ಬೈಕ್​-ಸ್ಕೂಟಿ ನಡುವೆ ಅಪಘಾತ: ಓರ್ವ ವಿದ್ಯಾರ್ಥಿನಿ ಸಾವು, ಮತ್ತೊಬ್ಬಳ ಸ್ಥಿತಿ ಗಂಭೀರ

Kodugu Student
Published on

ಕೊಡಗು: ಬೈಕ್​ ಮತ್ತು ಸ್ಕೂಟಿ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಕಾಲೇಜು ವಿದ್ಯಾರ್ಥಿನಿ ಸಾವಿಗೀಡಾಗಿದ್ದು, ಮತ್ತೊಬ್ಬಳು ಗಾಯಗೊಂಡಿರುವ ಘಟನೆ ಕುಶಾಲನಗರದ ಕೂರ್ಗ್ ಸಿನಿಪ್ಲೆಕ್ಸ್ ಬಳಿ ನಡೆದಿದೆ.

ಕುಶಾಲನಗರದ ನಿವಾಸಿ ಭಾವನ (21) ಮೃತ ವಿದ್ಯಾರ್ಥಿನಿ. ಮಡಿಕೇರಿ ಕಡೆಗೆ ಬರುತ್ತಿದ್ದ ಬುಲೆಟ್ ಬೈಕ್​ಗೆ ಮಡಿಕೇರಿಯಿಂದ ಕುಶಾಲನಗರ ಕಡೆಗೆ ಹೊರಟಿದ್ದ ವಿದ್ಯಾರ್ಥಿನಿಯರಿದ್ದ ಸ್ಕೂಟಿ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ.

ಮೃತ ಭಾವನ ಇಂದಿರಾ ಬಡಾವಣೆಯ ಪೂಣಚ್ಚ ಎಂಬುವರ ಪುತ್ರಿ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಚಿಕಿತ್ಸೆಗೆಂದು ಮೈಸೂರಿಗೆ ಸಾಗಿಸುವಾಗ ಮಾರ್ಗಮಧ್ಯೆ ಅಸುನೀಗಿದ್ದಾಳೆ. ಗಾಯಗೊಂಡಿರುವ ಮತ್ತೊಬ್ಬ ವಿದ್ಯಾರ್ಥಿನಿಯನ್ನು ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ.

ಮೃತಳು ಮತ್ತು ಗಾಯಗೊಂಡ ವಿದ್ಯಾರ್ಥಿನಿ ಇಬ್ಬರು ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ‌.ಎಂ ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳು. ಘಟನಾ ಸ್ಥಳಕ್ಕೆ ಕುಶಾಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net