

ನವದೆಹಲಿ: ಗುರುವಾರ ರಾಷ್ಟ್ರ ರಾಜಧಾನಿ ದೆಹಲಿಯ ಜಾಮಿಯಾ ಏರಿಯಾದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನಾ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಫೈರಿಂಗ್ ನಡೆಸುವ ಮುನ್ನ "ಯಾರಿಗೆ ಸ್ವಾತಂತ್ರ್ಯ ಬೇಕು? ಅದನ್ನ ನಾನು ನೀಡುತ್ತೇನೆ" ಎಂದು ಘೋಷಣೆ ಕೂಗುತ್ತಿದ್ದ ಎಂದು ತಿಳಿದುಬಂದಿದೆ.
ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಸೇರಿದಂತೆ ಕೆಲವರು ರಾಜ್ಘಾಟ್ವರೆಗೆ ಸಿಎಎ ಮತ್ತು ಎನ್ಆರ್ಸಿ ವಿರೋಧಿಸಿ ಪ್ರತಿಭಟನಾ ಮೆರವಣಿಗೆ ಕೈಗೊಂಡಿದ್ದರು. ಈ ವೇಳೆ ಅಪರಿಚಿತನೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ.
ಇದಕ್ಕೆ ಸಂಬಂಧಪಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿಡಿಯೋದಲ್ಲಿ ಕಪ್ಪು ಬಣ್ಣದ ಜಾಕೆಟ್ ಧರಿಸಿರುವ ವ್ಯಕ್ತಿಯೊಬ್ಬ ಸಿಂಗಲ್ ಬ್ಯಾರೆಲ್ ಪಿಸ್ತೂಲ್ ಹಿಡಿದು ಹಿಮ್ಮುಖವಾಗಿ ಚಲಿಸುತ್ತಾ ಜಾಮಿಯಾ ಏರಿಯಾದ ಹೋಲಿ ಫ್ಯಾಮಿಲಿ ಹಾಸ್ಪಿಟಲ್ ಬಳಿ ಗುಂಡಿನ ದಾಳಿ ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಪ್ರತಿಭಟನೆಗೆ ನಿಯೋಜಿಸಲಾಗಿದ್ದ ಪೊಲೀಸರ ನಡುವೆಯೇ ಫೈರಿಂಗ್ ನಡೆಸಲಾಗಿದೆ.
ಆರೋಪಿಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯೇ ತನ್ನ ಹೆಸರು ಗೋಪಾಲ್ ಎಂದು ಹೇಳಿಕೊಂಡಿದ್ದಾನೆ ಎಂದು ತಿಳಿದುಬಂದಿದ್ದು, ದೆಹಲಿ ಪೊಲೀಸರು ವ್ಯಕ್ತಿಯ ಹೆಸರನ್ನು ಖಚಿತಪಡಿಸಕೊಳ್ಳಲು ತನಿಖೆ ಮುಂದುವರಿಸಿದ್ದಾರೆ.
ದಾಳಿಯಲ್ಲಿ ಗಾಯಗೊಂಡ ವ್ಯಕ್ತಿಯನ್ನು ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಮಾಸ್ ಕಮ್ಯೂನಿಕೇಷನ್ ಆ್ಯಂಡ್ ರೀಸರ್ಚ್ ಸೆಂಟರ್ ವಿದ್ಯಾರ್ಥಿ ಶಾದಬ್ ನಾಜರ್ ಎಂದು ತಿಳಿದುಬಂದಿದೆ. ಆತನನ್ನು ಹೋಲಿ ಫ್ಯಾಮಿಲಿ ಹಾಸ್ಪಿಟಲ್ಗೆ ದಾಖಲಿಸಲಾಗಿದೆ. (ಏಜೆನ್ಸೀಸ್)