

ಚಂದ್ರಾಪುರ್: ಸಣ್ಣಸಣ್ಣ ವಿಚಾರಗಳಿಗೆ ಹದಿಹರೆಯದ ಯುವಕರು ಆತ್ಮಹತ್ಯೆ ಮಾಡಿಕೊಳ್ಳುವುದು ಇತ್ತೀಚೆಗೆ ಸಾಮಾನ್ಯ ಆಗಿಬಿಟ್ಟಿದೆ. ಮಹಾರಾಷ್ಟ್ರದ 18ವರ್ಷದ ಯುವಕನೋರ್ವ ಆನ್ಲೈನ್ ಶಾಪಿಂಗ್ನಲ್ಲಿ 15,000 ರೂಪಾಯಿ ಕಳೆದುಕೊಂಡಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಚಿಮೂರ್ ತಹಸಿಲ್‌ನ ಪುಯುರ್ದಂದ್ನ ನಿವಾಸಿ ರೋಹಿತ್ ರಾಜೇಂದ್ರ ಜಂಭುಲೆ ಎಂಬಾತ ಆನ್ಲೈನ್ನಲ್ಲಿ ಸ್ಮಾರ್ಟ್ಫೋನ್ ಆರ್ಡರ್ ಮಾಡಲು ಹೋಗಿ 15,000 ರೂಪಾಯಿ ಕಳೆದುಕೊಂಡಿದ್ದ. ಈತ ಬಡಕುಟುಂಬದವನಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ವಿದ್ಯಾಭ್ಯಾಸಕ್ಕಾಗಿ ಮೊಬೈಲ್ ಖರೀದಿಗೆ ಮುಂದಾಗಿದ್ದ. ಹಣ ಅನ್ಯಾಯವಾಗಿ ಕಳೆದುಹೋಗಿದ್ದರಿಂದ ಶಾಕ್ ಆಗಿದ್ದ. ಇದೇ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಷ್ಟಪಟ್ಟು ಹಣ ಸಂಗ್ರಹಿಸಿದ ಆನ್ಲೈನ್ನಲ್ಲಿ ಒಂದು ಒಳ್ಳೆ ಮೊಬೈಲ್ ಆರ್ಡರ್ ಮಾಡಿದ್ದ. ಬಾಕ್ಸ್ ಸ್ಥಳೀಯ ಪೋಸ್ಟ್ ಆಫೀಸ್ಗೆ ಬಂದಿತ್ತು. ಅಮ್ಮನೊಂದಿಗೆ ಹೋಗಿ ಅದನ್ನು ತೆಗೆದುಕೊಂಡು ಬಾಕ್ಸ್ ತೆರೆದಾಗ ಶಾಕ್ ಕಾದಿತ್ತು. ಅದರಲ್ಲಿ ಮೊಬೈಲ್ ಬದಲು ಎರಡು ಪರ್ಸ್ಗಳು, ಬೆಲ್ಟ್ ಇತ್ತು. ಈತ ಕೊಟ್ಟಿದ್ದ 15,000 ರೂ. ಅನ್ಯಾಯವಾಗಿ ಹಾಳಾಗಿತ್ತು.
ಲಭ್ಯವಿದ್ದ ಮೊಬೈಲ್ ನಂಬರ್ಗೆ ಆತ ಕರೆ ಮಾಡಿದರೆ, ಅದು ಕನೆಕ್ಟ್ ಆಗಲಿಲ್ಲ. ಇದರಿಂದ ತೀವ್ರವಾಗಿ ಮನನೊಂದಿದ್ದ ಯುವಕ ಗುರುವಾರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅವನ ಶವ ಶುಕ್ರವಾರ ಪತ್ತೆಯಾಗಿದೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)