ಮಹಾರಾಷ್ಟ್ರ: ಬಿಸ್ಕತ್ ತಿಂದು 250ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ! ಅಷ್ಟಕ್ಕೂ ಆ ಶಾಲೆಯಲ್ಲಿ ಆಗಿದ್ದೇನು?

biscuts
Published on

ಮುಂಬೈ: ಪೌಷ್ಟಿಕ ಆಹಾರ ಕಾರ್ಯಕ್ರಮದ ಭಾಗವಾಗಿ ನೀಡಲಾದ ಶಾಲಾ ವಿದ್ಯಾರ್ಥಿಗಳಿಗೆ ನೀಡಿದ ಬಿಸ್ಕತ್‌ ಸೇವಿಸಿದ ಪರಿಣಾಮ 257ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆಸ್ಪತ್ರೆ ಸೇರಿದ ಘಟನೆ ನಡೆದಿದೆ.

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ಜಿಲ್ಲಾ ಕೌನ್ಸಿಲ್ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಸಂಭಾಜಿ ನಗರದ ಪೈಠಾಣ್ ತಹಸಿಲ್‌ನ ಕೇಕತ್ ಜಲಗಾಂವ್‌ನಲ್ಲಿರುವ ಜಿಲ್ಲಾ ಪರಿಷತ್‌ ಶಾಲೆಯಲ್ಲಿ ಶನಿವಾರ ಸುಮಾರು 257 ಮಕ್ಕಳ ಆರೋಗ್ಯ ಹದಗೆಟ್ಟಿದೆ. ಎಲ್ಲರಿಗೂ ಪೌಷ್ಟಿಕ ಆಹಾರವಾಗಿ ಬಿಸ್ಕತ್ ನೀಡಲಾಗಿದೆ.

ಬಿಸ್ಕತ್‌ ಸೇವಿಸಿದ ನಂತರ ಮಕ್ಕಳಿಗೆ ವಾಕರಿಕೆ ಮತ್ತು ವಾಂತಿ ಕಾಣಿಸಿಕೊಂಡಿದೆ. ಇದರ ನಂತರ, ಇದ್ದಕ್ಕಿದ್ದಂತೆ ಇತರ ಅನೇಕ ಮಕ್ಕಳ ಆರೋಗ್ಯವು ಹದಗೆಡಲು ಪ್ರಾರಂಭಿಸಿತು. ಸ್ವಲ್ಪ ಸಮಯದ ನಂತರ, ಶಾಲೆಯ ಬಹುತೇಕ ಎಲ್ಲಾ ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಗ್ರಾಮದ ಮುಖ್ಯಸ್ಥರು ತಕ್ಷಣ ವಾಹನದ ವ್ಯವಸ್ಥೆ ಮಾಡಿ ವಿದ್ಯಾರ್ಥಿಗಳನ್ನು ನಗರದ ಆಸ್ಪತ್ರೆಗೆ ದಾಖಲಿಸದ್ದಾರೆ. ಶನಿವಾರ ಬೆಳಗ್ಗೆ ಸುಮಾರು 8:30ಕ್ಕೆ ವಿದ್ಯಾರ್ಥಿಗಳನ್ನ ಆಸ್ಪತ್ರೆಗೆ ದಾಖಲಿಸಲಾಯಿತು. 257 ವಿದ್ಯಾರ್ಥಿಗಳಲ್ಲಿ ಫುಡ್ ಪಾಯಿಸನ್ ಆಗಿತ್ತು. ಅದರಲ್ಲಿ 153 ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ. 7 ವಿದ್ಯಾರ್ಥಿಗಳ ಸ್ಥಿತಿ ಗಂಭೀರವಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಛತ್ರಪತಿ ಶಂಭಾಜಿನಗರದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ನಗರದ ವೈದ್ಯಾಧಿಕಾರಿ ಡಾ. ಬಾಬಾಸಾಹೇಬ್ ಘುಘೆ ತಿಳಿಸಿದ್ದಾರೆ.

ಶಾಲೆಯಲ್ಲಿ ಒಟ್ಟು 296 ವಿದ್ಯಾರ್ಥಿಗಳಿದ್ದಾರೆ. ಸದ್ಯ ಪ್ರಕರಣ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಶಾಲಾ ವಿದ್ಯಾರ್ಥಿಗಳಿಗೆ ಫುಡ್ ಪಾಯ್ಸನ್ ಆದ ಬಳಿಕ ಛತ್ರಪತಿ ಸಂಭಾಜಿ ನಗರ ಸಂಸದ ಸಂದೀಪನ್ ಬುಮ್ರೆ ಭಾನುವಾರ ಬೆಳಗ್ಗೆ ಸಿವಿಲ್ ಆಸ್ಪತ್ರೆಗೆ ಮಕ್ಕಳನ್ನು ಭೇಟಿ ಮಾಡಿ ಮಕ್ಕಳ ಆರೋಗ್ಯದ ಕುರಿತು ವೈದ್ಯರೊಂದಿಗೆ ಮಾತನಾಡಿದರು. ಇದಾದ ನಂತರ ವೈದ್ಯರು ಮಕ್ಕಳ ಸ್ಥಿತಿ ಚೆನ್ನಾಗಿದೆ. ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಸಂಸದ ಸಂದೀಪನ ಬುಮ್ರೆ ವಿದ್ಯಾರ್ಥಿಗಳ ಪೋಷಕರೊಂದಿಗೆ ಮಾತನಾಡಿ ಅವರ ಮಕ್ಕಳು ಚೆನ್ನಾಗಿದ್ದಾರೆ ಎಂದು ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net