ಮಹಿಳಾ ಕಾಂಗ್ರೆಸ್ ಸದಸ್ಯತ್ವ ಅಭಿಯಾನ

Soumya Reddy
Published on

ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬೆಂಗಳೂರಿನಲ್ಲಿ ಮಹಿಳಾ ಕಾಂಗ್ರೆಸ್ ಸ್ಥಾಪನೆ ಮಾಡಿ ಸೆಪ್ಟೆಂಬರ್ 15ಕ್ಕೆ 40 ವರ್ಷಗಳು ಪೂರ್ಣಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ನಾವು ಮಹಿಳಾ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಸೌಮ್ಯ ರೆಡ್ಡಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆ, ಬ್ಲಾಕ್ ಹಾಗೂ ಹಳ್ಳಿಗಳ ಮಟ್ಟದಲ್ಲಿ ಈ ಅಭಿಯಾನ ಮಾಡಲು ತೀರ್ಮಾನಿಸಿದ್ದೇವೆ. ರಾಜ್ಯಾದ್ಯಂತ ಮಹಿಳೆಯರು ಮಹಿಳಾ ಕಾಂಗ್ರೆಸ್ ಸೇರಿ ಕೈ ಜೋಡಿಸಬೇಕು ಎಂದರು.

ಕಳೆದ ಹತ್ತು ವರ್ಷಗಳ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿವೆ. ಮಹಿಳೆಯರಿಗೆ ಸಿಗಬೇಕಾದ ಹಕ್ಕು, ಸ್ಥಾನಮಾನ ಹಾಗೂ ರಕ್ಷಣೆ ಸಿಗುತ್ತಿಲ್ಲ.

ದೇಶದಲ್ಲಿ ಮಹಿಳೆಯರಿಗೆ ರಾಜಕೀಯವಾಗಿ ಶೇ.33 ಮೀಸಲಾತಿ ನೀಡುವ ಮಸೂದೆ ಬಗ್ಗೆ ಚರ್ಚೆ ಆರಂಭವಾಗಿ 30 ವರ್ಷಗಳೇ ಕಳೆದಿವೆ. ಚುನಾವಣೆ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಮಸೂದೆ ಮಂಡನೆ ಮಾಡಿತು, ಇದನ್ನು ಆದಷ್ಟು ಬೇಗ ಜಾರಿಗೆ ತರಬೇಕು ಎಂದು ನಮ್ಮ ಮಹಿಳಾ ಕಾಂಗ್ರೆಸ್ ವತಿಯಿಂದ ನಾರಿ ನ್ಯಾಯ ಎಂಬ ಅಭಿಯಾನ ಆರಂಭಿಸಲಾಯಿತು ಎಂದು ಹೇಳಿದರು.

ಬೇರೆ ರಾಜ್ಯಗಳ ಚುನಾವಣೆ ಸಮೀಪಿಸುತ್ತಿದ್ದು ಆದಷ್ಟು ಬೇಗ ಇದನ್ನು ಜಾರಿಗೆ ತರಬೇಕು. ದೇಶದಲ್ಲಿ ಉನ್ನಾವೋ, ಕಥುವಾ, ಕೊಲ್ಕತ್ತಾದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ನೋಡಿದ್ದೇವೆ. ಪ್ರತಿ ಬಾರಿ ನಾವು ಹೋರಾಟ ಮಾಡುತ್ತೇವೆ ಎಂದರು.

ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ವೀಕ್ಷಕಿ ಶಿಲ್ಪಿ ಆರೋರಾ ಮಾತನಾಡಿ, ಭಾನುವಾರ ಮಹಿಳಾ ಕಾಂಗ್ರೆಸ್ ಸಂಸ್ಥಾಪನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರ ಭಾಗವಾಗಿ ದೇಶದೆಲ್ಲೆಡೆ ಸದಸ್ಯತ್ವ ನೋಂದಣಿ ಅಭಿಯಾನ ಆರಂಭವಾಗಲಿದೆ ಎಂದರು.

ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಈ ವೇಳೆ ಸದಸ್ಯತ್ವ ನೋಂದಣಿ ಜಾಲತಾಣ ಅನಾವರಣ ಮಾಡಲಾಗುವುದು. ಈ ಸದಸ್ಯತ್ವ ಪಡೆಯಲು 100 ರೂ. ಶುಲ್ಕ ನೀಡಬೇಕು. ಐದು ವರ್ಷಗಳ ಕಾಲ ಈ ಸದಸ್ಯತ್ವ ಜಾರಿಯಲ್ಲಿರುತ್ತದೆ. ಮೊದಲಬಾರಿಗೆ ಈ ಅಭಿಯಾನ ನಡೆಯುತ್ತಿದ್ದು, ನಾರಿ ನ್ಯಾಯಕ್ಕಾಗಿ ಮಹಿಳೆಯರು ಮಹಿಳಾ ಕಾಂಗ್ರೆಸ್ ಜತೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net