ಪತ್ನಿ ಮೂಳೆ-ಮಾಂಸ ಬೇಯಿಸಲು ಅದೊಂದು OTT ಚಿತ್ರವೇ ಪ್ರೇರಣೆ! ಹತ್ಯೆಗೈಯುವ ಮುನ್ನ ಲೆಕ್ಕವಿಲ್ಲದಷ್ಟು ಬಾರಿ ವೀಕ್ಷಣೆ | Madhavi Murder

Hyderabad Horror
Published on

Madhavi Murder Case: ಜ.15ರಂದು ಪತ್ನಿಯ ಶೀಲವನ್ನು ಶಂಕಿಸಿ, ಆಕೆಯನ್ನು ಕ್ರೂರವಾಗಿ ಕೊಲೆಗೈದು, ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಕುಕ್ಕರ್​ನಲ್ಲಿ ಬೇಯಿಸಿ, ಕಡೆಗೆ ಕೆರೆಯಲ್ಲಿ ಬಿಸಾಡಿದ ಬರ್ಬರ ಹತ್ಯೆ ಘಟನೆಯ ತನಿಖೆ ಇದೀಗ ಮತ್ತಷ್ಟು ಚುರುಕಾಗಿ ಸಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿಕೊಂಡು ಹೆಂಡತಿಯನ್ನು ಬರ್ಬರವಾಗಿ ಹತ್ಯೆಗೈದ ಪತಿ ಗುರುಮೂರ್ತಿ ಸದ್ಯ ಪೊಲೀಸರ ವಶದಲ್ಲಿದ್ದು, ಕೊಲೆ ನಡೆದ ಮನೆಯಲ್ಲಿ ಸಿಕ್ಕ ಡಿಎನ್​ಎ ಮಾದರಿಯನ್ನು ಎಫ್​ಎಸ್​ಎಲ್​ಗೆ ರವಾನಿಸಲಾಗಿದೆ. ವರದಿಗಾಗಿ ಕಾಯುತ್ತಿರುವ ಖಾಕಿ ಪಡೆಗೆ ಸದ್ಯ ಗುರುಮೂರ್ತಿ ಬಿಚ್ಚಿಟ್ಟ ಸಂಗತಿಯೊಂದು ಬಿಚ್ಚಿಬೀಳಿಸಿದೆ.

ತುಂಡು ತುಂಡಾಗಿ ಕತ್ತರಿಸಿ, ಬೇಯಿಸಿದ

ಕೊಲೆಯಾದ ಮಹಿಳೆಯನ್ನು ವೆಂಕಟ ಮಾಧವಿಯನ್ನು (35) ಗಂಡ ಗುರುಮೂರ್ತಿ ಭೀಕರವಾಗಿ ಹತ್ಯೆಗೈದಿದ್ದಾನೆ. ಕ್ರೈಮ್​ ಆಧರಿತ ಸರಣಿಗಳನ್ನು ನೋಡಿ, ಪತ್ನಿಯ ಕೊಲೆಗೆ ಸಂಚು ರೂಪಿಸಿದ ಪತಿ, ತಾನು ಮಾಡುವ ಕೃತ್ಯದ ಬಗ್ಗೆ ಯಾರಿಗೂ ತಿಳಿಯಬಾರದು. ಇದರಲ್ಲಿ ತನ್ನ ಕೈವಾಡವಿರುವುದು ಗೊತ್ತಾಗಬಾರದು ಎಂಬ ನಿಟ್ಟಿನಲ್ಲಿ ಮಾಡಿರುವ ಭೀಕರ ಕೊಲೆ ಪೊಲೀಸರಿಗೆ ಈಗಲೂ ತಲೆನೋವಾಗಿ ಪರಿಣಮಿಸಿದೆ. ಪತ್ನಿಯನ್ನು ಹತ್ಯೆಗೈದು ಆಕೆಯ ದೇಹವನ್ನು ಮನೆಯ ಶೌಚಗೃಹದಲ್ಲಿ ತುಂಡು ತುಂಡಾಗಿ ಕತ್ತರಿಸಿದ್ದ ಪಾಪಿ ಪತಿ, ನಂತರದಲ್ಲಿ ಮಾಂಸ ಮತ್ತು ಮೂಳೆಯನ್ನು ಬೇರ್ಪಡಿಸಿ, ಮೂರು ದಿನಗಳ ಕಾಲ ಅದನ್ನು ಕುಕ್ಕರ್​ನಲ್ಲಿ ಬೇಯಿಸಿ, ಕೆರೆಯಲ್ಲಿ ಬಿಸಾಡಿದ್ದ. ಇಷ್ಟೊಂದು ಭೀಕರವಾಗಿ ಕೊಲೆಗೈಯಲು ನಿನಗೆ ಹೇಗೆ ಮನಸ್ಸಾಯಿತು? ಇಷ್ಟೆಲ್ಲ ಸಂಚು ರೂಪಿಸಲು ಹೇಳಿಕೊಟ್ಟವರಾರು ಎಂಬ ಖಾಕಿ ಪ್ರಶ್ನೆಗೆ ಆತನಿಂದ ಬಂದ ಉತ್ತರವೇ ಒಟಿಟಿ ಸಿನಿಮಾ!

ಮಲಯಾಳಂ ಚಿತ್ರ

ಪೊಲೀಸರು ನಡೆಸಿದ ತನಿಖೆಯಲ್ಲಿ ಸತ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಆರೋಪಿ ಗುರುಮೂರ್ತಿ, ಆ ಒಂದು ಮಲಯಾಳಂ ಸಿನಿಮಾದಿಂದ ನಾನು ಪ್ರೇರಿತನಾದೆ. ಮಲಯಾಳಂ ಭಾಷೆಯಲ್ಲಿ ಮೂಡಿಬಂದ 'ಸೂಕ್ಷ್ಮದರ್ಶಿನಿ' ಚಿತ್ರವನ್ನು ಹಲವು ಬಾರಿ ಒಟಿಟಿಯಲ್ಲಿಯೇ ನೋಡಿದ್ದೆ. ಆ ಸಿನಿಮಾವನ್ನು ಆಧರಿಸಿ ನನ್ನ ಪತ್ನಿಯನ್ನು ಕೊಲೆ ಮಾಡಲು ಸಂಚು ರೂಪಿಸಿದೆ. ಅದರಲ್ಲಿ ಬಂದ ದೃಶ್ಯಗಳಿಂದ ಪ್ರೇರಿತಗೊಂಡು, ಪತ್ನಿಯನ್ನು ಅಂತೆಯೇ ಕೊಲೆ ಮಾಡಿದೆ ಎಂದು ಹೇಳಿದ್ದಾನೆ.

ಸಣ್ಣ ಸುಳಿವು ಸಿಗದಂತೆ ಸಾಕ್ಷ್ಯ ನಾಶ

ಆತನ ಹೇಳಿಕೆ ಪರಿಗಣಿಸಿದ ಪೊಲೀಸರು ಆರೋಪಿಯ ಕೈಯಲ್ಲಿ ಸುಟ್ಟ ಗಾಯ ಇರುವುದನ್ನು ಗಮನಿಸಿದ್ದಾರೆ. ಇದರೊಂದಿಗೆ, ಮಾಧವಿ ಹತ್ಯೆ ಮಿಸ್ಸಿಂಗ್ ಕೇಸ್​ ಅಲ್ಲ ಇದೊಂದು ಕೊಲೆ ಪ್ರಕರಣ ಎಂದು ಪೊಲೀಸರು ತೀರ್ಮಾನಿಸಿದ್ದಾರೆ. ಸದ್ಯ ವರದಿಗಳಿಗಾಗಿ ಕಾಯುತ್ತಿರುವ ಖಾಕಿ ಪಡೆ, ಮಾಧವಿ ನಾಪತ್ತೆ ಪ್ರಕರಣವನ್ನು ಇಂದು ಕೊಲೆ ಕೇಸ್​ ಎಂದು ಘೋಷಿಸುವ ಸಾಧ್ಯತೆಯಿದೆ. ಡಿಎನ್‌ಎ ವರದಿ ಬಂದ ನಂತರ ಪೊಲೀಸರು ಗುರುಮೂರ್ತಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಿದ್ದಾರೆ ಎಂದು ವರದಿಯಾಗಿದೆ.

ಪೊಲೀಸರಿಗೆ ಪತ್ನಿಯನ್ನು ಕೊಂದಿದ್ದು ನಾನೇ ಎಂಬುದಕ್ಕೆ ಒಂದೇ ಒಂದು ಸಣ್ಣ ಸಾಕ್ಷಿಯೂ ಸಿಗದಂತೆ ಮಾಡಿರುವ ಗುರುಮೂರ್ತಿಯನ್ನು ಶೀಘ್ರವೇ ಸಿಕ್ಕ ಪುರಾವೆಗಳನ್ನು ಮುಂದಿಟ್ಟು, ಕೋರ್ಟ್​ ಮುಂದೆ ಹಾಜರುಪಡಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಸದ್ಯ ವೈಜ್ಞಾನಿಕ ಪುರಾವೆಗಳೊಂದಿಗೆ ಪ್ರಕರಣವನ್ನು ಒಂದು ಹಂತಕ್ಕೆ ಭೇದಿಸಿರುವ ಖಾಕಿಗೆ ಮತ್ತಷ್ಟು ಬಲವಾದ ಸಾಕ್ಷ್ಯಾಧಾರಗಳ ಅಗತ್ಯವಿದೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net