

ನವದೆಹಲಿ: ಕೋವಿಡ್ ನಿಯಂತ್ರಣಕ್ಕೆ ಬರುವ ತನಕ ಶೈಕ್ಷಣಿಕ ಚಟುವಟಿಕೆಗಳ ಮರು ಆರಂಭ ಕಷ್ಟ ಸಾಧ್ಯ. ಪರಿಸ್ಥಿತಿ ಸುಧಾರಿಸಬಹುದು ಎಂಬ ನಿರೀಕ್ಷೆಯಲ್ಲಿ ಘೊಷಿಸಲಾಗಿದ್ದ ಪ್ರವೇಶ, ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆಗಳನ್ನು ಮುಂದೂಡಲಾಗುತ್ತಿದೆ.
ಆದರೆ, ಅಂತಿಮ ವರ್ಷದ ಅಥವಾ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಬೇಕು ಎಂದು ಯುಜಿಸಿ ಈಗಾಗಲೇ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದೆ. ಈಗ ಪರೀಕ್ಷೆ ಹಾಜರಾಗಲು ಸಾಧ್ಯವಿಲ್ಲದವರಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ತಿಳಿಸಿದೆ.
ಆದರೆ, ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದಾಗಿ ಅಂತಿಮ ವರ್ಷದ ಪರೀಕ್ಷೆಗಳನ್ನೂ ಕೂಡ ಮಹಾರಾಷ್ಟ್ರ ಸರ್ಕಾರ ರದ್ದುಗೊಳಿಸಿದೆ. ಸಿಎಂ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ನಡೆದ ವಿಪತ್ತು ನಿರ್ವಹಣಾ ಸಮಿತಿ ಸಬೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಇನ್ನೆರಡು ತಿಂಗಳಲ್ಲಿ ಪರೀಕ್ಷೆ ನಡೆಸಿ ಎಂಬ ಯುಜಿಸಿ ನಿರ್ದೇಶನದ ಬಳಿಕವೂ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸದಿರಲು ರಾಜ್ಯ ಸರ್ಕಾರ ಮತ್ತೊಮ್ಮೆ ನಿರ್ಧಾರ ಕೈಗೊಂಡಿದೆ. ಕೋವಿಡ್ ಸಂಕಷ್ಟದ ಸಮಯದಲ್ಲಿ 5-6 ಲಕ್ಷ ವಿದ್ಯಾರ್ಥಿಗಳನ್ನು ಅಪಾಯಕ್ಕೆ ತಳ್ಳಲು ಸಾಧ್ಯವಿಲ್ಲ ಎಂದು ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಸಚಿವ ಉದಯ್ ಸಮಂತ್ ತಿಳಿಸಿದ್ದಾರೆ.
ಪಂಜಾಬ್ನಲ್ಲೂ ಈಗಾಗಲೇ ಪರೀಕ್ಷೆ ನಡೆಸದಿರುವ ನಿರ್ಧಾರ ಕೈಗೊಳ್ಳಲಾಗಿದೆ. ಕರ್ನಾಟಕದಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆ ತಿಳಿಸಿದ್ದರೂ, ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ಇದು ಸಾಧ್ಯವೇ ಎಂಬುದು ಅನಿಶ್ಚಿತವಾಗಿದೆ.