8ರಿಂದ ದಶಲಕ್ಷಣ ಮಹಾಪರ್ವ ಪೂಜೆ

04kgl06
ಬಿದರೂರು ಜೈನ ಬಸದಿಯಲ್ಲಿ ಪ್ರತಿಷ್ಠಾಪಿಸಿರುವ ವರ್ಧಮಾನ ಸ್ವಾಮಿಯ ( ಮಹಾವೀರ ) ಪ್ರಧಾನ ಮೂರ್ತಿ.
Published on

ಕಾರ್ಗಲ್: ಭಾರಂಗಿ ಹೋಬಳಿ ವ್ಯಾಪ್ತಿ ಮರಬಿಡಿ ಸೀಮೆಯ ಬಿದರೂರು ಶ್ರೀ ವರ್ಧಮಾನ ಸ್ವಾಮಿಯ ದಿಗಂಬರ ಜೈನ ಬಸದಿಯಲ್ಲಿ ಪ್ರತಿ ವರ್ಷ ಆಚರಿಸುವ ದಶಲಕ್ಷಣ ಮಹಾಪರ್ವದ ಪೂಜಾ ಕಾರ್ಯ ಸೆ.8ರಿಂದ 17ರವರೆಗೆ ನಡೆಯಲಿದೆ ಎಂದು ಬಿದರೂರು ಜೈನ ಬಸದಿ ಸಮಿತಿ ಅಧ್ಯಕ್ಷ ಶಾಂತರಾಜ್ ನೇಸಲಮನೆ ಹೇಳಿದರು.

ಜೈನ ಬಸದಿ ಸನ್ಮತಿ ಸಭಾಭವನದಲ್ಲಿ ಬುಧವಾರ ಕಾರ್ಯಕ್ರಮದ ಪೂರ್ವಸಿದ್ಧತೆ ಪರಿಶೀಲಿಸಿ ಮಾತನಾಡಿ, ಬಸದಿ ಆವರಣದಲ್ಲಿ ಮರಬಿಡಿ ಸೀಮೆಯ ಸಮಸ್ತ ಶ್ರಾವಕ ಮತ್ತು ಶ್ರಾವಕಿಯರು ತಯಾರಿ ಮಾಡಿಕೊಂಡಿದ್ದು, ಸೋಂದಾ ಶ್ರೀ ಸ್ವಾದಿ ದಿಗಂಬರ ಜೈನ ಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ದಶಲಕ್ಷಣ ಮಹಾಪರ್ವ ನೆರವೇರಲಿದೆ ಎಂದು ತಿಳಿಸಿದರು.
ಆತ್ಮದ ಸ್ಥಾನವನ್ನು ಭದ್ರಪಡಿಸುವ ಮೂಲಕ ಮೋಕ್ಷ ಪ್ರಾಪ್ತಿ ಮಾಡಿಕೊಳ್ಳಲು ಜೈನಧರ್ಮದಲ್ಲಿ ದಶಲಕ್ಷಣ ಮಹಾಪರ್ವ ಸ್ಥಾಪನೆ ಪೂಜಾ ವಿಧಾನ ಅತ್ಯಂತ ವಿಶೇಷ ಮಹತ್ವ ಪಡೆದುಕೊಂಡಿದೆ. ಪ್ರತಿ ದಿನ ಒಂದು ಧರ್ಮ ಆಚರಿಸುವಂತೆ ದಶಲಕ್ಷಣದ ಹತ್ತು ದಿನಗಳ ಕಾಲ ಹತ್ತು ಧರ್ಮ ಆಚರಿಸಲಾಗುವುದು. ಜೈನ ಧರ್ಮದಲ್ಲಿ ಮೋಕ್ಷ ಗಳಿಸಲು ದಶಲಕ್ಷಣದ ಹತ್ತು ಮೆಟ್ಟಿಲುಗಳು ಪ್ರಾಮುಖ್ಯತೆ ಪಡೆದಿದೆ ಎಂದರು.
ಜೈನ ಬಸದಿ ಪ್ರಧಾನ ಪುರೋಹಿತ ಮೋಹನ್‌ಕುಮಾರ್ ಬಿದರೂರು ಮಾತನಾಡಿ. 8ರಂದು ಬೆಳಗ್ಗೆ ಧ್ವಜಾರೋಹಣ, ದಶಲಕ್ಷಣ ಪೂಜಾ ಕಳಸ ಸ್ಥಾಪನೆಯೊಂದಿಗೆ ಪೂಜೆ ಆರಂಭವಾಗಲಿದೆ. ಭಾನುವಾರ ಉತ್ತಮ ಕ್ಷಮಾಧರ್ಮ, ಸೋಮವಾರ ಉತ್ತಮ ಮಾರ್ದವ ಧರ್ಮ ಪೂಜೆ, ಮಂಗಳವಾರ ಉತ್ತಮ ಆರ್ಜವ ಧರ್ಮ ಪೂಜೆ, ಬುಧವಾರ ಉತ್ತಮ ಸತ್ಯ ಧರ್ಮ ಪೂಜೆ, ಗುರುವಾರ ಉತ್ತಮ ಶೌಚ ಧರ್ಮ ಪೂಜೆ, ಶುಕ್ರವಾರ ಉತ್ತಮ ಸಂಯಮ ಧರ್ಮ ಪೂಜೆ, ಶನಿವಾರ ಉತ್ತಮ ತಪ ಧರ್ಮ ಪೂಜೆ ನಡೆಯಲಿದೆ ಎಂದು ಹೇಳಿದರು.
15ರಂದು ಉತ್ತಮ ತ್ಯಾಗ ಧರ್ಮ ಪೂಜೆ, ಸೋಮವಾರ ಉತ್ತಮ ಆಕಿಂಜನ್ಯ ಧರ್ಮ ಪೂಜೆ ಹಾಗೂ ಕಡೇ ದಿನ ಉತ್ತಮ ಬ್ರಹ್ಮಚರ್ಯ ಧರ್ಮ ಪೂಜೆ ಹಾಗೂ 108 ಕಲಶಾಭಿಷೇಕ, ಅನಂತನಾಥಸ್ವಾಮಿ ಪೂಜೆ, ಚತುರ್ದಶಿ ಪೂಜೆ ಹಾಗೂ ದಶಲಕ್ಷಣ ವಿಸರ್ಜನೆಯೊಂದಿಗೆ ಕ್ಷಮಾವಾಣಿ ಮುಖೇನ ಹತ್ತು ದಿನಗಳ ಮಹಾಪೂಜೆ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು. ದಶಲಕ್ಷಣ ಮಹಾಪರ್ವ ಪೂಜೆ ನೆರವೇರುವ ಹತ್ತು ದಿನವೂ ಮರಬಿಡಿ ಸೀಮೆಯ ಒಂದೊಂದು ಗ್ರಾಮದ ಜೈನ ಶ್ರಾವಕ ಮತ್ತು ಶ್ರಾವಕಿಯರು ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳುವರು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net