ಸೂರತ್‌ನಲ್ಲಿ ಭೀಕರ ಅಗ್ನಿ ಅನಾಹುತ: ತ್ಯಾಜ್ಯ ಕೇಂದ್ರದಲ್ಲಿ ಆವರಿಸಿದ ದಟ್ಟ ಕಪ್ಪು ಹೊಗೆ! | Surat Fire Accident

Fire accident in Gujarat
ಗುಜರಾತ್‌ನಲ್ಲಿ ಭೀಕರ ಅಗ್ನಿ ಅವಘಡ
Published on: 

Khajod Solid Waste Disposal Site: ಗುಜರಾತ್‌ನ ಸೂರತ್‌ನಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಅಗ್ನಿಕಿಲೆಯಿಂದಾಗಿ ಇಡೀ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಹಾಗೂ ಭಯದ ವಾತಾವರಣ ನಿರ್ಮಾಣವಾಗಿತ್ತು.

ಸೂರತ್‌ನ ಪ್ರಮುಖ ಜವಳಿ (ಟೆಕ್ಸ್‌ಟೈಲ್) ಉದ್ಯಮದಿಂದ ಹೊರಬರುವ ಅತ್ಯಂತ ಸುಲಭವಾಗಿ ಉರಿಯಬಲ್ಲ 'ಹಾಟ್‌ಫಿಕ್ಸ್' ಪ್ಲಾಸ್ಟಿಕ್ ಶೀಟ್‌ಗಳ ತ್ಯಾಜ್ಯದ ರಾಶಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಆಕಾಶಕ್ಕೆ ದಟ್ಟವಾದ ಕಪ್ಪು ಹೊಗೆ ಆವರಿಸಿತ್ತು.

ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ

ಘಟನೆ ತಿಳಿಯುತ್ತಿದ್ದಂತೆ ತಕ್ಷಣವೇ ಕಾರ್ಯಪ್ರವೃತ್ತರಾದ ಸೂರತ್ ಅಗ್ನಿಶಾಮಕ ದಳದ 35ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ 7 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿದವು. ಸುಮಾರು 5 ರಿಂದ 6 ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತರಲಾಗಿದೆ.

ಇದನ್ನೂ ಓದಿ: ನೋರಾ ಫತೇಹಿಗೆ ಕೋರ್ಟ್ ತರಾಟೆ: ‘ನ್ಯಾಯಾಲಯವನ್ನು ಹಗುರವಾಗಿ ಪರಿಗಣಿಸಬೇಡಿ!’ | Nora Fatehi Summons

ವರ್ಷದಲ್ಲೇ ಮೂರನೇ ಬಾರಿ ಘಟನೆ

ವಿಶೇಷವೆಂದರೆ, ವಿಶ್ವಪ್ರಸಿದ್ಧ ಸೂರತ್ ಡೈಮಂಡ್ ಬೋರ್ಸ್ (SDB) ಕಟ್ಟಡದ ಹತ್ತಿರದಲ್ಲೇ ಇರುವ ಈ ಖಜೋದ್ ತ್ಯಾಜ್ಯ ಕೇಂದ್ರದಲ್ಲಿ ಈ ವರ್ಷ ಬೆಂಕಿ ಕಾಣಿಸಿಕೊಳ್ಳುತ್ತಿರುವುದು ಇದು ಮೂರನೇ ಬಾರಿಯಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸೂರತ್ ಮಹಾನಗರ ಪಾಲಿಕೆ ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.