11 ದಿನಕ್ಕೆ 11 ಕೋಟಿ... ವಿಐಪಿ ವಲಯ, ವಿಶೇಷ ಸೌಲಭ್ಯವಿಲ್ಲ! ಮೌನಿ ಅಮಾವಾಸ್ಯೆ ಬೆನ್ನಲ್ಲೇ ಕೆಲವು ಬದಲಾವಣೆ | Maha Kumbh Mela 2025

ವಿಜಯವಾಣಿ - 2025-01-27T084838.192
Published on

Maha Kumbh Mela 2025: ವಿಶ್ವದ ಅತಿದೊಡ್ಡ ಧಾರ್ಮಿಕ ಉತ್ಸವ “ಮಹಾ ಕುಂಭಮೇಳ” ಉತ್ತರ ಪ್ರದೇಶದ ಪ್ರಯಾಗ್​ರಾಜ್​ ನಗರದಲ್ಲಿ ನಡೆಯುತ್ತಿದ್ದು, ಈ ಮಹಾ ಕುಂಭಮೇಳವು ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮೇಳ. ಕುಂಭಮೇಳಕ್ಕೆ ಪ್ರಪಂಚದಾದ್ಯಂತದ ಸಾಧು-ಸಂತರು ಮತ್ತು ಭಕ್ತ ಸಾಗರವೇ ಹರಿದುಬರುತ್ತಿದೆ. ಹತ್ತು ಸಾವಿರ ಎಕರೆಗಳಲ್ಲಿ ಕುಂಭಮೇಳಕ್ಕಾಗಿ ವಿಶೇಷ ವ್ಯವಸ್ಥೆಯನ್ನು ಮಾಡಿರುವ ಉತ್ತರ ಪ್ರದೇಶ ಸರ್ಕಾರ, ಧಾರ್ಮಿಕ ಆಚರಣೆಗೆ ಆಗಮಿಸುವ ಕೋಟ್ಯಂತರ ಭಕ್ತಾಧಿಗಳಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗದಂತೆ ಹಲವು ಕ್ರಮಗಳು ಹಾಗೂ ವಿಶೇಷ ಸೌಲಭ್ಯಗಳನ್ನು ಒದಗಿಸಿದೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಕುಂಭಮೇಳ ಅದ್ಧೂರಿಯಾಗಿ ನಡೆಯುತ್ತಿದೆ. ಈ ಮಹಾ ಕುಂಭಮೇಳಕ್ಕೆ ದೇಶಾದ್ಯಂತ ಮತ್ತು ವಿದೇಶಗಳಿಂದ ಭಕ್ತರು ಇಂದಿಗೂ ಕೋಟಿ ಸಂಖ್ಯೆಯಲ್ಲೇ ಆಗಮಿಸುತ್ತಿರುವುದು ಗಮನಾರ್ಹ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಸಂಗಮಿಸುವ ತ್ರಿವೇಣಿ ಸಂಗಮದಲ್ಲಿ ಮಿಂದೇಳುವ ಮೂಲಕ ಭಕ್ತರು ಪವಿತ್ರ ಸ್ನಾನ ಮಾಡಿ, ಧಾರ್ಮಿಕ ಕಾರ್ಯಗಳಲ್ಲಿ ತೊಡಗುತ್ತಿದ್ದಾರೆ. ನಾಗಾ ಸಾಧುಗಳು ಮತ್ತು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕುಂಭಮೇಳದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

11 ದಿನಕ್ಕೆ 11 ಕೋಟಿ ಭಕ್ತರು

ಮತ್ತೊಂದೆಡೆ, ಈ ತಿಂಗಳ 29ರಂದು ಮೌನಿ ಅಮಾವಾಸ್ಯೆಯ ಹಿನ್ನೆಲೆ ಉತ್ತರ ಪ್ರದೇಶ ಸರ್ಕಾರ ಈಗಾಗಲೇ ವಿಶೇಷ ಕ್ಷಣಕ್ಕೆ ಸಾಕಷ್ಟು ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಪ್ರತ್ಯೇಕವಾಗಿ ಆ ದಿನವೊಂದರಲ್ಲೇ ಸುಮಾರು 8ರಿಂದ 10 ಕೋಟಿ ಭಕ್ತರು ಅಮೃತ ಸ್ನಾನ ಮಾಡುವ ಸಾಧ್ಯತೆ ಇರುವುದರಿಂದ 12 ಕಿ.ಮೀ ಉದ್ದದ ಘಾಟ್ ಅನ್ನು ಸ್ಥಾಪಿಸಲಾಗಿದೆ. ಸಂಚಾರ ಮತ್ತು ಜನಸಂದಣಿಯನ್ನು ನಿಯಂತ್ರಿಸಲು ವಿಶೇಷ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಯಾವುದೇ ವಾಹನವಿಲ್ಲ, ವಿಐಪಿ ವಲಯವೂ ಇಲ್ಲ

144 ವರ್ಷಗಳಿಗೊಮ್ಮೆ ಎಲ್ಲಾ ಗ್ರಹಗಳು ಒಟ್ಟಿಗೆ ಸಂಗಮವಾಗಲಿರುವ ಈ ಸಂದರ್ಭವು ಭಾರೀ ವಿಶೇಷ. ಈ ಅಮೋಘ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಸಂಖ್ಯೆಯಲ್ಲಿ ಜನರು ಇಲ್ಲಿ ಪಾಲ್ಗೊಳ್ಳುತ್ತಾರೆ. ಮೌನಿ ಅಮಾವಾಸ್ಯೆಯ ದಿನದಂದು ಯಾವುದೇ ವಿಐಪಿ ವಲಯ ಇರುವುದಿಲ್ಲ ಮತ್ತು ಸಿನಿಮಾ ತಾರೆಯರು ಹಾಗೂ ಇತರೆ ಸೆಲೆಬ್ರಿಟಿಗಳಿಗೆ ಯಾವುದೇ ವಿಶೇಷ ವ್ಯವಸ್ಥೆ ಇರುವುದಿಲ್ಲ ಎಂದು ಸರ್ಕಾರ ಈಗಾಗಲೇ ಸ್ಪಷ್ಟವಾಗಿ ತಿಳಿಸಿದೆ. ಪ್ರಯಾಗ್‌ರಾಜ್‌ಗೆ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಜನರ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net