

ಸರಗೂರು: ಮೈಸೂರಿನಲ್ಲಿ ಅ.13ರಂದು ಹಮ್ಮಿಕೊಂಡಿರುವ ಮಹಿಷ ದಸರಾ ಆಚರಣೆಗೆ ಸರಗೂರು ಆದಿ ಕರ್ನಾಟಕ ಮಹಾಸಭಾ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ 500ಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದಾರೆ ಎಂದು ಆದಿ ಕರ್ನಾಟಕ ಮಹಾಸಭಾದ ಅಧ್ಯಕ್ಷ ಶಿವಣ್ಣ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಚಾಮುಂಡೇಶ್ವರಿಗೆ ಅಪಮಾನ ಮಾಡಲೆಂದು ಮಹಿಷ ದಸರಾ ಆಚರಣೆಗೆ ಮಾಡುತ್ತಿಲ್ಲ. ಬದಲಿಗೆ ಮಹಿಷನ ಮಹಿಮೆಯನ್ನು ಜನರಿಗೆ ಅರಿವು ಮೂಡಿಸುವ ಸಲುವಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.
ಮಹಾಸಭಾ ಪ್ರಧಾನ ಕಾರ್ಯದರ್ಶಿ ಚೆನ್ನಿಪುರ ಮಲ್ಲೇಶ್ ಮಾತನಾಡಿ, ಸರ್ಕಾರ ಮಹಿಷ ದಸರಾ ಆಚರಣೆಯನ್ನು ಹತ್ತಿಕ್ಕುವ ಕೆಲಸ ಮಾಡಬಾರದು ಎಂದರು.ಮುಖಂಡರಾದ ಗ್ರಾಮೀಣ ಮಹೇಶ್, ಭೀಮಯ್ಯ, ಜವರಯ್ಯ, ಹೆಗ್ಗನೂರು ನಿಂಗರಾಜು, ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಸಂಚಾಲಕ ಸರಗೂರು ಕೃಷ್ಣ ಇತರರು ಹಾಜರಿದ್ದರು . ದಸಂಸ ಬೆಂಬಲ: ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ), ಸಂಯೋಜಕರ ಸಮಿತಿ (ವಿ.ನಾಗರಾಜು ಬಣ)ಗಳೂ ಮಹಿಷ ದಸರಾ ಆಚರಣೆಗೆ ಬೆಂಬಲಿಸಿವೆ.