

ಸಂಕೀರ್ತನೆಯ ಮೂಲಕ ಭಕ್ತಿಪ್ರವಾಹಕ್ಕೆ ಹೊಸ ದಿಕ್ಕು ಮತ್ತು ವೇಗವನ್ನು ಕೊಟ್ಟ ಚೈತನ್ಯ ಮಹಾಪ್ರಭುಗಳು 48ನೆಯ ವಯಸ್ಸಿನಲ್ಲಿ ಅವತಾರವನ್ನು ಪರಿಸಮಾಪ್ತಿಗೊಳಿಸಿದರು. ಪುರಿಯಲ್ಲಿರುವ ತೋಟ-ಗೋಪಿನಾಥ ಮಂದಿರದ ಗರ್ಭಗುಡಿಯಲ್ಲಿ ಅವರು ಕೃಷ್ಣನ ವಿಗ್ರಹದೊಂದಿಗೆ ಲೀನರಾಗಿ ಅದೃಶ್ಯರಾದರು. ಚೈತನ್ಯರ ಲೀಲೆಗಳು ಅಸಂಖ್ಯ, ಅವರ ಭಕ್ತರೂ ಅಸಂಖ್ಯ.
ಪೌರತ್ವ ತಿದ್ದುಪಡಿ ಕಾಯಿದೆಯ (ಸಿಎಎ) ವಿರುದ್ಧ ಪ್ರತಿಭಟನೆಗಳು ದೆಹಲಿಯನ್ನು ಆವರಿಸಿರುವ ಸಮಯದಲ್ಲಿ, ಹಾಡುಹಗಲೇ ವ್ಯಕ್ತಿಯೊಬ್ಬ ಪಿಸ್ತೂಲ್ ತೋರಿಸಿ ಪೊಲೀಸರನ್ನು ಹೆದರಿಸಲು ಪ್ರಯತ್ನಿಸಿದ. ಮತ್ತೊಂದು ಘಟನೆಯಲ್ಲಿ, ಮೌಜ್ಪುರ ಪ್ರದೇಶದಲ್ಲಿ ಸಿಎಎ ಬೆಂಬಲಿಗರು ಮತ್ತು ವಿರೋಧಿಗಳು ಮಾರಕ ಶಸ್ತ್ರಾಸ್ತ್ರಗಳಿಂದ ಬಡಿದಾಡಿಕೊಂಡರು. ಈಶಾನ್ಯ ದೆಹಲಿಯ ಅನೇಕ ಪ್ರದೇಶಗಳಲ್ಲಿ ಕಲ್ಲುತೂರಾಟ, ವಾಹನ ಮತ್ತು ಅಂಗಡಿ-ಮುಂಗಟ್ಟುಗಳಿಗೆ ಬೆಂಕಿ, ಸಾರ್ವಜನಿಕ ಆಸ್ತಿ-ಪಾಸ್ತಿ ಧ್ವಂಸ ಹಾಗೂ ಇನ್ನಿತರ ಹಿಂಸಾಕಾರ್ಯಗಳು ನಡೆದವು. ಪರಿಣಾಮ, 50ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರೆ 200ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಈ ಗಲಭೆಗಳು ಮತ್ತು ತತ್ಸಂಬಂಧಿತ ಹಿಂಸಾಕಾರ್ಯಗಳು ಸಾಮಾನ್ಯ ನಾಗರಿಕನ ದೈನಂದಿನ ಜೀವನವನ್ನು ಶೋಚನೀಯವಾಗಿಸುತ್ತವೆ. ಅಹಿಂಸಾತ್ಮಕ ವಿಧಾನಗಳಿಂದ ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಪಡೆದ ಭಾರತದಲ್ಲಿ ಈ ಹಿಂಸಾಘಟನೆಗಳು ಕಾಲಕಾಲಕ್ಕೆ ನಡೆಯುತ್ತಲೇ ಇರುತ್ತವೆ. ನೋಡಿ ಕಾಲಪ್ರಭಾವ!
ಸಮಾನತೆ, ನ್ಯಾಯಪರತೆ ಮತ್ತು ನಿಷ್ಪಕ್ಷಪಾತ- ಇವು ಪ್ರತಿಯೊಬ್ಬ ಮಾನವನ ಸ್ವಾಭಾವಿಕ ಆಸೆಗಳು. ಆದರೆ ಪ್ರಸ್ತುತ ಸಮಾಜದಲ್ಲಿ, ಈ ಗುಣಗಳು ಇವೆಯೇ ಮತ್ತು ಹಾಗೊಂದು ಪಕ್ಷದಲ್ಲಿ ಇದ್ದರೂ ಸಾಕಾಗುವಷ್ಟು ಇವೆಯೇ ಎಂಬುದೇ ಪ್ರಶ್ನೆ. ವೇದಗಳು ತಿಳಿಸುವಂತೆ ಭೌತಿಕ ಸ್ತರದಲ್ಲಿ ಮಾನವರೆಲ್ಲರ ನಿಜವಾದ ಸಮಾನತೆ ಆಕಾಶಪುಷ್ಪವೇ ಸರಿ, ಅದು ಸಾಧ್ಯವಿರುವುದು ಆಧ್ಯಾತ್ಮಿಕ ವೇದಿಕೆಯಲ್ಲಿ ಮಾತ್ರ. ಈ ಆಧ್ಯಾತ್ಮಿಕ ಸಮಾನತೆಯನ್ನು ಜಗತ್ತಿಗೆ ಸಾರಿದವರು 15ನೇ ಶತಮಾನದ ಮಹಾನ್ ವೈಷ್ಣವ ಸಂತ, ದಾರ್ಶನಿಕ, ಸಮಾಜ ಸುಧಾರಕ, ಸಂಕೀರ್ತನ ಚಳವಳಿಯ ಹರಿಕಾರ, ಚೈತನ್ಯ ಮಹಾಪ್ರಭುಗಳು. ಅವರ ಬೋಧನೆಗಳು, ಧರ್ಮ, ಭಾಷೆ, ರಾಷ್ಟ್ರೀಯತೆ, ಜನಾಂಗ, ಸಮುದಾಯ, ಜಾತಿ ಮುಂತಾದ ಯಾವುದೇ ಭೇದಭಾವಗಳಿಲ್ಲದೆ ಸರ್ವರಿಗೂ ಅನ್ವಯ ಮತ್ತು ಉನ್ನತ ಜ್ಞಾನ ಹಾಗೂ ಸಂತೋಷವನ್ನು ಹೊಂದಬಹುದು. ಅವರ ಸಮಾನದೃಷ್ಟಿಗೆ ಒಂದು ಸರಳ ಉದಾಹರಣೆಯೆಂದರೆ, ಒಬ್ಬ ಮುಸ್ಲಿಂಗೆ ಸಹ ತಮ್ಮ ನಿಕಟ ಅನುವರ್ತಿಯಾಗಲು ಅವಕಾಶವಿತ್ತು ಅವರನ್ನು ಆಚಾರ್ಯರ ಮಟ್ಟಕ್ಕೆ ಬೆಳೆಸಿದರು. ಅವರೇ ಶ್ರೀಲ ಹರಿದಾಸ್ ಠಾಕೂರರು.
ಶ್ರೀ ಚೈತನ್ಯ ಮಹಾಪ್ರಭುಗಳು ಸಂಕೀರ್ತನ ಪ್ರಕ್ರಿಯೆಯನ್ನು ಭಾರತದಾದ್ಯಂತ ಜನಪ್ರಿಯಗೊಳಿಸಿದ ಶ್ರೇಷ್ಠ ಭಕ್ತರು. ‘ಸಂಕೀರ್ತನ’ ಎನ್ನುವುದು ಸಂಸ್ಕೃತ ಪದ; ಸಂಸ್ಕೃತದಲ್ಲಿ, ಸಮ್ ಎಂದರೆ ಸಮ್ಯಕಾ ‘ಸಂಪೂರ್ಣ’ ಎಂದರ್ಥ. ಮತ್ತು ಕೀರ್ತನ ಎಂದರೆ ‘ಶ್ಲಾಘಿಸುವುದು’ ಅಥವಾ ‘ವರ್ಣಿಸುವುದು’. ಸಂಕೀರ್ತನೆಯ ಅರ್ಥ ಜನರ ಸಾಮೂಹಿಕ ಕೀರ್ತನೆ. ಯಾವುದೇ ಪೂರ್ವಾರ್ಹತೆಯಿಲ್ಲದೆಯೇ ಎಲ್ಲ ಜನರು ಇದರಲ್ಲಿ ಪಾಲ್ಗೊಳ್ಳಬಹುದು. ಅಲ್ಲದೆ, ಈ ಪ್ರಕ್ರಿಯೆ ಕೇವಲ ಹಿಂದೂ ಹೆಸರುಗಳ ಬಳಕೆಯನ್ನೇನು ಒತ್ತಾಯಿಸುವುದಿಲ್ಲ. ಶ್ರೀಲ ಪ್ರಭುಪಾದರು ವಿವರಿಸುವಂತೆ: ‘ನಾವು ಈ ಮೂರು ಹೆಸರುಗಳನ್ನು- ಹರೇ, ಕೃಷ್ಣ, ಮತ್ತು ರಾಮ- ಜಪಿಸುತ್ತಿದ್ದೇವೆ. ಇವು ಹಿಂದೂ ಹೆಸರುಗಳು, ನಾವು ಈ ಹಿಂದೂ ಹೆಸರುಗಳನ್ನು ಏಕೆ ಜಪಿಸಬೇಕು?’ ಹಾಗೆ ಯೋಚಿಸುವ ಕೆಲವು ಜನರಿದ್ದಾರೆ. ಆದರೆ ಚೈತನ್ಯ ಮಹಾಪ್ರಭುಗಳು ಹೇಳುತ್ತಾರೆ, ‘ಇದು ಮುಖ್ಯವಲ್ಲ. ನಿಮ್ಮಲ್ಲಿ ಭಗವಂತನ ಬೇರೆ ಯಾವುದಾದರೂ ನಿಜನಾಮ ಇದ್ದರೆ, ನೀವು ಅದನ್ನು ಜಪಿಸಬಹುದು. ಆದರೆ ಭಗವಂತನ ನಾಮವನ್ನು ಜಪಿಸಿ’. ಇದೇ ಈ ಕೃಷ್ಣಪ್ರಜ್ಞಾ ಚಳವಳಿಯ ಸಂದೇಶವಾಗಿದೆ. ಈ ಪ್ರಕ್ರಿಯೆಯನ್ನು ಅಳವಡಿಸಿ ಶ್ರೀಲ ಪ್ರಭುಪಾದರು ‘ಇಸ್ಕಾನ್’ ಎಂಬ ವಿಶ್ವವ್ಯಾಪಿ ಆಧ್ಯಾತ್ಮಿಕ ಸಂಸ್ಥೆಯನ್ನು ಸ್ಥಾಪಿಸಿದರು. ಎಲ್ಲ ಜನರೂ ಇಲ್ಲಿ ನಿಜವಾದ ಸಮಾನತೆ, ಸಹೋದರತ್ವ ಮತ್ತು ಏಕತೆಯನ್ನು ಅನುಭವಿಸಬಹುದು.
ಚೈತನ್ಯ ಮಹಾಪ್ರಭುಗಳು ಜನಿಸಿದ್ದು ಕಲ್ಕತ್ತಾ ಬಳಿಯ ಮಾಯಾಪುರದಲ್ಲಿ, ಫಾಲ್ಗುಣ ಪೂರ್ಣಿಮೆಯ ದಿನದಂದು (ಹೋಳೀ ಹಬ್ಬದ ದಿನ)-ಇಂಗ್ಲಿಷ್ ದಿನಾಂಕ 1486ರ ಫೆಬ್ರವರಿ 18. ಅವರ ತಂದೆ ಜಗನ್ನಾಥ ಮಿಶ್ರಾ ಮತ್ತು ತಾಯಿ ಶಚೀದೇವಿ. ಚೈತನ್ಯ ಮಹಾಪ್ರಭುಗಳು ತಮ್ಮ ಚಿನ್ನದ ಮೈಕಾಂತಿಯಿಂದಾಗಿ ‘ಗೌರಾಂಗ’ ಎಂದೂ ಪ್ರಸಿದ್ಧಿಯಾದವರು. 24ನೇ ವಯಸ್ಸಿನಲ್ಲಿಯೇ ಸಂನ್ಯಾಸ ದೀಕ್ಷೆ ಹೊಂದಿ ಒಡಿಶಾದ ಜಗನ್ನಾಥ ಪುರಿಗೆ ತೆರಳಿದರು. ಅನಂತರ, ಮಹಾಪ್ರಭುಗಳು ದಕ್ಷಿಣ ಭಾರತದ ತೀರ್ಥಯಾತ್ರೆಯನ್ನು ಕೈಗೊಂಡರು ಮತ್ತು ಆ ಸಮಯದಲ್ಲಿ ಹೋದ ಕಡೆಯಲ್ಲೆಲ್ಲ ಸಹಸ್ರ-ಸಹಸ್ರ ಜನರನ್ನು ಕೃಷ್ಣ ಭಕ್ತರನ್ನಾಗಿ ಪರಿವರ್ತಿಸಿದರು. ಈ ಸಂದರ್ಭದಲ್ಲಿ ಅವರು ನಮ್ಮ ಕರ್ನಾಟಕದಲ್ಲಿರುವ ಶೃಂಗೇರಿ, ಉಡುಪಿ, ಮೇಲುಕೋಟೆ ಮತ್ತು ಗೋಕರ್ಣ ಕ್ಷೇತ್ರಗಳಿಗೆ ಭೇಟಿ ನೀಡಿದರು.
ನಿಮಾಯ್ ಚಿಕ್ಕವನಿದ್ದಾಗ ಅಳಲು ಶುರುಮಾಡಿದರೆ ಏನೇ ಕೊಟ್ಟರೂ ಅಳು ನಿಲ್ಲಿಸುತ್ತಿರಲಿಲ್ಲ, ಆದರೆ ಸುತ್ತಲಿದ್ದವರು ಜೋರಾಗಿ ‘ಹರಿಬೋಲ್’ ಎಂದು ಕೀರ್ತನೆ ಮಾಡಿದರೆ ತಕ್ಷಣ ಅಳು ಮಾಯ. ಇದರಿಂದ ಜಗನ್ನಾಥ ಮಿಶ್ರರ ಮನೆಯಲ್ಲಿ ನಿತ್ಯ ಹರಿನಾಮ ಸಂಕೀರ್ತನೆ! ಮತ್ತೊಂದು ಬಾರಿ, ಕಳ್ಳರಿಬ್ಬರು ಮಗುವಿನ ಒಡವೆ ಕದಿಯುವ ಆಸೆಯಿಂದ ಅಂಗಳದಲ್ಲಿ ಆಡುತ್ತಿದ್ದ, ನಿಮಾಯ್ನನ್ನು ಹೆಗಲ ಮೇಲೆ ಕೂರಿಸಿಕೊಂಡು ದೂರ ಓಡುತ್ತಾರೆ. ಆದರೇನು ಮಾಯ, ಎಷ್ಟು ಓಡಿದರೂ ಮತ್ತೆ ಮತ್ತೆ ಮನೆಯಂಗಳಕ್ಕೇ ತಿರುಗಿ ಬರುತ್ತಿರುವುದನ್ನು ಕಂಡು ಮಗುವನ್ನು ಕೆಳಗಿಳಿಸಿ ಕಾಲಿಗೆ ಬುದ್ಧಿ ಹೇಳುತ್ತಾರೆ. ನಿಮಾಯ್ಗೆ ಐದು ವರ್ಷವಾದಾಗ ಅವನನ್ನು ಶಾಲೆಗೆ ಸೇರಿಸಲಾಯಿತು. ಕುಶಾಗ್ರಮತಿ ಬಾಲಕ ಕೆಲವೇ ವರ್ಷಗಳಲ್ಲಿ ಬಂಗಾಳೀ ಮತ್ತು ಸಂಸ್ಕೃತ ಭಾಷೆಗಳಲ್ಲಿ ಪಾಂಡಿತ್ಯ ಸಿದ್ಧಿಸಿಕೊಂಡ. ತದನಂತರ ಶಾಸ್ತ್ರಾಧ್ಯಯನ. ಶಿಕ್ಷಣ ಮುಗಿದ ಬಳಿಕ 14ನೇ ವಯಸ್ಸಿನಲ್ಲಿ ಲಕ್ಷ್ಮೀದೇವಿಯೊಂದಿಗೆ ಮದುವೆ. ಈ ನಡುವೆ ನಿಮಾಯಿಯ ಕೀರ್ತಿ ಹರಡುವ ಒಂದು ಪ್ರಸಂಗ ನದಿಯಾದಲ್ಲಿ ನಡೆಯಿತು. ಕೇಶವ ಕಾಶ್ಮೀರಿಯೆಂಬ ದಿಗ್ವಿಜಯೀ ಪಂಡಿತನು ನದಿಯಾಕ್ಕೆ ಬಂದದ್ದೇ ತಡ ಅಲ್ಲಿನ ಎಲ್ಲ ಪಂಡಿತರು ಅವನನ್ನು ಎದುರಿಸಲಾಗದೆ ಚೆಲ್ಲಾಪಿಲ್ಲಿಯಾಗಿ ಓಡಿಹೋದರು. ಉಳಿದವನು ನಿಮಾಯ್. ಗಂಗಾತಟದಲ್ಲಿ ಅವರಿಬ್ಬರ ಮಧ್ಯೆ ಸ್ಪರ್ಧೆ. ಪಂಡಿತನನ್ನು ಸುಲಭವಾಗಿ ಸೋಲಿಸಿದ ನಿಮಾಯ್ ಅಂದಿನಿಂದ ನಿಮಾಯ್ ಪಂಡಿತನೆಂದು ಪ್ರಖ್ಯಾತನಾದ. 16ನೇ ವಯಸ್ಸಿನಲ್ಲಿ ಶ್ರೀ ಈಶ್ವರ ಪುರಿ ಶ್ರೀಪಾದರಿಂದ ನಿಮಾಯ್ ದೀಕ್ಷೆ ಸ್ವೀಕರಿಸಿ ಸಂಕೀರ್ತನೆಯ ಬೋಧಕನಾದ. ನದಿಯಾದ ಬೀದಿಬೀದಿಗಳು ನಿಮಾಯ್ ಮತ್ತು ಅವನ ಸಂಗಡಿಗರ ಸಂಕೀರ್ತನೆಯಿಂದ ತುಂಬಿ ಹೋದವು. ಅವನ ಸಂಗಡಿಗರಲ್ಲಿ ಪ್ರಮುಖರು- ಶ್ರೀ ನಿತ್ಯಾನಂದ ಪ್ರಭು, ಶ್ರೀ ಅದ್ವೈತ ಪ್ರಭು, ಶ್ರೀ ಗದಾಧರ ಪಂಡಿತ, ಶ್ರೀವಾಸ ಪಂಡಿತ ಮತ್ತು ಹರಿದಾಸ ಠಾಕೂರರು. ಈ ಸಮಯದಲ್ಲೇ ಕಾಜಿಯ ಘಟನೆ ನಡೆದಿದ್ದು. 24ನೇ ವಯಸ್ಸಿನಲ್ಲೇ ಸಂನ್ಯಾಸ ಸ್ವೀಕರಿಸಿದ ನಿಮಾಯ್ ಕೃಷ್ಣಚೈತನ್ಯರೆಂಬ ಸಂನ್ಯಾಸನಾಮ ಪಡೆದರು. ತಾಯಿ ಶಚೀದೇವಿ ಅಪೇಕ್ಷೆ ಮೇರೆಗೆ ಜಗನ್ನಾಥ ಪುರಿಯನ್ನು ತಮ್ಮ ಕೇಂದ್ರವನ್ನಾಗಿ ಮಾಡಿಕೊಂಡರು.
ಮಹಾಪ್ರಭುಗಳು ಆರು ಜನ ಶಿಷ್ಯಂದಿರನ್ನು ತರಬೇತುಗೊಳಿಸಿ ಅವರನ್ನು ಭಕ್ತಿಶಾಸ್ತ್ರದ ಗ್ರಂಥ ರಚನೆ ಮತ್ತು ಮಥುರಾ-ವೃಂದಾವನದ ಲೀಲಾಸ್ಥಳಗಳ ಪತ್ತೆಹಚ್ಚುವಿಕೆ ಮತ್ತು ಜೀಣೋದ್ಧಾರದ ಜವಾಬ್ದಾರಿಯನ್ನು ನೀಡಿದರು. ಅವರೇ ಪ್ರಖ್ಯಾತರಾದ ವೃಂದಾವನದ ಗೋಸ್ವಾಮಿಗಳು-ರೂಪ, ಸನಾತನ, ರಘುನಾಥ ದಾಸ, ರಘುನಾಥ ಭಟ್ಟ, ಗೋಪಾಲ ಭಟ್ಟ ಮತ್ತು ಜೀವ. ಅಲ್ಲದೆ ಬಂಗಾಳ ಮತ್ತು ಒಡಿಶಾಗಳಲ್ಲಿ ಲಕ್ಷ-ಲಕ್ಷ ಕೃಷ್ಣಭಕ್ತರನ್ನು ನಿರ್ವಿುಸಿದ ಖ್ಯಾತಿ ಮಹಾಪ್ರಭುಗಳದು. ಈ ಸಮಯದಲ್ಲಿ, ಜಗನ್ನಾಥ ಪುರಿಯಲ್ಲಿ ಅವರ ಅಸಂಖ್ಯ ಲೀಲೆಗಳು ನಡೆಯುತ್ತವೆ. ಮಹಾಪ್ರಭುಗಳು ಹೇಳಿದ್ದರು, ‘ಮುಂದೊಂದು ದಿನ ಜಗತ್ತಿನ ಬೀದಿ-ಬೀದಿಗಳಲ್ಲಿ ನಾಮಸಂಕೀರ್ತನೆಯು ನಡೆಯುತ್ತದೆ’ ಎಂದು. ಶ್ರೀ ಚೈತನ್ಯರ ಗುರು-ಶಿಷ್ಯ ಪರಂಪರೆಯಲ್ಲಿ ಬಂದತಹ ಶ್ರೀಲ ಪ್ರಭುಪಾದರು ತಮ್ಮ ಇಸ್ಕಾನ್ ಸಂಸ್ಥೆ ಮೂಲಕ ಈ ಭವಿಷ್ಯವಾಣಿಯನ್ನು ನಿಜವಾಗಿಸಿದ್ದಾರೆ. ಚೈತನ್ಯರು 48ನೆಯ ವಯಸ್ಸಿನಲ್ಲಿ ಅವತಾರವನ್ನು ಪರಿಸಮಾಪ್ತಿಗೊಳಿಸಿದರು. ಪುರಿಯಲ್ಲಿರುವ ತೋಟ-ಗೋಪಿನಾಥ ಮಂದಿರದ ಗರ್ಭಗುಡಿಯಲ್ಲಿ ಅವರು ಕೃಷ್ಣನ ವಿಗ್ರಹದೊಂದಿಗೆ ಲೀನರಾಗಿ ಅದೃಶ್ಯರಾದರು. ಚೈತನ್ಯರ ಲೀಲೆಗಳು ಅಸಂಖ್ಯ, ಅವರ ಭಕ್ತರೂ ಅಸಂಖ್ಯ.
ಈ ವರ್ಷ, ಮಾರ್ಚ್ 9ರಂದು ಶ್ರೀ ಚೈತನ್ಯ ಮಹಾಪ್ರಭುಗಳ ಜಯಂತಿ (ಗೌರಪೂರ್ಣಿಮಾ) ಬಂದಿದೆ. ಶ್ರೀ ಚೈತನ್ಯ ಮಹಾಪ್ರಭುಗಳನ್ನು ರೂಪ ಗೋಸ್ವಾಮಿ ‘ಮಹಾವದಾನ್ಯಾಯ’ (ಪರಮ ಕರುಣಾಮಯೀ) ಎಂದೂ ಕರೆಯುತ್ತಾರೆ. ಅವರೆಷ್ಟು ಕರುಣಾಮಯಿ ಎಂದರೆ, ವ್ಯಕ್ತಿಯ ಯಾವುದೇ ತಪ್ಪುಗಳನ್ನಾಗಲೀ ಅಥವಾ ಅರ್ಹತೆಗಳನ್ನಾಗಲೀ ಪರಿಗಣಿಸದೆ, ಅವರು ಎಲ್ಲರಿಗೂ ಮುಕ್ತವಾಗಿ ಭಗವತ್-ಪ್ರೇಮವನ್ನು ವಿತರಿಸುತ್ತಾರೆ. ನಾವು ಅವರನ್ನು ಪ್ರಾರ್ಥಿಸೋಣ, ಪೂಜಿಸೋಣ ಮತ್ತು ಪ್ರೀತಿಸೋಣ!
ಜಯ ಶ್ರೀಕೃಷ್ಣಚೈತನ್ಯ ಪ್ರಭು ನಿತ್ಯಾನಂದ ಶ್ರೀ ಅದ್ವೈತ ಗದಾಧರ ಶ್ರೀವಾಸಾದಿ ಗೌರ ಭಕ್ತವೃಂದ!