ಮರುಳುಶಂಕರದೇವನ ಮೂಲಕ ಶಿವಪ್ರಸಾದದ ಮಹತಿಯ ದರ್ಶನ

Published on
ಮಲ್ಲೇಪುರಂ ವೆಂಕಟೇಶ
ಮರುಳುಶಂಕರದೇವರು ಹನ್ನೆರಡು ವರ್ಷ ಪ್ರಸಾದದ ಕುಣಿಯಲ್ಲೇ ಇದ್ದುದರಿಂದ ತಲೆತುಂಬಾ, ಮುಖದ ತುಂಬಾ ಕೂದಲು ಬೆಳೆದಿತ್ತು. ಉಗುರು ಬೆಳೆದಿತ್ತು. ಆದರೆ, ಆತನ ಕಣ್ಣು ಮಾತ್ರ ದೇದೀಪ್ಯಮಾನವಾಗಿತ್ತು. ಅಲ್ಲಮಪ್ರಭುವನ್ನು ನೋಡಿದೊಡನೆ ‘ಕುಕಿಲಿರಿದು ಕುಂಬಿಟ್ಟು’ ಹೊರಗೆಬಂದನು. ಮರುಳುಶಂಕರದೇವನ ಈ ಚಿತ್ರ ಒಬ್ಬ ಅವಧೂತನ ಚರ್ಯುಯನ್ನು ನಮ್ಮ ಗಮನಕ್ಕೆ ತರುತ್ತದೆ. ಅವನು ನಿಜಭಕ್ತಿಯ ತವರು ಮನೆಯಾಗಿದ್ದ. ಚಾಮರಸ ಕವಿಯು ಮರುಳುಶಂಕರದೇವನ ಬಗೆಗೆ ಆಡಿರುವ ಮಾತುಗಳು ಹೀಗಿವೆ: ಅಲ್ಲಮಪ್ರಭು ಬರುತೆ ಕಾಣುತೆ  ಮೆಲ್ಲಮೆಲ್ಲನೆ ಬಂದು ತನುಮನ/ವೆಲ್ಲವನು ಕವಿದೊಕ್ಕು ಸಾಷ್ಟಾಂಗಪ್ರಣತನಾಗಿ/ಪಲ್ಲವಿಸಿ ಪರಿಣಾಮದ ಪಸರಣೆ | ಯಲ್ಲಿ ಹಿಗ್ಗುತೆ ಭಕ್ತಿಭಾವದ/ಭುಲ್ಲವಣೆಯಲಿ ಮರುಳುಶಂಕರದೇವನಿಂತೆಂದ (15-4)

ಮರುಳುಶಂಕರದೇವ ಅಲ್ಲಮನನ್ನು ಕಂಡೊಡನೆ ತನ್ನ ದೇಹ- ಮನಸ್ಸು ಎಲ್ಲವನ್ನು ಅವನಿಗೆ ಶಿರಸಾಷ್ಟಾಂಗ ಮಾಡುವ ಮೂಲಕ ಸಮರ್ಪಿಸಿಕೊಂಡನು. ಅಲ್ಲಮನನ್ನು ‘ಗುರುವೆ ಕಂಡೆನು. ಎನ್ನ ಭಾಗ್ಯದ ತರುವೆ ಕಂಡೆನು. ಎನ್ನ ಮುಕ್ತಿಯ ಸಿರಿಯ ಕಂಡೆನು. ಚಾಗು, ಮಝುು ಭಾಪು ಎನುತಲಿ ಅಡಿಗಡಿಗೆ ಕರಣಗಳು ಪರಿಣ ಮಿಸಿ ಹಷೋತ್ಕರದಲಿ ಹಾರೈಸಿ ಹೆಚ್ಚುತೆ’ ಸ್ತುತಿಸಿದನು. ಇದು ಅವಧೂತನೊಬ್ಬನ ಬಾಹ್ಯ ಮತ್ತು ಆಂತರಿಕ ಚರ್ಯುಯೇ ಸರಿ.

ಅಲ್ಲಮನು ಮರುಳುಶಂಕರದೇವನನ್ನು ಕಂಡೊಡನೆ ಕಲ್ಲಿನ ಮರೆಯಲ್ಲಿ ಚಿನ್ನವುಂಟು. ಎಳ್ಳಿನೊಳಗೆ ಎಣ್ಣೆಯುಂಟು, ನೆಲದ ಮರೆಯಲ್ಲಿ ಐಶ್ವರ್ಯವುಂಟು. ಮೂಢನ ವೇಷದ ಆಕಾರ ತಾಳಿದ ಶಂಕರನು ತನ್ನ ಅಂಗಣದಲ್ಲಿ ಇದ್ದರೂ ಆತನ ರೀತಿಯನ್ನು ಬಸವಣ್ಣ ತಿಳಿಯಲಿಲ್ಲವಲ್ಲಾ ಎಂದು ಅಚ್ಚರಿಗೊಂಡನು. ಆನಂತರ ಸಿದ್ಧರಾಮನ ಕಡೆ ತಿರುಗಿ ‘ಈ ಮತ್ತರ್್ಯಲೋಕದವರು, ಮರುಳುಶಂಕರನೆಂಬ ಹೆಸರಿನಲ್ಲಿ ಸಾಕ್ಷಾತ್ ಶಿವನೇ ಬಂದಿರುವಾಗ ಅದನ್ನು ತಿಳಿಯದೇ ಹೋದರು. ಸಾತ್ವಿಕಭಾವವನ್ನು ತಿಳಿಯದಾದರು’ ಎಂದು ಅಲ್ಲಮ ವ್ಯಥಿತಗೊಂಡನು. ಆನಂತರ ಸಿದ್ಧರಾಮಯ್ಯನಿಗೆ ‘ಯಾರು ಯಾವ ವೇಷದ ಮರೆಯಲ್ಲಿರುವರೋ ಮತ್ತು ಲಿಂಗದ ಬೆರಗಿನಲ್ಲಿ ಕಂಡವರ ಕಣ್ಣಿಗೆ ಹುಚ್ಚರಾಗಿರುವರೊ ಇದನ್ನು ನಾವು ತಿಳಿಯಬೇಕು. ಇದನ್ನು ಅರಿಯದಿದ್ದರೆ ‘ಭಕ್ತಿಸುಖ’ ಸುಮ್ಮನೆ ಲಭಿಸುತ್ತದೆಯೆ?’ ಎಂದು ನಸುನಗುತ್ತ ನುಡಿದನು. ಆಗ ಸಿದ್ಧರಾಮನು ‘ನಿನ್ನ ಕೃಪೆ ಭಕ್ತನಿಗೆ ಬೇಕು. ಅಂಥವನೇ ಯೋಗ್ಯ ಭಕ್ತ. ನಿನ್ನ ಕೃಪೆಯುಳ್ಳವನೆ ಮುಕ್ತ. ಇದು ಸತ್ಯ. ನಿನ್ನ ಕೃಪೆಯಿಲ್ಲದೆ ಇದ್ದರೆ ಭಕ್ತಿಯಿಂದೇನು ಫಲ? ನಿನ್ನ ಕರುಣೆಯೇ ಇವೆಲ್ಲಕ್ಕೂ ಕಾರಣ ಗುರುವೇ’ ಎಂದು ಕೈವಾರಿಸಿದನು.

ಮರುಳುಶಂಕರದೇವನು ಅಲ್ಲಮನ ಎದುರಿಗೆ ನಿಂತಿದ್ದಾನೆ. ಸುತ್ತಲು ಭಕ್ತರೆಲ್ಲರೂ ಅಚ್ಚರಿಯಿಂದ ನೋಡುತ್ತಿದ್ದಾರೆ. ಒಂದು ಕಡೆ ಬಸವಣ್ಣ, ಮತ್ತೊಂದು ಕಡೆ ಸಿದ್ಧರಾಮ. ಅವರ ಅಕ್ಕಪಕ್ಕದಲ್ಲಿ ಮಡಿವಾಳ ಮಾಚಿದೇವ, ಕಿನ್ನರಿಬೊಮ್ಮಯ್ಯ ಮುಂತಾದವರು ಅಲ್ಲಮ ನನ್ನು ದೃಷ್ಟಿಸುತ್ತಿದ್ದಾರೆ. ಆಗ ಅಲ್ಲಮ ಮರುಳುಶಂಕರದೇವನ ನಿಲುವನ್ನು ಕುರಿತು ಹೇಳುವ ವಚನವೊಂದು ಶೂನ್ಯಸಂಪಾದನೆಯಲ್ಲಿದೆ.

ಬೀದಿಯಲ್ಲಿ ಬಿದ್ದ ಮಾಣಿಕ್ಯವ, ಹೂಳಿದ್ದ ನಿಧಾನವ/ಯಾರಿಗೂ ಕಾಣಬಾರದು ನೋಡಾ./ಮರಣವುಳ್ಳವಂಗೆ ಮರುಜವಣಿ ಸಿಕ್ಕುವುದೆ?/ಪಾಪಿಯ ಕಣ್ಣಿಗೆ ಪರುಷ ಕಲ್ಲಾಗಿಪ್ಪಂತೆ ಇಪ್ಪರೆಯ್ಯಾ ಶರಣರು/ನಮ್ಮ ಗುಹೇಶ್ವರನ ಶರಣ ಮರುಳುಶಂಕರದೇವರ/ನಿಲುವ ನೋಡಾ ಸಂಗನ ಬಸವಣ್ಣಾ.

(ಶೂನ್ಯ ಸಂಪಾದನೆ ಪುಟ-97)

ಮರುಳುಶಂಕರದೇವನು ಭೇದವನ್ನು ಮುರಿದು ಅಭೇದದಲ್ಲಿ ಇದ್ದಾನೆ. ಭವಿಗಳಿಗೆ ಭೇದದ ರುಚಿ ಹೆಚ್ಚು. ಭಕ್ತರಿಗೆ ಅಭೇದವೇ ಹೊಕ್ಕು, ಅಲ್ಲಮನು ಮರುಳುಶಂಕರನ ನಿಜದ ನಿಲುವನ್ನು ಅಲ್ಲಿದ್ದ ಸಮಸ್ತ ಭಕ್ತರಿಗೂ ತಿಳಿಸಿಕೊಟ್ಟನು. ಚಾಮರಸನ ಪದ್ಯವೊಂದು ಮರುಳುಶಂಕರದೇವರ ಶಿವಪ್ರಸಾದದ ಮರ್ಮವನ್ನು ತಿಳಿಸಿಕೊಡುತ್ತದೆ. ‘ಮರುಳು ಶಂಕರದೇವನು ಲಿಂಗಪ್ರಸಾದ ಪ್ರೇಮಿ. ಈತ ಮಹಾತ್ಮ. ಕೇಳುವ, ನೋಡುವ, ರುಚಿಸುವ, ಲೀಲೆಯಿಂದಲೇ ವಾಸನೆ ಗ್ರಹಿಸುವ, ಕೆಟ್ಟ ವಿಷಯಗಳ ಮೇಲಿನ ಉತ್ಸಾಹವನ್ನು ನಿವಾರಿಸಿ ಶಾಂತನಾಗಿ ಬದುಕಿರಲು ನಿರ್ಬಾಧಕವಾದ ಪ್ರಸಾದವಿದು ಎಂದು ಈತ ತಿಳಿದಿದ್ದಾನೆ. ಹೀಗಾಗಿ, ಶಿವಪ್ರಸಾದದ ಕುಳಿಯಲ್ಲಿದ್ದು ಎದ್ದು ಬಂದಿದ್ದಾನೆ’ಂದು ಅಲ್ಲಮ ಶಿವಭಕ್ತರಿಗೆ ತಿಳಿಸಿಕೊಟ್ಟನು.

ಅಲ್ಲಮಪ್ರಭುವು ಮರುಳುಶಂಕರದೇವನನ್ನು ಸಮೀಪಕ್ಕೆ ಕರೆದುಕೊಂಡನು. ಅವನ ಗುಪ್ತಭಕ್ತಿಯ ನಿಲುವನ್ನು ಅಲ್ಲಿದ್ದ ಸಮಸ್ತ ಭಕ್ತರಿಗೂ ತೋರಿಸಿಕೊಟ್ಟನು. ಗುಪ್ತಭಕ್ತಿಯು ಅಪ್ರಕಟಿತರೂಪ. ಮರುಳುಶಂಕರದೇವನಿಗೆ ತನ್ನ ಗುಪ್ತಭಕ್ತಿಯನ್ನು ಲೋಕಕ್ಕೆ ತಿಳಿಸುವ ಯಾವ ಬಯಕೆಯೂ ಇರಲಿಲ್ಲ. ಆದರೆ, ಅಲ್ಲಮನಿಗೆ ಅಲ್ಲಿದ್ದ ಸಮಸ್ತ ಶರಣರಿಗೂ ತೋರಿಸಬೇಕಿತ್ತು. ಆದುದರಿಂದ, ಮರುಳುಶಂಕರದೇವನ ಮೂಲಕ ಶಿವಪ್ರಸಾದದ ಮಹತಿಯನ್ನು ಲೋಕಕ್ಕೆ ಅಲ್ಲಮ ತೋರಿಸಿದ. ಇದನ್ನೆಲ್ಲ ಕಂಡ ಬಸವಣ್ಣ ಅಲ್ಲಮನ ಮಾತಿಗೆ ತಲೆ ಬಾಗಿದ. ಮರುಳುಶಂಕರದೇವರಿಗೆ ಅಲ್ಲಮನು ಮೋಕ್ಷಪದವಿಯ ನೆಲೆಯನ್ನು ತೋರಿಸಿಕೊಟ್ಟ. ಆಗ ಅಲ್ಲಿದ್ದವರು ಅಲ್ಲಮನ ನಿಲುವನ್ನು ಕಂಡು ಬೆರಗುಗೊಂಡರು.

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

(ಪ್ರತಿಕ್ರಿಯಿಸಿ: vvsudina@gmail.com, mallepuram@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net