ಲೇಡಿ ಸಿಂಗಮ್​ ಖ್ಯಾತಿಯ ಮಹಿಳಾ ಅಧಿಕಾರಿ ಆತ್ಮಹತ್ಯೆ: ಡೆತ್​ನೋಟ್​ನಲ್ಲಿ ಅಧಿಕಾರಿಯ ಕರಾಳ ಮುಖ ಬಯಲು!

Lady Singham
Published on

ಅಮರಾವತಿ: ಮಹಾರಾಷ್ಟ್ರದ ಲೇಡಿ ಸಿಂಗಮ್​ ಖ್ಯಾತಿಯ ಮಹಿಳಾ ಶ್ರೇಣಿ ಅರಣ್ಯ ಅಧಿಕಾರಿ ದೀಪಾಲಿ ಚೌಹಾಣ್​ ಮೊಹೈತ್​ ಅವರ ಮೃತದೇಹವು ಆತ್ಮಹತ್ಯೆ ಮಾಡಿಕೊಂಡಿರುವ ಪತ್ತೆಯಾಗಿದೆ.

ದೀಪಾಲಿ ಅವರನ್ನು ಮಹಾರಾಷ್ಟ್ರದ ಮೆಲ್ಘಟ್​ ಹುಲಿ ಸಂರಕ್ಷಿತಾರಣ್ಯ (ಎಂಆರ್​ಟಿ) ಕ್ಕೆ ಪೋಸ್ಟಿಂಗ್​ ಮಾಡಲಾಗಿತ್ತು. ಅಧಿಕಾರಿ ಮೂಲಗಳ ಪ್ರಕಾರ ಡೆತ್​ನೋಟ್​ ಸಹ ಪತ್ತೆಯಾಗಿದ್ದು, ಭಾರತೀಯ ಅರಣ್ಯಾಧಿಕಾರಿ (ಐಎಫ್​ಎಸ್​)ಯ ಲೈಂಗಿಕ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಉಲ್ಲೇಖಿಸಿದ್ದಾರೆನ್ನಲಾಗಿದೆ.

28 ವರ್ಷದ ಆರ್​ಎಫ್​ಒ ದೀಪಾಲಿ ಅವರು ಹರಿಸಾಲ್​ ಗ್ರಾಮದಲ್ಲಿರುವ ಹೆಡ್​ಕ್ವಾಟ್ರಸ್​ನಲ್ಲಿ ತಮ್ಮ ಸರ್ವೀಸ್​ ರಿವಾಲ್ವರ್​ನಿಂದ ನಿನ್ನೆ ರಾತ್ರಿ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. ಇದಾದ ಬಳಿಕ ದೀಪಾಲಿ ಅವರು ಸಂಬಂಧಿಕರು ಆಕೆಯ ಮೃತದೇಹ ಮತ್ತು ಪಕ್ಕದಲ್ಲಿ ರಿವಾಲ್ವರ್​ ಬಿದ್ದಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ಮುಟ್ಟಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಆತ್ಮಹತ್ಯೆ ಘಟನೆಯ ಬಗ್ಗೆ ಕೇಳಿದಾಗ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್, ಈ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿ ಹೇಳಿದರು. ಯಾವುದೇ ತಪ್ಪಿತಸ್ಥರನ್ನು ಬಿಡಲಾಗುವುದಿಲ್ಲ ಎಂದರು.

ಇನ್ನು ಆತ್ಮಹತ್ಯೆ ಸಮಯದಲ್ಲಿ ದೀಪಾಲಿ ಅವರ ತಾಯಿ ಸತಾರಾದಲ್ಲಿದ್ದರು ಮತ್ತು ಆಕೆಯ ಪತಿ ಕೆಲಸದಲ್ಲಿದ್ದರು. ಡೆತ್​ನೋಟ್​ನಲ್ಲಿ ಉಲ್ಲೇಖವಾಗಿರುವ ಆರೋಪಿ ವಿರುದ್ಧ ಕ್ರಮ ತೆಗೆದುಕೊಳ್ಳುವವರೆಗೂ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ದೀಪಾಲಿ ಸಂಬಂಧಿಕರು ಒತ್ತಾಯಿಸಿದರು.

ಹೀಗಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿನೋದ್ ಶಿವಕುಮಾರ್​ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರ ಹೆಸರು ದೀಪಾಲಿ ಅವರ ಡೆತ್​ನೋಟ್​ನಲ್ಲಿ ಉಲ್ಲೇಖವಾಗಿತ್ತು. ನಾಗ್ಪುರ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಅಮರಾವತಿ ಗ್ರಾಮೀಣ ಪೊಲೀಸ್​ ವರಿಷ್ಠಾಧಿಕಾರಿ ಡಾ. ಹರಿ ಬಾಲಾಜಿ ಎನ್​ ಮಾಹಿತಿ ನೀಡಿದ್ದಾರೆ. ಶಿವಕುಮಾರ್​ ಅವರು ಬೆಂಗಳೂರಿಗೆ ಹೋಗಲು ರೈಲು ನಿಲ್ದಾಣದಲ್ಲಿ ಇರುವಾಗ ವಶಕ್ಕೆ ಪಡೆಯಲಾಗಿದೆ.

ಕಳೆದ ಕೆಲವು ತಿಂಗಳಿಂದ ಶಿವಕುಮಾರ್, ದೀಪಾಲಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರಂತೆ. ಇದ ಆಕೆಯ ಮಾನಸಿಕ ಹಿಂಸೆಗೆ ಕಾರಣವಾಗಿತ್ತು ಎಂದು ಡೆತ್​ನೋಟ್​ನಲ್ಲಿ ಉಲ್ಲೇಖವಾಗಿದೆ. ಅಂದಹಾಗೆ ದೀಪಾಲಿ ಅವರು 2013ರಲ್ಲಿ ಮಹಾರಾಷ್ಟ್ರ ಸರ್ಕಾರ ಸೇವೆಗೆ ಆಯ್ಕೆಯಾಗಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net