

| ರಮೇಶ ದೊಡ್ಡಪುರ ಬೆಂಗಳೂರು
ಲಾಕ್ಡೌನ್ ಅವಧಿಯಲ್ಲಿ ಸಮಯ ಕಳೆಯಲು ಮನೆ ತಾರಸಿಯಿಂದ ಪಡ್ಡೆ ಹುಡುಗರು ಹಾರಿಸುತ್ತಿರುವ ಗಾಳಿಪಟಗಳು ಜನರ ಜೀವಕ್ಕೆ ಉರುಳಾಗಿದೆ. ಕಿಲ್ಲರ್ ಮಾಂಜಾ ಎಂದೇ ಕರೆಯಲ್ಪಡುವ ಗಾಳಿಪಟ ಹಾರಿಸುವ ನೈಲಾನ್ ದಾರ ಬೆಂಗಳೂರಿನಲ್ಲಿ ಪ್ರತಿನಿತ್ಯ ಹತ್ತಾರು ಪಕ್ಷಿಗಳ ಪ್ರಾಣ ತೆಗೆಯುತ್ತಿತ್ತು. ಇದೀಗ ಜನರ ಪ್ರಾಣಕ್ಕೂ ಕಂಟಕವಾಗಿದೆ. ದೇಶದ ಅನೇಕ ರಾಜ್ಯಗಳಲ್ಲಿ ಹತ್ತಾರು ಜನರು ಪ್ರಾಣ ಕಳೆದುಕೊಂಡರೂ, ಆದೇಶ ಹೊರಡಿಸಿ ಕೈಕಟ್ಟಿ ಕುಳಿತ ಬಿಬಿಎಂಪಿ ಕಾರಣದಿಂದ ಪರಿಸ್ಥಿತಿ ವಿಕೋಪದತ್ತ ಸಾಗಿದೆ.
ಕಿಲ್ಲರ್ ಚೈನೀಸ್ ಮಾಂಜಾ: ತಮ್ಮ ಗಾಳಿಪಟದ ದಾರದಿಂದ ಪ್ರತಿಸ್ಪರ್ಧಿ ಗಾಳಿಪಟದ ದಾರವನ್ನು ತುಂಡರಿಸುವ ಮೂಲಕ ವಿಜಯ ಸಾಧಿಸುವ ಸ್ಪರ್ಧೆಗಳಲ್ಲಿ ಸಾವಿರಾರು ರೂ. ಪಣಕ್ಕೆ ಕಟ್ಟಲಾಗುತ್ತದೆ. ಇಂತಹ ಕಾರ್ಯಕ್ಕೆ ಸಾಂಪ್ರದಾಯಿಕ ಹತ್ತಿ ದಾರ ಉಪಯೋಗಕ್ಕೆ ಬರುವುದಿಲ್ಲ. ನೈಲಾನ್ನಿಂದ ತಯಾರಿಸಿದ, ಗಟ್ಟಿಯಾದ ದಾರದ ಮೇಲೆ ಗಾಜಿನ ಪುಡಿಯನ್ನು ಲೇಪಿಸಿದ ದಾರಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಹತ್ತಿ ದಾರಕ್ಕೆ ಹೋಲಿಸಿದಲ್ಲಿ ಕಡಿಮೆ ದರಕ್ಕೆ ಲಭ್ಯ ಎಂಬ ಕಾರಣಕ್ಕೆ ‘ಚೈನೀಸ್ ಮಾಂಜಾ’ ಎನ್ನಲಾಗುವ ಈ ದಾರ ಗುಜರಾತ್, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ತಯಾರಾಗುತ್ತವೆ. ಪ್ರಾಣಾಪಾಯ ತಂದೊಡ್ಡುತ್ತಿವೆ ಎಂಬ ಕಾರಣಕ್ಕೆ ಅನೇಕ ರಾಜ್ಯ ಸರ್ಕಾರಗಳು ಚೈನೀಸ್ ಮಾಂಜಾ ಉತ್ಪಾದನೆ, ಶೇಖರಣೆ, ಮಾರಾಟ, ಬಳಕೆಯನ್ನು ಸಂಪೂರ್ಣ ನಿಷೇಧಿಸಿವೆ. ಕರ್ನಾಟಕ 2016ರ ಜೂ.24ರಿಂದ ನಿಷೇಧಿಸಿದೆ. ನವದೆಹಲಿಯಲ್ಲಿ ಮಾಂಜಾ ಸಮಸ್ಯೆ ವಿಕೋಪಕ್ಕೆ ಹೋಗಿದ್ದರಿಂದ ಅಲ್ಲಿನ ಸರ್ಕಾರ 6-7 ವರ್ಷದ ಹಿಂದೆಯೇ ನಿಷೇಧ ಮಾಡಿದೆ. ಅಲ್ಲಿಯೂ ಸೂಕ್ತ ಅನುಷ್ಠಾನವಿಲ್ಲದೆ ಜನರು ಸಾವಿಗೀಡಾಗುತ್ತಿದ್ದಾರೆ.
ಪ್ರತಿ ವರ್ಷ ನೂರಾರು ಸಾವು: ಗಾಳಿಪಟ ಹಾರಿಸಿದ ಬಳಿಕ ತುಂಡರಿಸಿದ ದಾರಗಳನ್ನು ಅಲ್ಲಿಯೇ ಬಿಟ್ಟು ಹೊರಡುತ್ತಾರೆ. ತುಂಡಾದ ಗಾಳಿಪಟ ಅನಿಯಂತ್ರಿತವಾಗಿ ಹಾರಿಕೊಂಡು ಮರಗಿಡಗಳಿಗೆ ಸುತ್ತಿಕೊಳ್ಳುತ್ತವೆ. ಅತ್ಯಂತ ಸಣ್ಣಗಿರುವ ಈ ದಾರಗಳು ಮನುಷ್ಯರಿಗಿರಲಿ, ಹಕ್ಕಿಗಳ ಸೂಕ್ಷ್ಮ ಕಣ್ಣಿಗೂ ಕಾಣುವುದಿಲ್ಲ. ಬಳಿ ಬರುವ ಹಕ್ಕಿಗಳ ಕುತ್ತಿಗೆ, ರೆಕ್ಕೆ, ಕಾಲು ಭಾಗಗಳು ಸಿಕ್ಕಿಕೊಂಡು ನರಳುತ್ತವೆ. ಯಾರ ಕಣ್ಣಿಗಾದರೂ ಬಿದ್ದರೆ ಬಿಬಿಎಂಪಿ ವನ್ಯಜೀವಿ ವಿಭಾಗಕ್ಕೆ ಅಥವಾ ಸ್ವಯಂಸೇವಾ ಸಂಸ್ಥೆಗೆ (96202 86800) ಕರೆ ಮಾಡಿ ತಿಳಿಸಿದಾಗ ಬಂದು ರಕ್ಷಿಸುತ್ತಾರೆ. ಯಾರ ಕಣ್ಣಿಗೂ ಬೀಳದಿದ್ದರೆ, ಅಲ್ಲಿಯೇ ನರಳಿ ಸಾವಿಗೀಡಾ ಗುತ್ತಿವೆ. ಪ್ರತಿನಿತ್ಯ 8-10 ಪಕ್ಷಿಗಳು ಚೈನೀಸ್ ಮಾಂಜಾಕ್ಕೆ ಸಿಲುಕುತ್ತಿವೆ ಎಂದು ಬಿಬಿಎಂಪಿ ವನ್ಯಜೀವಿ ವಿಭಾಗ ತಿಳಿಸಿದೆ. ಈ ಪೈಕಿ ಹೆಚ್ಚು ಎತ್ತರದಲ್ಲಿ ಹಾರಾಟ ನಡೆಸುವ ಹದ್ದುಗಳ ಸಂಖ್ಯೆಯೇ ಶೇ.70. ಕಾಗೆ, ಪಾರಿವಾಳ, ಗೂಬೆ ಸೇರಿ ಅನೇಕ ಪಕ್ಷಿ ಅಪಾಯಕ್ಕೆ ಈಡಾಗುತ್ತಿವೆ.
ನಿಷೇಧವಿದ್ರೂ ಮಾರಾಟ: ನೈಲಾನ್ ದಾರ ನಿಷೇಧವಾಗಿ ಐದು ವರ್ಷವೇ ಕಳೆದಿದ್ದರೂ ಬೆಂಗಳೂರಿನಲ್ಲಿ ಮಾರಾಟ ನಿರಾತಂಕವಾಗಿ ನಡೆಯುತ್ತಿದೆ. ಆದೇಶ ಜಾರಿ ಮಾಡಬೇಕಾದ ಅರಣ್ಯ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸೇರಿ ಹಲವು ಸಂಸ್ಥೆಗಳು ಕೈಕಟ್ಟಿ ಕುಳಿತಿರುವುದು ವಿಪರ್ಯಾಸ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ ನೈಲಾನ್ ದಾರ ಮಾರಾಟ ನಿಷೇಧಿಸಲಾಗಿದೆ. ಆದೇಶ ಉಲ್ಲಂಘಿಸಿ ಮಾರಾಟ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.
| ಗೌರವ್ ಗುಪ್ತ ಬಿಬಿಎಂಪಿ ಆಡಳಿತಾಧಿಕಾರಿ