

ಶಿವಮೊಗ್ಗ: ಮಡಿವಾಳ ಮಾಚಿದೇವರು ಯಾವುದೇ ಜಾತಿ, ಜನಾಂಗ, ಧರ್ಮಕ್ಕೆ ಸಿಮೀತವಾಗದೆ ಇಡೀ ಮನುಕುಲದ ಒಳಿತಿಗಾಗಿ ದುಡಿದವರು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಮಡಿವಾಳ ಸಮಾಜ ಸಂಘ ಸಹಯೋಗದೊಂದಿಗೆ ಆಯೋಜಿಸಿದ್ದ ಶ್ರೀ ಮಡಿವಾಳ ಮಾಚಿದೇವ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಮಡಿವಾಳ ಮಾಚಿದೇವ 12ನೇ ಶತಮಾನದಲ್ಲಿ ಜಾತಿ ಪದ್ಧತಿ ವಿರುದ್ಧ ಹೋರಾಡಿದರು. ಆ ಮೂಲಕ ಸರ್ವರಿಗೂ ಸಮಪಾಲು, ಸಮಬಾಳು ಎಂಬ ಆದರ್ಶದ ಮಾರ್ಗವನ್ನು ಹಾಕಿಕೊಟ್ಟವರು. ಪ್ರಸ್ತುತ ನಾವೆಲ್ಲರೂ ಅವರ ಜೀವನಾದರ್ಶಗಳನ್ನು ಅನುಸರಿಸಬೇಕು ಎಂದರು.
ಎಂಎಲ್‌ಸಿ ಬಲ್ಕೀಶ್ ಬಾನು ಮಾತನಾಡಿ, ಯುವಕರಿಗೆ ಇಂತಹ ಮಹನೀಯರ ಪರಿಚಯವಾಗುವುದು ಇತ್ತೀಚಿನ ವಿದ್ಯಾಮಾನಗಳಲ್ಲಿ ಅಗತ್ಯವಾಗಿದೆ. ಯುವಜನತೆಯನ್ನು ಕೂಡ ಕಾರ್ಯಕ್ರಮದಲ್ಲಿ ಒಳಗೊಳ್ಳುವಂತೆ ಮಾಡಬೇಕು. ಆ ಮೂಲಕ ವಚನಕಾರರ ಸಂದೇಶವು ಇಡೀ ಸಮಾಜಕ್ಕೆ ತಲುಪಬೇಕು ಎಂದರು.
ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮಾತನಾಡಿ, ಮಾಚಿದೇವ ಮನುಷ್ಯರಲ್ಲ. ಅವರು ದೈವ ಸಂಭೂತರು. 12ನೇ ಶತಮಾನದಲ್ಲಿ ಸಮಾಜದಲ್ಲಿನ ಅಂಕುಡೊಂಕು ತಿದ್ದಲು ಬಂದವರು. ಆ ಮೂಲಕ ವಚನ ಕ್ರಾಂತಿ ಆರಂಭಿಸಿ ಶೋಷಿತ ವರ್ಗಗಳ ಸುಧಾರಣೆ ಮಾಡಿದರು ಎಂದರು. ಜಿಲ್ಲಾ ಮಡಿವಾಳ ಸಮಾಜ ಸಂಘದ ಅಧ್ಯಕ್ಷ ಎಚ್.ಎಸ್.ಸದಾಶಿವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ನಿವೃತ್ತ ಶಿಕ್ಷಕ ಕೆ.ಬಿ.ಮಂಜಪ್ಪ ಹಾಜರಿದ್ದರು.