ಮಾಗಡಿಯಲ್ಲಿ ಸಿದ್ದಲಿಂಗೇಶ್ವರ ಜಯಂತಿ: ಸುತ್ತೂರು ಮಠಾಧ್ಯಕ್ಷ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ

7 RMN-MGD P 1
Published on

ಮಾಗಡಿ : ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ, ಸಿದ್ದಲಿಂಗೇಶ್ವರರು ದಿವ್ಯ ಚೇತನಗಳು, ಅಪಾರವಾದ ತಪೋಶಕ್ತಿ ಹೊಂದಿದ್ದರು ಎಂದು ಸುತ್ತೂರು ಮಠಾಧ್ಯಕ್ಷ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸ್ಮರಿಸಿದರು. ಪಟ್ಟಣದ ಡಾ.ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಭಾನುವಾರ 3ನೇ ವರ್ಷದ ಸಿದ್ದಲಿಂಗೇಶ್ವರ ಜಯಂತಿ ಹಾಗೂ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳ 2ನೇ ಪುಣ್ಯ ಸಂಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು. ಸಿದ್ದಲಿಂಗೇಶ್ವರರು ಮಹಾತಪಸ್ವಿಗಳಾಗಿದ್ದು, ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಸಂಚರಿಸಿ ಜನರಲ್ಲಿ ಧಾರ್ಮಿಕ ಕ್ರಾಂತಿ, ಜ್ಞಾನ ಬೋಧನೆ ಮಾಡಿ ಜನರ ಮನಸ್ಸಿನ ಅಂಧಕಾರ ಹೋಗಲಾಡಿಸಿ ಬೆಳಕಿನ ಕಡೆಗೆ ಕೊಂಡೊಯ್ದಿದ್ದರು. ಮೈಸೂರು ಭಾಗದಲ್ಲಿ ಮಲೆ ಮಹದೇಶ್ವರರು, ಈ ಭಾಗದಲ್ಲಿ ಸಿದ್ದಲಿಂಗೇಶ್ವರರು ಕರ್ನಾಟಕದ ಕಣ್ಣುಗಳಂತೆ ವಿಜೃಂಭಿಸಿದ್ದಾರೆ ಎಂದರು. ಲಿಂಗೈಕ್ಯ ಡಾ.ಶಿವಕುಮಾರ ಶ್ರೀಗಳು ನಾಡು ಕಂಡಂತಹ ಅಪರೂಪದ ಶ್ರೇಷ್ಠ ಸಂತರು. ಜಗತ್ತಿಗೆ ಮಾರ್ಗದರ್ಶನ ನೀಡಿ ಜನಮಾನಸದ ಕತ್ತಲನ್ನು ಹೋಗಲಾಡಿಸಿ ಜ್ಞಾನಜ್ಯೋತಿ ಬೆಳಗಿಸಿದವರು. ಬದುಕಿನಲ್ಲಿ ಪವಾಡಗಳನ್ನು ಮಾಡದೆ ಪವಾಡದ ರೀತಿ ಬದುಕಿದರು. ಮನುಷ್ಯನ ಬದುಕನ್ನು ಪವಿತ್ರಗೊಳಿಸಿಕೊಳ್ಳಲು ಇಂತಹ ಮಹಾತ್ಮರ ಸ್ಮರಣೆ, ನೆನಪು ಮಹತ್ವವಾಗಿದೆ ಎಂದರು. ಬಿ.ವೈ.ವಿಜಯೇಂದ್ರ ಸ್ವಂತ ಶಕ್ತಿಯಿಂದ ರಾಜಕೀಯದಲ್ಲಿ ಬೆಳೆದಿದ್ದಾರೆ. ಜನರ ಮನಸ್ಸಿನ ಮಿಡಿತವನ್ನು ಸುಲಭವಾಗಿ ಅರ್ಥೈಸಿಕೊಳ್ಳುವ ಗುಣ ಅವರಲ್ಲಿದೆ. ಕೆ.ಪಿ.ಮಹದೇವ ಶಾಸ್ತ್ರಿ ಅವರು ಈ ಸಂತರಿಬ್ಬರ ಸ್ಮರಣೆ ಕಾರ್ಯಕ್ರಮ ರೂಪಿಸಿ ಜನರಲ್ಲಿ ಜಾಗೃತಿ ಮೂಡಿಸಿರುವುದು ಸ್ವಾಗತಾರ್ಹ. ಮನುಷ್ಯ ಮಹಾತ್ಮರ ಸ್ಮರಣೆಯಲ್ಲಿ ತಲ್ಲೀನರಾಗಿ ಬದುಕಿನಲ್ಲಿ ಬದಲಾವಣೆ ಮಾಡಿಕೊಳ್ಳುವ ಪ್ರಯತ್ನ ಗ್ರಹಿಸಿಕೊಂಡರೆ ಸಾರ್ಥಕ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದರು. ವಿಜಯೇಂದ್ರ ಪ್ರಶ್ನಾತೀತ ನಾಯಕ: ಶಾಸಕ ಎ.ಮಂಜುಜನಾಥ್ ಮಾತನಾಡಿ, ವೀರಾಪುರ, ಬಾನಂದೂರು ಗ್ರಾಮಗಳನ್ನು ಐತಿಹಾಸಿಕ ತಾಣವನ್ನಾಗಿ ಮಾಡಲು ರುದ್ರೇಶ್ ಜವಾಬ್ದಾರಿ ಹೊತ್ತಿದ್ದಾರೆ. ತಾಲೂಕಿನ ಎಲ್ಲ ಯೋಜನೆಗಳು ಮುಕ್ತಾಯ ಹಂತದಲ್ಲಿದ್ದು, ಸರ್ಕಾರ ಕೂಡ ಪೂರಕವಾಗಿ ಸ್ಪಂದಿಸುತ್ತಿದೆ. ಸಿದ್ಧಗಂಗಾ ಶ್ರೀಗಳಿಗೆ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸುವುದು ಕನಸಾಗಿತ್ತು. ಅದು ನನಸಾಗುತ್ತಿದೆ. ವಿಜಯೇಂದ್ರ ಭವಿಷ್ಯದ ಪ್ರಶ್ನಾತೀತ ನಾಯಕರಾಗಿದ್ದಾರೆ ಎಂದರು. ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಸಮಾಜ ಬಂಧುಗಳನ್ನು ಸನ್ಮಾನಿಸಲಾಯಿತು. ಬಸವೇಶ್ವರ ದೇವಾಲಯದಿಂದ ಸಿದ್ದಲಿಂಗೇಶ್ವರ ಮೂರ್ತಿಯನ್ನು ಹೂವಿನ ರಥದಲ್ಲಿ ಕೂರಿಸಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. 18 ಅಡಿ ಸಿದ್ದಲಿಂಗೇಶ್ವರ ಪ್ರತಿಮೆ ಮತ್ತು ಶ್ರೀಗಳ ಭಾವಚಿತ್ರ ಉಳ್ಳ ಮಂಟಪ, ಬಸವೇಶ್ವರ ಸ್ವಾಮಿ ಮಂಟಪ ಗಮನ ಸೆಳೆದವು. ಕಾರ್ಯಕ್ರಮದ ಆಯೋಜಕ ಕೆ.ಪಿ.ಮಹದೇವ್ ಶಾಸ್ತ್ರಿ, ಮೇಲಣಗವಿ ಮಠದ ಮಲಯ ಶ್ರೀ ಶಾಂತಮುನಿ ಶಿವಾಚಾರ್ಯ ಸಾಮೀಜಿ, ಗದ್ದುಗೆ ಮಠದ ಶ್ರೀ ಮಹಂತ ಸ್ವಾಮೀಜಿ, ಕಂಚುಗಲ್ಲು ಬಂಡೇಮಠ ಶ್ರೀ ಬಸವಲಿಂಗ ಸ್ವಾಮೀಜಿ, ಬೆಟ್ಟಹಳ್ಳಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಜಡೇದೇವರ ಮಠದ ಶ್ರೀ ಇಮ್ಮಡಿ ಬಸವರಾಜ ಸ್ವಾಮೀಜಿ, ಪವಾಡ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಗುಮ್ಮಸಂದ್ರ ಡಾ.ಚಂದ್ರಶೇಖರ ಸ್ವಾಮೀಜಿ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ, ನಿವೃತ್ತ ಪೊಲೀಸ್ ಮಹಾನಿರ್ದೆಶಕ ಡಾ. ಶಂಕರ್ ಬಿದರಿ, ಕೆಆರ್‌ಐಡಿಎಲ್ ಅಧ್ಯಕ್ಷ ಎಂ.ರುದ್ರೇಶ್, ಜಿಪಂ ಅಧ್ಯಕ್ಷ ಮರಿಸ್ವಾಮಿ, ವಿಧಾನ ಪರಿಷತ್ ಸದಸ್ಯ ಆ.ದೇವೇಗೌಡ, ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ, ಪುರಸಭೆ ಅಧ್ಯಕ್ಷೆ ಭಾಗ್ಯಮ್ಮ, ಸದಸ್ಯೆ ಶಿವರುದ್ರಮ್ಮ, ವೀರಶೈವ ಮುಖಂಡ ಪೊಲೀಸ್ ವಿಜಯ್ ಕುಮಾರ್, ತಾಲೂಕು ವೀರಶೈವ ಸಂಘದ ಅಧ್ಯಕ್ಷ ಎಸ್‌ಸಿಬಿಎಸ್ ಶಿವರುದ್ರಯ್ಯ, ಬಿಎಂಟಿಸಿ ನಿರ್ದೇಶಕ ಕೆ.ಪಿ.ಬೃಂಗೇಶ್, ಎನ್‌ಡಿಎ ಮಾಜಿ ಅಧ್ಯಕ್ಷ ಕೆ.ಪಿ.ಆನಂದ್, ಡೇರಿ ಅಧ್ಯಕ್ಷ ಎಸ್‌ಸಿಬಿಎಸ್ ಮಂಜುನಾಥ್, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.,ಕೃಷ್ಣಮೂರ್ತಿ, ಬಿಎಂಆರ್‌ಡಿಎ ಅಧ್ಯಕ್ಷ ಡಾ.ರಂಗಧಾಮಯ್ಯ, ಬಿಜೆಪಿ ಮುಖಂಡ ಎ.ಎಚ್. ಬಸವರಾಜು, ದಿಶಾ ಸಮಿತಿ ಸದಸ್ಯ ಜೆ.ಪಿ.ಚಂದ್ರೇಗೌಡ, ಪುರಸಭೆ ಅಧ್ಯಕ್ಷೆ ಭಾಗ್ಯಮ್ಮ, ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ಗುರುಮಾದಯ್ಯ ಇತರರು ಇದ್ದರು.

ಮುಖ್ಯಮಂತ್ರಿ ಬಿಎಸ್‌ವೈ ಗುಣಗಾನ ಎಡೆಯೂರು ಕ್ಷೇತ್ರ ಅಭಿವೃದ್ಧಿಯಾಗಿದ್ದರೆ ಅದರಲ್ಲಿ ಬಿಎಸ್‌ವೈ ಕೊಡುಗೆ ಸ್ಮರಿಸಿಕೊಳ್ಳಬೇಕು. ದಕ್ಷಿಣ ಭಾಗದಲ್ಲಿ ಎಡೆಯೂರು, ಉತ್ತರ ಭಾಗದಲ್ಲಿ ಬಸವಕಲ್ಯಾಣವನ್ನು ಅಭಿವೃದ್ಧಿಗೊಳಿಸುವ ಕಾರ್ಯವನ್ನು ಬಿಎಸ್‌ವೈ ಮಾಡಿದ್ದಾರೆ. ಸಮರ್ಥ ನಾಯಕರಾಗಿ ನಿರ್ವಹಣೆಗೆ ಎಡೆಯೂರು ಸಿದ್ದಲಿಂಗೇಶ್ವರ ಅಶೀರ್ವಾದವಿದೆ ಎಂದು ತುಮಕೂರು ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು. ಸಿದ್ದಲಿಂಗೇಶ್ವರರ ಪರಂಪರೆಯನ್ನು ಶಿವಕುಮಾರ ಶ್ರೀಗಳು ಮುಂದುವರಿಸಿಕೊಂಡು ಬಂದಿದ್ದಾರೆ. ಲಿಂಗೈಕ್ಯ ಶ್ರೀಗಳು ಸಿದ್ಧಗಂಗೆ ಮಠವನ್ನು ಬೆಳೆಸಿ ಸಮಾಜಕ್ಕೆ ಅರ್ಪಿಸಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಎರಡು ಜಯಂತಿಗಳು ಒಂದೇ ವೇಳೆ ಮಾಡದೆ ಸಿದ್ದಲಿಂಗೇಶ್ವರ ಜಯಂತಿ ಆಚರಣೆ ಮಾತ್ರ ಮಾಡಿ. ಎಡೆಯೂರಿನಲ್ಲಿ ಸಿದ್ದಲಿಂಗೇಶ್ವರರ 111 ಅಡಿ ಪ್ರತಿಮೆ ನಿರ್ಮಾಣದ ಕಾರ್ಯಕ್ಕೆ ಬಿಎಸ್‌ವೈ ಮುಂದಾಗಿರುವುದು ಸ್ವಾಗತಾರ್ಹ ಎಂದರು. ಮಹಾತ್ಮರ ಸ್ಮರಣೆಯಿಂದ ಜೀವನದಲ್ಲಿ ಮುಕ್ತಿ ಸಾಧ್ಯ. 12ನೇ ಶತಮಾನದ ಬಸವಾದಿ ಶರಣರ ನಂತರ 15ನೇ ಶತಮಾನದಲ್ಲಿ ಕ್ರಾಂತಿ ಮುಂದುವರಿಸಿದ ಕೀರ್ತಿ ತೋಂಟದ ಸಿದ್ದಲಿಂಗೇಶ್ವರರಿಗೆ ಸಲ್ಲುತ್ತದೆ. ಅವರು ಪಾದ ಇಟ್ಟ ಕಡೆ ಆ ಕ್ಷೇತ್ರಗಳೆಲ್ಲ ಪುಣ್ಯ ಕ್ಷೇತ್ರಗಳಾಗಿವೆ. ಆ ಪೈಕಿ ಸಿದ್ಧಗಂಗಾ ಕ್ಷೇತ್ರವೂ ಒಂದಾಗಿದೆ. ವಿರಕ್ತ ಮಠಗಳ ಪರಂಪರೆಯನ್ನು ಬೆಳೆಸಲು ಮೂಲ ಕಾರಣಕರ್ತರು ಸಿದ್ದಲಿಂಗೇಶ್ವರರು. ಶ್ರೀ ಸಿದ್ದಲಿಂಗ ಸ್ವಾಮೀಜಿ ಸಿದ್ಧಗಂಗಾ ಮಠ, ತುಮಕೂರು ಸಿದ್ಧಲಿಂಗೇಶ್ವರ, ಲಿಂಗೈಕ್ಯ ಡಾ. ಶಿವಕುಮಾರ ಶ್ರೀಗಳ ಸೇವೆ ವಿಶ್ವ ಖ್ಯಾತಿಯಾಗಿದ್ದು ಅದನ್ನು ಯುವಪೀಳಿಗೆಗೆ ತಿಳಿಸುವ ಉದ್ದೇಶದಿಂದ ಕಾರ್ಯಕ್ರಮ ರೂಪಿಸಲಾಗಿದೆ. ಇದಕ್ಕೆ ಸಹಕರಿಸಿದ ಎಲ್ಲಾ ಮಠಾಧೀಶರಿಗೂ, ಗಣ್ಯರಿಗೂ ಅಭಿನಂದನೆಗಳು. ಕೆ.ಪಿ.ಮಹದೇವ್ ಶಾಸ್ತ್ರಿ ಕಾರ್ಯಕ್ರಮ ಆಯೋಜನಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net