

Patna: ಬಿಹಾರದ ವಿಧಾನಸಭಾ ಚುನಾವಣೆಯ (Bihar Election) ಮತದಾನದ ದಿನಾಂಕ ಹತ್ತಿರ ಬರುತಿದ್ದರು ವಿಪಕ್ಷ ಮಹಾಘಟಬಂಧನ್ನಲ್ಲಿ ಸೀಟು ಹಂಚಿಕೆ ಸಂಘರ್ಷ ಹಾಗೆ ಮುಂದುವರಿದಿದ್ದರೂ, ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆರ್ಜೆಡಿ ನಾಯಕ ತೇಜಸ್ವಿ ಯಾದವ್ರನ್ನೇ ಬಿಂಬಿಸಲು ಒಮ್ಮತ ಮೂಡಿದೆ ಎಂದು ಮೂಲಗಳು ತಿಳಿಸಿವೆ.
ಮಹಾಘಟಬಂಧನ್ನ ಎಲ್ಲಾ ಮಿತ್ರಪಕ್ಷಗಳು ತೇಜಸ್ವಿ ನಾಯಕತ್ವವನ್ನು ಬೆಂಬಲಿಸಲು ಒಪ್ಪಿಕೊಂಡಿದ್ದು, ಇಂದು ಔಪಚಾರಿಕ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ. ಅವರ ನೇತೃತ್ವದಲ್ಲಿಯೇ ಪಕ್ಷಗಳು ತಮ್ಮ ಪ್ರಚಾರ ಘೋಷಣೆಯನ್ನು ಅನಾವರಣಗೊಳಿಸುವ ಸಾಧ್ಯತೆಯಿದೆ "ಚಲೋ ಬಿಹಾರ, ಬದ್ಲೇನ್ ಬಿಹಾರ (ಬಿಹಾರಕ್ಕೆ ಹೋಗೋಣ, ಬಿಹಾರವನ್ನು ಬದಲಾಯಿಸೋಣ)" ಎಂದು ಆರ್ಜೆಡಿ ಮೂಲಗಳು ತಿಳಿಸಿವೆ.
ಸೀಟು ಹಂಚಿಕೆ ಕುರಿತ ಮಾತುಕತೆಗಳು ಇನ್ನೂ ಮುಂದುವರಿದಿದ್ದು, ಬಿಕ್ಕಟ್ಟನ್ನು ಶಮನ ಮಾಡುವ ಅಂತಿಮ ಪ್ರಯತ್ನವಾಗಿ ಹಿರಿಯ ಕಾಂಗ್ರೆಸ್ ನಾಯಕ ಮತ್ತು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಿತ್ರಪಕ್ಷಗಳ ನಡುವೆ ಸಂಧಾನ ನಡೆಸಿದ್ದಾರೆ ಎನ್ನಲಾಗಿದೆ. ಆರ್ಜೆಡಿ, ಕಾಂಗ್ರೆಸ್ ಮತ್ತು ಇತರ ಸಣ್ಣ ಪಕ್ಷಗಳನ್ನು ಒಳಗೊಂಡಿರುವ ಈ ಕೂಟದಲ್ಲಿ ಸುಮಾರು ಹನ್ನೆರಡು ಸ್ಥಾನಗಳಿಗೆ ಆಂತರಿಕ ಭಿನ್ನಾಭಿಪ್ರಾಯ ಎದುರಾಗಿದೆ. ಮೈತ್ರಿಕೂಟದೊಳಗಿನ ಸಂಘರ್ಷ ಪರಿಹರಿಸಲು ಆಗಮಿಸಿರುವ ಗೆಹ್ಲೋಟ್, ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಅವರ ಪುತ್ರ ತೇಜಸ್ವಿ ಯಾದವ್ರನ್ನು ಭೇಟಿಯಾದರು. ಚರ್ಚೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಗೆಹ್ಲೋಟ್, ಮೈತ್ರಿಕೂಟದೊಳಗಿನ ಬಿರುಕುಗಳ ವರದಿಗಳನ್ನು ಕಡಿಮೆ ಮಾಡಿ, 243 ಸ್ಥಾನಗಳ ವಿಧಾನಸಭೆಯಲ್ಲಿ, 5–10 ಸ್ಥಾನಗಳಿಗಾಗಿ ಫ್ರೆಂಡ್ಲಿ ಫೈಟ್ (ಸ್ನೇಹಪರ ಹೋರಾಟಗಳು) ಪ್ರಮುಖ ಸಮಸ್ಯೆಯಾಗಿಲ್ಲ ಎಂದು ಹೇಳಿದರು.
ಈ ವಿಷಯವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ತೇಜಸ್ವಿ, ಇಂದು, ನಾನು ರಾಜಸ್ಥಾನದ ಗೌರವಾನ್ವಿತ ಮಾಜಿ ಮುಖ್ಯಮಂತ್ರಿ ಶ್ರೀ ಅಶೋಕ್ ಗೆಹ್ಲೋಟ್ ಅವರೊಂದಿಗೆ ಫಲಪ್ರದ ಚುನಾವಣಾ ಚರ್ಚೆ ನಡೆಸಿದೆ ಎಂದು ಬರೆದಿದ್ದಾರೆ. ಆರ್ಜೆಡಿ ಸೋಮವಾರ 143 ಅಭ್ಯರ್ಥಿಗಳ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿದ್ದರೆ, ಕಾಂಗ್ರೆಸ್ 61 ಅಭ್ಯರ್ಥಿಗಳನ್ನು ಘೋಷಿಸಿದೆ, ಇಂಡಿಯಾ ಬಣದ ಎರಡು ಪ್ರಮುಖ ಮಿತ್ರಪಕ್ಷಗಳ ನಡುವೆ ಸುಮಾರು ಆರು ಕ್ಷೇತ್ರಗಳಲ್ಲಿ ನೇರಾ ನೇರ ಸ್ಪರ್ಧೆ ಏರ್ಪಟ್ಟಿದೆ.
ಮೈತ್ರಿಕೂಟದಲ್ಲಿನ ಉದ್ವಿಗ್ನತೆಯ ನಡುವೆ, ಆರ್ಜೆಡಿ ಮಹಿಳಾ ಮತದಾರರನ್ನು ಸೆಳೆಯಲು ಪ್ರಮುಖ ಪ್ರಯತ್ನ ಪ್ರಾರಂಭಿಸಿದ್ದು, ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತೇಜಸ್ವಿ ಯಾದವ್, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಜೀವಿಕಾ ದೀದಿ ಸಮುದಾಯದ ಕಾರ್ಯಕರ್ತರಿಗೆ ಶಾಶ್ವತ ಉದ್ಯೋಗಗಳನ್ನು ನೀಡುವುದಾಗಿ ಘೋಷಿಸಿದರು. ಒಟ್ಟು 1.5 ಕೋಟಿ ಜೀವಿಕಾ ದೀದಿಗಳಲ್ಲಿ ಸುಮಾರು 1.5 ಲಕ್ಷ ಕಾರ್ಯಕರ್ತರಿಗೆ ಮಾಸಿಕ 30,000 ರೂ. ವೇತನವನ್ನು ನೀಡುವುದಾಗಿಯೂ ಘೋಷಿಸಿದರು.
ಈ ಯೋಜನೆಯಡಿಯಲ್ಲಿ ಮಹಿಳೆಯರಿಗೆ ನೀಡಲಾಗುವ ಸಾಲಗಳನ್ನು ಮನ್ನಾ ಮಾಡಲಾಗುವುದು, ಎರಡು ವರ್ಷಗಳವರೆಗೆ ಬಡ್ಡಿರಹಿತ ಸಾಲಗಳನ್ನು ನೀಡಲಾಗುವುದು ಮತ್ತು 5 ಲಕ್ಷ ರೂ.ಗಳವರೆಗೆ ವಿಮಾ ರಕ್ಷಣೆಯನ್ನು ನೀಡಲಾಗುವುದು. ಗುತ್ತಿಗೆ ಕಾರ್ಮಿಕರ ಉದ್ಯೋಗಗಳನ್ನು ಖಾಯಂ ಮಾಡುವುದಾಗಿಯೂ ಭರವಸೆ ನೀಡಿದರು.(ಏಜೆನ್ಸೀಸ್)