ಮಹಾಕುಂಭ ಮೇಳದಲ್ಲಿ ಕಾಲ್ತುಳಿತ: ಸ್ಥಗಿತಗೊಂಡಿದ್ದ ಅಮೃತ ಸ್ನಾನ ಪುನಾರಂಭ! ಜನರಲ್ಲಿ ಸಿಎಂ ಯೋಗಿ ಮನವಿ | Maha Kumbh Stampede

ವಿಜಯವಾಣಿ - 2025-01-29T105714.100
Published on

Maha Kumbh Stampede: ಇಂದು ಮೌನಿ ಅಮಾವಾಸ್ಯೆಯ ದಿನದಂದೇ ಭಕ್ತಾಧಿಗಳ ನೂಕುನುಗ್ಗಲಿನಿಂದ ಕಾಲ್ತುಳಿತ ಉಂಟಾಗಿ 100ಕ್ಕೂ ಹೆಚ್ಚು ಮಂದಿ ಮಹಾಕುಂಭ ಮೇಳದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಿ, ಹೆಚ್ಚಿನ ಚಿಕಿತ್ಸೆ ಕೊಡಿಸಲಾಗಿದೆ. ದುರಂತದ ಬಗ್ಗೆ ಮಾಹಿತಿ ಪಡೆದ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​, ಇನ್ನು ಮುಂದಿನ ಗಂಟೆಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಮೌನಿ ಅಮಾವಾಸ್ಯೆಯ ದಿನಕ್ಕಾಗಿ ಕಾಯುತ್ತಿದ್ದ ಸಹಸ್ರಾರು ಸಂಖ್ಯೆಯ ಭಕ್ತಾಧಿಗಳು ಇಂದು ಮಹಾಕುಂಭ ಮೇಳದಲ್ಲಿ ಅಮೃತ ಸ್ನಾನಕ್ಕೆ ತಡರಾತ್ರಿ 2 ಗಂಟೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ತ್ರಿವೇಣಿ ಸಂಗಮಕ್ಕೆ ಆಗಮಿಸಿದ್ದರು. ಸಂಗಮ ಘಾಟ್​ನಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್​ಗಳನ್ನು ಮುರಿದು ಕೆಲವರು ಒಳಬಂದ ಹಿನ್ನಲೆ ಕಾಲ್ತುಳಿತ ಉಂಟಾಗಿದೆ. ಘಟನೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ. ಕಾಲ್ತುಳಿತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಗಿತಗೊಂಡಿದ್ದ ಪುಣ್ಯ ಸ್ನಾನವನ್ನು ಈಗ ಪುನಾರಂಭಗೊಳಿಸಲಾಗಿದೆ.

ವದಂತಿಗಳಿಗೆ ಕಿವಿಗೊಡಬೇಡಿ

ಇನ್ನು ಕಾಲ್ತುಳಿತ ಉಂಟಾದ ಬೆನ್ನಲ್ಲೇ ದೂರವಾಣಿ ಕರೆಯಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, "ಪ್ರಯಾಗ್​ರಾಜ್​ನಲ್ಲಿ ಸುಮಾರು 8ರಿಂದ 10 ಕೋಟಿ ಭಕ್ತರು ಸೇರಿದ್ದಾರೆ. ಭಕ್ತಾಧಿಗಳು ಗಂಗಾ ಮಾತೆಯ ಘಾಟ್ ಬಳಿ ಸ್ನಾನ ಮಾಡಿ, ಸಂಗಮದ ಕಡೆಗೆ ಹೋಗಲು ಪ್ರಯತ್ನಿಸಬೇಡಿ. ಪ್ರತಿಯೊಬ್ಬರೂ ಆಡಳಿತದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಅಧಿಕಾರಿಗಳೊಂದಿಗೆ ಸಹಕರಿಸಬೇಕು. ಸ್ಥಗಿತಗೊಂಡಿದ್ದ ಪುಣ್ಯ ಸ್ನಾನ ಎಂದಿನಂತೆ ಮುಂದುವರಿಯಲಿದೆ. ಜನರು ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net