

ಮಾಗಡಿ : ದೇಹದ ಆರೋಗ್ಯ ಚೆನ್ನಾಗಿದ್ದರೆ ಮನಸ್ಸಿನ ಸ್ವಾಸ್ಥ ಉತ್ತಮವಾಗಿರುತ್ತದೆ. ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವಾಗಿದ್ದರೆ ಸದೃಢ ಭಾರತ ನಿರ್ಮಾಣ ಮಾಡಲು ಸಾಧ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಬಿ.ಎಲ್.ಸುರೇಂದ್ರ ಹೇಳಿದರು.
ಪಟ್ಟಣದ ಸರ್ಕಾರಿ ಕಚೇರಿಗಳ ಸಂಕೀರ್ಣದಲ್ಲಿ ಶನಿವಾರ ಪೋಷಣ್ ಅಭಿಯಾನ ಯೋಜನೆಯಡಿ ಆರೋಗ್ಯ ಮತ್ತು ಪೌಷ್ಟಿಕತೆ, ಹಿರಿಯ ನಾಗರೀಕರಿಗೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಜನಜಾಗೃತಿ ಬೀದಿ ನಾಟಕ ಉದ್ಘಾಟಿಸಿ ಮಾತನಾಡಿ,
ಗರ್ಭಿಣಿಯರು, ಬಾಣಂತಿಯರು, ಮಕ್ಕಳ ಆಪೌಷ್ಟಿಕತೆ ನಿವಾರಣೆ ಮಾಡಲು ಕೇಂದ್ರ ಸರ್ಕಾರ ಪೋಷಣ್ ಅಭಿಯಾನ ಪ್ರಾರಂಭಿಸಿದ್ದು, ಸರ್ಕಾರ ಹಮ್ಮಿಕೊಂಡಿರುವ ಈ ಯೋಜನೆಯನ್ನು ನಾಗರೀಕರು ಅರ್ಥಮಾಡಿಕೊಂಡು ಸದೃಢ ಭಾರತ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಕರೆನೀಡಿದರು.
ಅಪೌಷ್ಟಿಕತೆ ಹೊಗಲಾಡಿಸಲು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ತಾಲೂಕಿನಾದ್ಯಂತ ಎರಡು ದಿನಗಳ ಕಾಲ ಬೀದಿ ನಾಟಕ ಹಮ್ಮಿಕೊಳ್ಳಲಾಗಿದೆ. 60 ವರ್ಷ ಮೇಲ್ಪಟ್ಟ ನಾಗರೀಕರು ಕಡ್ಡಾಯವಾಗಿ ಸರ್ಕಾರ ನೀಡುತ್ತಿರುವ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಆರ್.ರಂಗನಾಥ್ ಮಾತನಾಡಿ, ಕೋವಿಡ್ 19 ಬಗ್ಗೆ ಭಯಬೇಡ ಎಚ್ಚರ ವಹಿಸಿ. ಸರ್ಕಾರ ಉಚಿತವಾಗಿ ಕೋವಿಡ್ ಲಸಿಕೆ ನೀಡುತ್ತಿದೆ. ಎಲ್ಲರೂ ಲಸಿಕೆ ಹಾಕಿಸಿಕೊಂಡು ಒಗ್ಗಟ್ಟಿನಿಂದ ಕರೊನಾ ಎದುರಿಸಬೇಕು ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಎಸ್. ಸತೀಶ್, ಸಮನ್ಮಯ ಟ್ರಸ್ಟ್‌ನ ನವೀನ್, ಆರೋಗ್ಯ ಇಲಾಖೆ ತುಕರಾಂ, ಸಿಡಿಪಿಒ ಇಲಾಖೆಯ ಮೇಲ್ವಿಚಾರಕಿ ಶಾಂತಮ್ಮ, ಸಿಬ್ಬಂದಿ ಮಂಜುಳಾ, ಶೋಭಾ, ದಿವ್ಯಾ, ಚೇತನ್, ಮಂಜು, ಚಂದ್ರಕಲಾ, ಲಕ್ಷ್ಮೀದೇವಿ ಇತರರು ಇದ್ದರು.