ಗಿನ್ನಿಸ್​ ದಾಖಲೆಯತ್ತ ಮಹಾಕುಂಭ ಮೇಳ; ಇತಿಹಾಸ ನಿರ್ಮಿಸಲು ಯೋಗಿ ಸರ್ಕಾರ ಸಜ್ಜು | Mahakumbh Mela

ವಿಜಯವಾಣಿ - 2025-02-20T172956.401
Published on

Mahakumbh Mela: ಜನವರಿ 13ರಿಂದ ಪ್ರಾರಂಭಗೊಂಡ ಮಹಾಕುಂಭ ಮೇಳ ಇದೀಗ ವಿಶ್ವವ್ಯಾಪಿ ಜನಮನ ಸೆಳೆದಿದ್ದು, ಜಗತ್ತಿನ ಮೂಲೆ ಮೂಲೆಗೂ ಪುಣ್ಯ ಸ್ನಾನದ ಮಹತ್ವವವನ್ನು ಸಾರಿದೆ. ಇನ್ನೇನು ಅಂತಿಮ ಘಟ್ಟಕ್ಕೆ ಸನ್ನಿಹಿತವಾಗಿರುವ ಮಹಾಕುಂಭ ಮೇಳ, ಇದೇ ಫೆ.26ರಂದು ಮಹಾಶಿವರಾತ್ರಿಗೆ ಪೂರ್ಣಗೊಳ್ಳಲಿದೆ. ಅಲ್ಲಿಯವರೆಗೂ ಭಕ್ತಾಧಿಗಳ ಆಗಮನಕ್ಕೆ ಅವಕಾಶವಿದೆ. ಈ ಕುರಿತಂತೆ ಉತ್ತರ ಪ್ರದೇಶ ಸರ್ಕಾರವು ಮಾಹಿತಿ ನೀಡಿದೆ.

144 ವರ್ಷಕ್ಕೊಮ್ಮೆ ಸಂಭವಿಸುವ ಮಹಾಕುಂಭ ಮೇಳಕ್ಕೆ ಸಾಕ್ಷಿಯಾದ ಪ್ರಯಾಗ್​ರಾಜ್​ಗೆ ದೇಶ-ವಿದೇಶಗಳಿಂದ ಕೋಟ್ಯಂತರ ಭಕ್ತಾಧಿಗಳು ಆಗಮಿಸಿ, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಸುಮಾರು ಒಂದು ತಿಂಗಳಿಗೂ ಹೆಚ್ಚಿನ ಅವಧಿ ನಡೆಯುವ ಮಹಾಕುಂಭ ಮೇಳಕ್ಕೆ ಬಿಗಿ ಭದ್ರತೆ ಸೇರಿದಂತೆ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ವ್ಯವಸ್ಥೆ ಮಾಡಿತ್ತು. ಇದರ ಮಧ್ಯೆಯೂ ಕೆಲವು ಅವಘಡ, ಅನಾಹುತ ಸಂಭವಿಸಿದ್ದು ದುರಾದೃಷ್ಟಕರ. ಇದರ ಮಧ್ಯೆಯೂ ಭಕ್ತಾಧಿಗಳ ಆಗಮನದಲ್ಲಿ ದಾಖಲೆ ಬರೆದಿರುವ ಮಹಾಕುಂಭ ಮೇಳ ಈಗ ಮತ್ತೊಂದು ನೂತನ ದಾಖಲೆ ನಿರ್ಮಿಸುವತ್ತ ಸಾಗಿದೆ. ಇದಕ್ಕಾಗಿ ಯೋಗಿ ಸರ್ಕಾರ ಒಂದಷ್ಟು ಕ್ರಮಗಳನ್ನು ಕೈಗೊಂಡಿದೆ.

ಗಿನ್ನಿಸ್ ವಿಶ್ವ ದಾಖಲೆಗೆ ಮಹಾಕುಂಭ ಸಜ್ಜು

ಗಿನ್ನಿಸ್ ವಿಶ್ವ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆಯಲು, ಮಹಾಕುಂಭ ಆಯೋಜಕರು ಈಗಾಗಲೇ ನಾಲ್ಕು ಮಹತ್ವಾಕಾಂಕ್ಷೆಯ ಉಪಕ್ರಮಗಳನ್ನು ಕೈಗೊಂಡಿದ್ದಾರೆ. ಅವು ಹೀಗಿವೆ.

15,000 ಕಾರ್ಮಿಕರಿಂದ ನೈರ್ಮಲ್ಯ ಅಭಿಯಾನ

ಬರೋಬ್ಬರಿ 15,000 ಕಾರ್ಮಿಕರೊಂದಿಗೆ ನೈರ್ಮಲ್ಯ ಅಭಿಯಾನ. ಘಾಟ್‌ಗಳನ್ನು ಸ್ವಚ್ಛ ಮತ್ತು ನೈರ್ಮಲ್ಯವಾಗಿಡಲು, 15,000 ನೈರ್ಮಲ್ಯ ಕಾರ್ಮಿಕರ ಬೃಹತ್ ತಂಡ ಒಟ್ಟಾಗಿ ಬೀದಿಗಳನ್ನು ಸ್ವಚ್ಛಗೊಳಿಸುತ್ತಿದೆ. ಇದು ಇತಿಹಾಸದಲ್ಲಿಯೇ ಅತಿದೊಡ್ಡ ಬೀದಿ-ಸ್ವಚ್ಛತಾ ಅಭಿಯಾನದ ದಾಖಲೆಯನ್ನು ಮುರಿದಿದೆ.

ಘಾಟ್​, ನೀರಿನ ಶುದ್ಧೀಕರಣ

ಯಮುನಾ, ಗಂಗಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಪವಿತ್ರ ತ್ರಿವೇಣಿ ಸಂಗಮವನ್ನು, ಸುಮಾರು 300ಕ್ಕೂ ಹೆಚ್ಚು ಕಾರ್ಮಿಕರ ತಂಡವು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಭಾರತದ ಪವಿತ್ರ ನದಿಗಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಸಮರ್ಪಣೆಯನ್ನು ಈ ದಾಖಲೆಯ ಪ್ರಯತ್ನವು ಪ್ರದರ್ಶಿಸುತ್ತಿದೆ.

ಅತಿದೊಡ್ಡ ಇ-ರಿಕ್ಷಾ ಮೆರವಣಿಗೆ

ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ಸ್ನೇಹಿ ಸಾರಿಗೆಯನ್ನು ಉತ್ತೇಜಿಸಲು, ಮಹಾಕುಂಭದಲ್ಲಿ ಬರೋಬ್ಬರಿ ಒಂದು ಸಾವಿರ ಇ-ರಿಕ್ಷಾಗಳ ಮೆರವಣಿಗೆ ಸಾಗುತ್ತಿದೆ.

ಬೃಹತ್​ ಕೈಮುದ್ರೆ ಚಿತ್ರಕಲೆ ಕಾರ್ಯಕ್ರಮ

ಅತಿದೊಡ್ಡ ಕಲಾ ಕಾರ್ಯಕ್ರಮಗಳಲ್ಲಿ ಒಂದಾದ ಕೈಮುದ್ರೆ ಚಿತ್ರಕಲೆಯಲ್ಲಿ 10,000ಕ್ಕೂ ಅಧಿಕ ಜನರು ಗಂಗಾ ಪಂಡಲ್‌ನಲ್ಲಿ ಭಾಗವಹಿಸಲಿದ್ದಾರೆ. ಇದು ಅಲ್ಲಿನ ಸೃಜನಶೀಲತೆ ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿಯಲಿದೆ. ವರದಿಗಳ ಪ್ರಕಾರ, ಗಿನ್ನಿಸ್ ವಿಶ್ವ ದಾಖಲೆ ತಂಡದೊಂದಿಗೆ ಕೈಜೋಡಿಸಿರುವ ಸಿಎಂ ಯೋಗಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರ, ಎಲ್ಲಾ ನಿಯಮಗಳು ಜಾರಿಯಲ್ಲಿವೆ ಮತ್ತು ಪಾಲಿಸಲಾಗುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿದೆ.

ಈ ಕುರಿತಂತೆ ಕುಂಭಮೇಳದ ವಿಶೇಷ ಕರ್ತವ್ಯ ಅಧಿಕಾರಿ (OSD) ಆಕಾಂಶಾ ರಾಣಾ ಮಾತನಾಡಿ, "ನೈರ್ಮಲ್ಯ ಕಾರ್ಯಕರ್ತರು ಈಗಾಗಲೇ ನದಿ ಶುದ್ಧೀಕರಣ ಯೋಜನೆ ಮೂಲಕ ಇತಿಹಾಸ ಸೃಷ್ಟಿಸುತ್ತಿದ್ದಾರೆ. ನದಿಗಳು ಮತ್ತು ಇತರ ಜಲಮೂಲಗಳನ್ನು ಸ್ವಚ್ಛವಾಗಿಡುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಈ ನಿರ್ಧಾರದ ಪ್ರಮುಖ ಉದ್ದೇಶವಾಗಿದೆ" ಎಂದು ಮಾಹಿತಿ ಹಂಚಿಕೊಂಡರು.

50 ಕೋಟಿಗೂ ಅಧಿಕ, ಮುಂದುವರಿಕೆ...

ಇನ್ನೂ ಮಹಾಶಿವರಾತ್ರಿಗೆ ಆರು ದಿನಗಳು ಬಾಕಿ ಉಳಿದಿರುವಂತೆಯೇ 50 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಮೌನಿ ಅಮಾವಾಸ್ಯೆ, ಮಾಘ ಪೂರ್ಣಿಮ ಸೇರಿದಂತೆ ವಿಶೇಷ ದಿನಗಳದಂದು ಬೃಹತ್ ಸಂಖ್ಯೆಯಲ್ಲಿ ತ್ರಿವೇಣಿಯಲ್ಲಿ ಭಕ್ತರು ಮಿಂದೆದ್ದಿದ್ದಾರೆ ಎಂಬುದು ವಿಶೇಷ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net