

ಮಡಿಕೇರಿ:
ಶಕ್ತಿ ಇದ್ದವರಷ್ಟೇ ಮಡಿಕೇರಿ ದಸರಾ ನೋಡುವಂತಾಗಿದೆ. ಈಗ ಉತ್ಸವದಲ್ಲಿ ಬದಲಾವಣೆ ಮಾಡದೇ ಹೋದರೆ ಮುಂದೆ ಇಲ್ಲಿಗೆ ಮಕ್ಕಳನ್ನು ಕರೆದುಕೊಂಡು ಬರಬಾರದು ಎಂದು ನಾಮಫಲಕ ಹಾಕಬೇಕಾದ ಸ್ಥಿತಿ ಬರಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಆತಂಕ ವ್ಯಕ್ತಪಡಿಸಿದ್ದಾರೆ. ಶನಿವಾರ ಸಂಜೆ ತಮ್ಮ ಕಚೇರಿಯಲ್ಲಿ ನಡೆದ ಮಾಧ್ಯಮದವರೊಂದಿಗಿನ ಚರ್ಚೆಯ ನಂತರ ಮಾತನಾಡಿದರು.
ಹತ್ತು ದೇವಾಲಯಗಳ ಸಮಿತಿಯವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸುಂದರವಾದ, ಅರ್ಥಗರ್ಭಿತವಾದ ಮಂಟಪ ನಿರ್ಮಿಸಿದ್ದರು. ನೂಕುನುಗ್ಗಲಿನ ಮಧ್ಯೆ ಕೇವಲ ಎರಡು ಮಂಟಪಗಳ ಪ್ರದರ್ಶನವನ್ನಷ್ಟೇ ನೋಡುವುದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ನನಗೆ ಸಾಧ್ಯವಾಯಿತು. ಕಾಲ್ತುಳಿತದಂತಹ ಘಟನೆ ಸಂಭವಿಸಿ ದೊಡ್ಡ ದುರಂತ ಸಂಭವಿಸಬಹುದು. ಹಾಗಾಗಿ, ಉತ್ಸವದಲ್ಲಿ ಬದಲಾವಣೆ ಮಾಡಬೇಕಿದೆ.
ದೊಡ್ಡ ಮೈದಾನದಲ್ಲಿ ಎಲ್ಲರೂ ವ್ಯವಸ್ಥಿತವಾಗಿ ಕುಳಿತು ಎಲ್ಲಾ ಮಂಟಪಗಳ ಪ್ರದರ್ಶನಗಳನ್ನು ನಿಗದಿತವಾದ ಪ್ರಮಾಣ ಮೀರದಂತಹ ಧ್ವನಿವರ್ಧಕ ಬಳಸಿ ವೀಕ್ಷಿಸುವ ವ್ಯವಸ್ಥೆ ಆಗಬೇಕು. ಡಿ.ಜೆ.ಯನ್ನು ಬಿಟ್ಟು ಸ್ಥಳೀಯ ಕಲಾವಿದರಿಗೆ ಅವಕಾಶ ಕೊಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಡಿಕೇರಿ ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಧ್ವನಿವರ್ಧಕ ಬಳಕೆ ಮಾಡಿದ್ದರಿಂದ ಜಿಲ್ಲಾಸ್ಪತ್ರೆಯಿಂದ ಕೆಲವು ರೋಗಿಗಳನ್ನು ಬೇರೆ ಕಡೆ ಸ್ಥಳಾಂತರ ಮಾಡಲಾಗಿದೆ. ನಗರದ ಹಿರಿಯ ನಾಗರಿಕರು ಮನೆಗೆ ಬೀಗ ಹಾಕಿ ಠಾಣೆಗೆ ಮಾಹಿತಿ ನೀಡಿ, ತಮ್ಮ ಸಂಬAಧಿಕರ ಮನೆಗೆ ತೆರಳಿದ್ದಾರೆ. ಇಂತಹ ಘಟನೆಗಳು ಮುಂದಿನ ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಮರುಕಳಿಸಬಾರದು.
ಸಣ್ಣ ಸಣ್ಣ ರಸ್ತೆಯಲ್ಲಿ ಕೋಟ್ಯಂತರ ರೂ. ಖರ್ಚು ಮಾಡಿ ಮಾಡುವ ದಸರಾವನ್ನು ಸಾಮಾನ್ಯ ಜನರು ವೀಕ್ಷಣೆ ಮಾಡಲು ಆಗುತ್ತಿಲ್ಲ. ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಸಿಗಬೇಕು. ದಸರಾ ಎಂದರೆ ನಮ್ಮ ಹಬ್ಬ ಆಗಬೇಕು. ನಮ್ಮ ನಾಡಿನ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಬೇಕು. ನಮ್ಮದೇ ಸಂಸ್ಕೃತಿಯನ್ನು ಬಿಂಬಿಸುವ ಹಲವು ವಾದ್ಯಗಳು ಸಂಗೀತಗಳು ಇಲ್ಲಿವೆ. ಅದನ್ನು ನಂಬಿ, ಗೌರವಿಸಿ ಬದುಕುವ ಹಲವು ಕಲಾಕುಟುಂಬಗಳು ನಮ್ಮಲ್ಲಿವೆ. ನಾವು ನಮ್ಮ ಸ್ಥಳೀಯ ವೇದಿಕೆಗಳಲ್ಲಿ ಇಂತಹ ಹಬ್ಬಗಳಲ್ಲಿ ಅವಕಾಶ ನೀಡದೆ ಹೋದಲ್ಲಿ ನಮ್ಮ ಆಚಾರ ವಿಚಾರ ಮತ್ತು ಸಂಸ್ಕೃತಿಯನ್ನು ನಾವೇ ನಾಶ ಮಾಡಿದಂತಾಗುತ್ತದೆ. ಅಲ್ಲದೆ ಅದನ್ನು ನಂಬಿದವರಿಗೂ ಅವಕಾಶವಿಲ್ಲದಂತಾಗುತ್ತದೆ.
ಮಡಿಕೇರಿ ರಸ್ತೆ ತೀರಾ ಕಿರಿದಾಗಿದೆ. ಆದರೆ ಕೆಲವು ಮಂಟಪಗಳು ರಸ್ತೆಗಿಂತ ದೊಡ್ಡದಾಗಿತ್ತು. ಹೀಗೆ ಮಾಡಿದರೆ ಜನ ಓಡಾಡುವುದು ಹೇಗೆ? ಪ್ರಶಸ್ತಿ ನೀಡುವ ಕಾರಣಕ್ಕಾಗಿ ಎಲ್ಲರೂ ಪೈಪೋಟಿಯಿಂದ ಮಂಟಪಗಳನ್ನು ನಿರ್ಮಿಸುತ್ತಾರೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮಂಟಪಗಳ ತಯಾರು ಮಾಡಬೇಕು. ಮಂಟಪವೊAದರ ವಾಹನದ ತೂಕ ಬ್ಯಾಲೆನ್ಸ್ ಆಗದ ಹಿನ್ನೆಲೆಯಲ್ಲಿ ಟ್ರಾö್ಯಕ್ಟರ್ ಮಗುಚಿದ ಘಟನೆ ದಸರಾ ವೇಳೆ ಆಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗದಿರುವುದು ನಮ್ಮ ನಾಡಿನ ಪುಣ್ಯ. ಈ ಘಟನೆ ನಮಗೆ ಪಾಠವಾಗಬೇಕು. ಅಲ್ಲಿ ಜನರು ಇದ್ದಿದ್ದರೆ ಭಾರಿ ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಆದರೆ ದೇವರ ಕೃಪೆಯಿಂದ ದೊಡ್ಡ ಅನಾಹುತ ತಪ್ಪಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಎಲ್ಲಾ ಮಂಟಪ ಸಮಿತಿಯವರು ಜಾಗೃತರಾಗಬೇಕು. ಅವೈಜ್ಞಾನಿಕ ಮಂಟಪಗಳ ನಿರ್ಮಾಣ ಒಂದಲ್ಲ ಒಂದು ದಿನ ಸಮಸ್ಯೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.