

ಇದು ಝೆನ್ ಕಥೆಯಲ್ಲಿ ಬರುವ ಪ್ರಸಂಗ. ಗುರುಗಳು ಒಬ್ಬ ಶಿಷ್ಯನನ್ನು ಕುರಿತು ‘ನಿನಗೆ ಯಾವುದು ಇಷ್ಟ?’ ಎಂದು ಕೇಳಿದರು. ಆತ ಅಲ್ಲಿರುವ ಹೂವೊಂದನ್ನು ತೋರಿಸಿ, ‘ಆ ಹೂವು ತುಂಬ ಇಷ್ಟ’ ಎಂದ. ‘ಆ ಹೂವು ಏಕೆ ನಿನಗೆ ಇಷ್ಟವಾಯಿತು?’ ಎಂದು ಕೇಳಿದಾಗ, ‘ಅದು ತುಂಬ ಸುಂದರವಾಗಿದೆ ಮತ್ತು ಸುಮಧುರ ಸುವಾಸನೆಯನ್ನೂ ಹೊಂದಿದೆ’ ಎಂದ. ಗುರುಗಳಿಗೆ ಅವನ ಉತ್ತರದಿಂದ ಸಮಾಧಾನವೆನಿಸಲಿಲ್ಲ. ಇನ್ನೊಬ್ಬ ಶಿಷ್ಯನಿಗೆ ಅದೇ ಪ್ರಶ್ನೆಯನ್ನು ಕೇಳಿದರು. ಅವನು ‘ಗುರುಗಳೇ, ನನಗೆ ದೇವರು ತುಂಬ ಇಷ್ಟ’ ಎಂದುತ್ತರಿಸಿದ. ‘ಅದೇಕೆ ನಿನಗೆ ದೇವರು ಇಷ್ಟ?’ ಎಂದು ಮರುಪ್ರಶ್ನಿಸಿದರು ಗುರುಗಳು. ‘ದೇವರು ದಯಾಮಯಿ, ಜಗತ್ ರಕ್ಷಕ. ಅವನು ನಮ್ಮೆಲ್ಲ ಕಷ್ಟಗಳನ್ನು ಪರಿಹರಿಸಬಲ್ಲ ಶಕ್ತಿವಂತ. ಅವನಿಲ್ಲದೆ ಏನಿದೆ?’ ಎಂದು ತನ್ನ ಉತ್ತರವನ್ನು ಸಮರ್ಥಿಸಿಕೊಂಡ. ಎರಡನೇ ಶಿಷ್ಯನ ಉತ್ತರದಿಂದಲೂ ಗುರುಗಳಿಗೆ ತೃಪ್ತಿಯಾಗಲಿಲ್ಲ. ಮತ್ತೊಬ್ಬ ಶಿಷ್ಯನನ್ನು ಕುರಿತು ‘ನಿನಗೆ ಯಾವುದು ಇಷ್ಟ’ ಎಂದು ಪ್ರಶ್ನಿಸಿದರು. ಆಗ ಅವನು, ‘ನನಗೆ ನನ್ನ ಪ್ರೇಯಸಿ ತುಂಬ ಇಷ್ಟ’ ಎಂದ ಕೊಂಚ ಮುಜುಗರದಿಂದ.
ಗುರುಗಳು ಮತ್ತೆ ಪ್ರಶ್ನಿಸಿದರು, ‘ಯಾಕೆ?’ ಅವನು ಇನ್ನಷ್ಟು ಮುಜುಗರದಿಂದಲೇ ಉತ್ತರಿಸಿದ, ‘ಕ್ಷಮಿಸಿ, ಗುರುಗಳೇ ನಿಜಕ್ಕೂ ನನಗೆ ಯಾಕೆ ಎಂದು ಗೊತ್ತಿಲ್ಲ, ಒಟ್ಟಿನಲ್ಲಿ ಅವಳು ನನಗೆ ಇಷ್ಟ’ ಎಂದ. ಅವರಿಗೆ ಸಮಾಧಾನವಾ ದಂತೆ ತೋರಿತು. ನಸುನಗುತ್ತ ಹೇಳಿದರು, ‘ನಿನ್ನ ಉತ್ತರ ಸರಿಯಾಗಿದೆ. ಜಗತ್ತಿನಲ್ಲಿ ಎಲ್ಲದಕ್ಕೂ ಯಾವಾಗಲೂ ಉತ್ತರ ಹುಡುಕುವುದು, ಅದನ್ನು ಸಮರ್ಥಿಸುವುದು ಇನ್ನೂ ತುಂಬ ಕಷ್ಟಸಾಧ್ಯವಾದ ಕೆಲಸ. ಗೊತ್ತಿಲ್ಲ ಎಂಬುದು ನಿಜಕ್ಕೂ ಅಜ್ಞಾನವಲ್ಲ. ಅದು ಕೂಡ ಒಂದು ಅರಿವಿನ ಸ್ಥಿತಿ ಅಲ್ಲದೇ ಮತ್ತೇನೂ ಅಲ್ಲ’ ಎಂದರು.
ನಮ್ಮ ಬದುಕನ್ನು ನಾವೇ ಸಾಧ್ಯವಾದಷ್ಟು ಮುಕ್ತವಾಗಿ ಮತ್ತು ನೇರವಾಗಿ ಇಟ್ಟುಕೊಳ್ಳಲು ಪ್ರಯತ್ನಿಸಬೇಕು. ‘ನಾನು ಎಲ್ಲವನ್ನೂ ತಿಳಿದುಕೊಂಡಿದ್ದೇನೆ’ ಎಂದು ನಾವೇ ಭಾವಿಸಿಕೊಳ್ಳುವುದನ್ನು ತೊರೆದು ಪ್ರಬುದ್ಧತೆ ಪ್ರದರ್ಶಿಸಬೇಕು. ಗೊತ್ತಿಲ್ಲದಿರುವುದನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳಬೇಕು. ವಸ್ತುಸ್ಥಿತಿಯನ್ನು ಸ್ವೀಕರಿಸಿ, ಪೂರ್ಣ ಜವಾಬ್ದಾರಿಯನ್ನು ಒಪ್ಪಿಕೊಳ್ಳಬೇಕು. ಎರಿಕ್ ಜಾಂಗ್ ಅವರ ‘ನಿಮ್ಮ ಬದುಕನ್ನು ನಿಮ್ಮ ಕೈಗೆತ್ತಿಕೊಳ್ಳಿ ಮತ್ತು ಆಗೇನಾಗುತ್ತದೆ? ಘೊರವಾದದ್ದೆ! ಆಗ ದೂಷಿಸಲು ಯಾರೂ ಇಲ್ಲವಾಗುತ್ತಾರೆ’ ಎಂಬ ಮಾತು ನಿಜಕ್ಕೂ ಅರ್ಥಪೂರ್ಣ. ಅನಗತ್ಯ ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ನಾವು ಮಾನಸಿಕವಾಗಿ ಸದೃಢರಾಗಿರಬೇಕು. ಪರಿಶುದ್ಧರಾಗಿರಬೇಕು. ನೈಜ ಅರಿವು ಮೂಡಿಸಿಕೊಳ್ಳಬೇಕು. ಇದು ನಮ್ಮ ಬದಲಾವಣೆಯ ಮೊದಲ ಹೆಜ್ಜೆಯಾಗಿದೆ. ಇಂತಹ ಅರಿವಿನಿಂದ ಮಾತ್ರವೇ ಮನಸ್ಸನ್ನು ಪಕ್ವವಾಗಿಸಿಕೊಳ್ಳಬಹುದು. ಪ್ರಶಾಂತ ಮನಸ್ಸಿಗೆ ಬೇಕಾದ ರಹದಾರಿಯನ್ನು ರೂಪಿಸಿಕೊಳ್ಳಬಹುದು. ‘ಗೊತ್ತಿಲ್ಲ’ ಎಂಬ ಸಂಗತಿಯು ನಿರಾಳತೆಯನ್ನು, ವಾಸ್ತವವನ್ನು ಅರ್ಥಮಾಡಿಕೊಳ್ಳುವ ವ್ಯವಧಾನವನ್ನು, ಹೊಸದನ್ನು ಕಲಿಯುವ ಅವಕಾಶವನ್ನೂ ಕಲ್ಪಿಸುತ್ತದೆ.
(ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)