಹೆಸರು ಶಿಫಾರಸು ಮಾಡುವಂತಿಲ್ಲ. ಮೂರು ಹೆಸರು ಇರಲೇಬೇಕು. ಬಳಿಕ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಪರಿಷ್ಕರಣೆ ಮಾಡಿ ಕೇಂದ್ರ ಸಂಸ ದೀಯ ಸಮಿತಿಗೆ ಕಳುಹಿಸಲಾಗುತ್ತದೆ. ಆ ನಂತರ ವರಿಷ್ಠರು ಅಂತಿಮ ಮಾಡಲಿದ್ದಾರೆ. ಪಕ್ಷ ನಡೆಸಿರುವ ಸಮೀಕ್ಷೆಯ ವರದಿಯನ್ನು ಆಧರಿಸಿ ವರಿಷ್ಠರು ಅಭ್ಯರ್ಥಿಗಳ ಆಯ್ಕೆ ಮಾಡಲಿದ್ದಾರೆ. ಹಾಲಿಗಳಲ್ಲಿ ಎಷ್ಟು ಜನರಿಗೆ ಟಿಕೆಟ್ ಕೈ ತಪ್ಪಲಿದೆ, ಎಷ್ಟು ಹೊಸಬರು ಬರಲಿದ್ದಾರೆ ಎಂಬುದು ಇನ್ನೂ ಅಂತಿಮ ವಾಗಿಲ್ಲ. ಅನೇಕ ಕ್ಷೇತ್ರಗಳಲ್ಲಿ ಬೇರೆ ಪಕ್ಷದಿಂದ ಬರುವ ಮುಖಂಡರಿಗೆ ಬಿಜೆಪಿ ಕಾಯುತ್ತಿದೆ. ಅದೆಲ್ಲವೂ ಅಂತಿಮ ಆದ ನಂತರವಷ್ಟೇ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗುತ್ತದೆ ಎಂದು ಹೇಳಲಾಗುತ್ತಿದೆ.

ಸಮಾವೇಶಗಳು: ಕಾಂಗ್ರೆಸ್ ಸಹ ಎರಡನೇ ಹಂತದಲ್ಲಿ ಸಮಾವೇಶಗಳನ್ನು ನಡೆಸಲು ಮುಂದಾಗಿದೆ. ಜನವರಿಯಲ್ಲಿ ಪರಿಶಿಷ್ಟರ ಸಮಾವೇಶ, ಫೆಬ್ರವರಿಯಲ್ಲಿ ಒಬಿಸಿ ಸಮಾವೇಶ ನಡೆಸಲಾಗುತ್ತದೆ. ಅಲ್ಪಸಂಖ್ಯಾತರ ಸಮಾವೇಶ ನಡೆಸುವುದಕ್ಕೆ ಸಂಬಂಧಿಸಿದಂತೆ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಡಿ.13 ರಂದು ಪೂರ್ವಭಾವಿ ಸಭೆ ಕರೆದಿದ್ದಾರೆ. ವಿಜಯಪುರ ಅಥವಾ ಬಾಗಲಕೋಟೆಯಲ್ಲಿ ರೈತರ ಸಮಾವೇಶವನ್ನು ದೊಡ್ಡ ಪ್ರಮಾಣದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಇದರ ಜವಾಬ್ದಾರಿಯನ್ನು ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಅವರಿಗೆ ನೀಡಲಾಗುತ್ತದೆ ಎನ್ನಲಾಗಿದೆ.

ರಥಯಾತ್ರೆ: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಥಯಾತ್ರೆ ಜನವರಿಯಲ್ಲಿ ಆರಂಭವಾಗಲಿದೆ. ಇಬ್ಬರೂ ಪ್ರತ್ಯೇಕವಾಗಿಯೇ ಯಾತ್ರೆ ಮಾಡಲಿದ್ದಾರೆ. ಚುನಾವಣೆ ಯಾವುದೇ ಸಂದರ್ಭದಲ್ಲಿ ಎದುರಾಗಬಹುದೆಂಬ ನಿರೀಕ್ಷೆ ಇರುವುದರಿಂದ ಆದಷ್ಟು ಬೇಗ 224 ಕ್ಷೇತ್ರಗಳನ್ನು ತಲುಪುವುದು ಪಕ್ಷದ ಮುಖಂಡರ ಉದ್ದೇಶವಾಗಿದೆ. ಅದಕ್ಕಾಗಿ ಶಿವಕುಮಾರ್ ರಾಜ್ಯದ ದಕ್ಷಿಣ ಭಾಗದಲ್ಲಿಯೂ, ಸಿದ್ದರಾಮಯ್ಯ ಉತ್ತರ ಭಾಗದಲ್ಲಿಯೂ ಪ್ರವಾಸ ಮಾಡಲಿದ್ದಾರೆ. ಇಬ್ಬರ ಜತೆಗೆ ಯಾವ ಯಾವ ಮುಖಂಡರು ಕಡ್ಡಾಯವಾಗಿ ಇರಬೇಕು ಎಂಬುದನ್ನು ಸದ್ಯದಲ್ಲಿಯೇ ಅಂತಿಮ ಮಾಡಲಾಗುತ್ತದೆ.

ಜೆಡಿಎಸ್ ಮೊದಲ ಪಟ್ಟಿ

ಜೆಡಿಎಸ್ ಈ ವೇಳೆಗೆ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಬೇಕಾಗಿತ್ತು. ಆದರೆ, ಒಂದಿಲ್ಲೊಂದು ಅಡ್ಡಿ ಎದುರಾದ ಕಾರಣ ಮುಂದೂಡಲಾಗುತ್ತಿತ್ತು. ಇದೀಗ ಡಿ.16ರಂದು ಮಾಜಿ ಸಿಎಂ ಕುಮಾರಸ್ವಾಮಿ ಹುಟ್ಟುಹಬ್ಬದ ದಿನ 90 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುತ್ತಿದೆ. ರಾಮನಗರದಲ್ಲಿ ಕುಮಾರಸ್ವಾಮಿ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸುತ್ತಿದ್ದು, ಅಂದೇ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ. ಜ್ಯೋತಿಷವನ್ನು ಜಾಸ್ತಿ ನಂಬುವ ಎಚ್.ಡಿ. ರೇವಣ್ಣ ಪಟ್ಟಿ ಬಿಡುಗಡೆಗೆ ದಿನ ಹಾಗೂ ಗಳಿಗೆ ನೋಡುತ್ತಿದ್ದರು. ಇತ್ತೀಚಿಗೆ ಮೈಸೂರಿನಲ್ಲಿ ಕುಮಾರಸ್ವಾಮಿ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಕಾರ್ಯಾಗಾರ ಮಾಡಿದ್ದರು. ಇದೀಗ ಪಂಚರತ್ನ ಯಾತ್ರೆ ನಡೆಸಿದ್ದಾರೆ. 123 ಸ್ಥಾನ ಗೆದ್ದು ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಬೇಕು ಎಂಬುದು ಕುಮಾರಸ್ವಾಮಿ ಉದ್ದೇಶವಾಗಿದೆ.

ಕಾಂಗ್ರೆಸ್​ನಿಂದ 150 ಅಭ್ಯರ್ಥಿಗಳ ಪಟ್ಟಿ

150 ಸ್ಥಾನಗಳನ್ನು ಗೆಲ್ಲುವ ಗುರಿ ಹಾಕಿಕೊಂಡು ಚುನಾವಣಾ ತಂತ್ರ ಹಾಗೂ ಬಿಜೆಪಿ ಮತ್ತು ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸುವ ಪ್ರಯತ್ನ ಮಾಡುತ್ತಿರುವ ಕಾಂಗ್ರೆಸ್ 150 ಅಭ್ಯರ್ಥಿಗಳ ಪಟ್ಟಿಯನ್ನು ಮೊದಲ ಹಂತದಲ್ಲಿ ಬಿಡುಗಡೆ ಮಾಡಲಿದೆ. ಆಕಾಂಕ್ಷಿ ಗಳಿಂದ ಅರ್ಜಿ ಆಹ್ವಾನಿಸಿದ್ದು 224 ಕ್ಷೇತ್ರಗಳಿಗೆ 1,300ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿವೆ. ಜಿಲ್ಲಾಮಟ್ಟದಿಂದಲೂ ಮಾಹಿತಿ ಪಡೆದುಕೊಂಡಿದೆ. ಜತೆಗೆ, ಈಗಾಗಲೇ ಸಮೀಕ್ಷೆಯನ್ನು ನಡೆಸಿದೆ. ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಎಐಸಿಸಿ ಮಟ್ಟದಲ್ಲಿ ಚುನಾವಣಾ ಸಮಿತಿ ಹಾಗೂ ಪರಿಶೀಲನಾ ಸಮಿತಿ ರಚನೆಯಾಗ ಬೇಕಾಗುತ್ತದೆ. ಈ ಎರಡು ಸಮಿತಿಗಳು ಡಿಸೆಂಬರ್ 10 ರೊಳಗೆ ರಚನೆಯಾಗುವ ಸಾಧ್ಯತೆಗಳಿವೆ. ಅಭ್ಯರ್ಥಿಗಳ ಆಯ್ಕೆ ಈ ಸಮಿತಿಗಳಲ್ಲಿ ಚರ್ಚೆಯಾದ ನಂತರ ಎಐಸಿಸಿ ಅಧ್ಯಕ್ಷರ ಒಪ್ಪಿಗೆ ಪಡೆದು ಪ್ರಕಟಿಸಲಾಗುತ್ತದೆ. ಹಾಲಿ ಶಾಸಕರು, ಕ್ಷೇತ್ರದಲ್ಲಿ ಒಂದೇ ಹೆಸರು ಇರುವವರು ಹಾಗೂ ಹೆಚ್ಚಿನ ಸ್ಪರ್ಧೆ ಇಲ್ಲದವರು ಸೇರಿದಂತೆ 150 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ಹೇಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net