

ನವದೆಹಲಿ: ಮಹಾರಾಷ್ಟ್ರದ ಪ್ರಭಾವಿ ಮರಾಠ ಸಮುದಾಯಕ್ಕೆ ಸಾರ್ವಜನಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಮೀಸಲಾತಿ ಹೆಚ್ಚಳ ಮಾಡುವ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಮಹಾರಾಷ್ಟ್ರ ರಾಜ್ಯ ಮೀಸಲಾತಿ ಕಾಯ್ದೆ-2018ನ್ನು ಸುಪ್ರೀಂಕೋರ್ಟ್ ಅಸಿಂಧುಗೊಳಿಸಿ ರದ್ದುಪಡಿಸಿದೆ.
ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರ ಜಾರಿಮಾಡಿದ್ದ ಈ ಕಾನೂನನ್ನು ಸುಪ್ರೀಂಕೋರ್ಟ್ನಲ್ಲಿ ಹಾಲಿ ಕೇಂದ್ರ ಸರ್ಕಾರವೂ ಬೆಂಬಲಿಸಿತ್ತು. ಆದರೆ, ಈ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲು ವಿಶೇಷ ಕಾರಣಗಳಿಲ್ಲ ಮತ್ತು ಮೀಸಲಾತಿ ಏಕೆ ನೀಡಬೇಕೆಂಬ ಬಗ್ಗೆ ರಾಜ್ಯ ಸರ್ಕಾರ ನ್ಯಾಯಪೀಠವನ್ನು ತೃಪ್ತಿಪಡಿಸಲು ವಿಫಲವಾಗಿದೆ ಎಂದು ಸಾಂವಿಧಾನಿಕ ಪೀಠ ತನ್ನ ತೀರ್ಪನ್ನು ಸಮರ್ಥಿಸಿಕೊಂಡಿದೆ. ವಿವಿಧ ರಾಜ್ಯಗಳು ಶೇ.50 ಮಿತಿಯನ್ನು ಮೀರಿ ಮೀಸಲಾತಿ ಕಲ್ಪಿಸಲು ಒಲವು ತೋರುತ್ತಿರುವ ಈ ಕಾಲಘಟ್ಟದಲ್ಲಿ ಈ ತೀರ್ಪು ಮಹತ್ವ ಪಡೆದಿದೆ.
1992ರಲ್ಲಿ ಇಂದಿರಾ ಸಾವನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನಿಗದಿಪಡಿಸಿದ ಶೇ.50ರ ಮೀಸಲಾತಿ ಮಿತಿಯನ್ನು ದಾಟುವಂತಿಲ್ಲ ಎಂದು ಹೇಳಿದ್ದ ಅಭಿಪ್ರಾಯದ ಮರುಪರಿಶೀಲನೆಗೆ ಹಿಂದೇಟು ಹಾಕಿದ ನ್ಯಾಯಪೀಠ, ಶೇ.50ನ್ನು ದಾಟಿ ಮರಾಠ ಸಮುದಾಯಕ್ಕೆ ಮೀಸಲಾತಿ ಒದಗಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಮಹಾರಾಷ್ಟ್ರದ ಕಾಯ್ದೆಯು ಸಂವಿಧಾನದ 14 ಮತ್ತು 15ನೇ ವಿಧಿಗಳನ್ನು ಉಲ್ಲಂಘಿಸುತ್ತದೆ ಎಂದ ನ್ಯಾಯಪೀಠ, 1992ರ ತೀರ್ಪನ್ನು ಉಲ್ಲೇಖಿಸಿಯೇ ಸುಪ್ರೀಂಕೋರ್ಟ್ ಕನಿಷ್ಠ ಮೂರ್ನಾಲ್ಕು ಪ್ರಕರಣಗಳಲ್ಲಿ ಮಹತ್ವದ ತೀರ್ಪಗಳನ್ನು ಪ್ರಕಟಿಸಿದೆ ಎಂದು ತಿಳಿಸಿತು.
ಮರಾಠರಿಗೆ ಮೀಸಲಾತಿ ನೀಡುವುದನ್ನು ಬೆಂಬಲಿಸಿ ರಾಜ್ಯದ ಗಾಯಕ್ವಾಡ್ ಆಯೋಗ ವರದಿ ನೀಡಿತ್ತಲ್ಲದೆ, ರಾಜ್ಯ ಸರ್ಕಾರದ ಮೀಸಲಾತಿ ಕ್ರಮವನ್ನು 2019ರಲ್ಲಿ ಬಾಂಬೆ ಹೈಕೋರ್ಟ್ ಕೂಡ ಪುರಸ್ಕರಿಸಿತ್ತು. ಆದರೆ ಮರಾಠರಿಗೆ ಶೇ.16 ಮೀಸಲಾತಿ ನೀಡುವುದನ್ನು ವಿರೋಧಿಸಿ ಶಿಕ್ಷಣ ಕ್ಷೇತ್ರದಲ್ಲಿ ಶೇ.13 ಮತ್ತು ಉದ್ಯೋಗ ಕ್ಷೇತ್ರದಲ್ಲಿ ಶೇ.12ರಷ್ಟು ಮೀಸಲಾತಿ ಮಿತಿಯನ್ನು ನಿಗದಿಪಡಿಸಿತ್ತು. ಕಳೆದ ಮಾ.26ರಂದು ಪ್ರಕರಣದ ಅಂತಿಮ ತೀರ್ಪನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿತ್ತು.
ಈ ಪ್ರಕರಣದ ವಿಚಾರಣೆಯೊಂದರ ವೇಳೆ, ‘ಇನ್ನೆಷ್ಟು ತಲೆಮಾರುಗಳವರೆಗೆ ಕಾಲ ನೀವು ಈ ಮೀಸಲಾತಿಯನ್ನು ಮುಂದುವರಿಸಬೇಕೆಂದು ಬಯಸಿದ್ದೀರಿ? ಇದೊಂದು ತಾತ್ಕಾಲಿಕ ಕ್ರಮವಾಗಿತ್ತು ಎಂಬುದು ತಿಳಿದಿಲ್ಲವೇ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು.