ಮಾದಕ ವ್ಯಸನ ಒಂದು ಸಾಮಾಜಿಕ ಪಿಡುಗು

Published on

ಬೆಂಗಳೂರು:
ಮಾದಕ ವ್ಯಸನ ಒಂದು ಸಾಮಾಜಿಕ ಪಿಡುಗಾಗಿದ್ದು, ಅದರ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದು ಜಯನಗರ ಪೊಲೀಸ್ ಠಾಣೆಯ ಸಬ್ ಇನ್‌ಸ್ೆಕ್ಟರ್ ಹೆಚ್.ಎನ್. ಮಹಾಲಕ್ಷ್ಮಮ್ಮ ತಿಳಿಸಿದರು.
ನಗರದ ಸಪ್ತಗಿರಿ ಪದವಿ ಪೂರ್ವ ಕಾಲೇಜಿನಲ್ಲಿ ಅಂತರ ರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಮತ್ತು ಅಕ್ರಮ ಸಾಗಾಟ ವಿರೋಧಿ ದಿನದ ಅಂಗವಾಗಿ ನಡೆದ ಜಾಗೃತಿ ಮತ್ತು ಅರಿವು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ವಿಲಾಸಿ ಜೀವನ ಶೈಲಿಗೆ ಮಾರುಹೋದ ಜನರು, ಯುವಕರು, ಮಾದಕ ವ್ಯಸನಗಳ ಮೇಲೆ ಅಪಾರವಾಗಿ ಅವಲಂಬನೆಯಾಗಿದ್ದಾರೆ. ಒಂದು ಅಂದಾಜಿನ ಪ್ರಕಾರ, 20 ಮಿಲಿಯನ್ ಜನರು ಮಾದಕ ವ್ಯಸನಗಳ ಮೇಲೆ ಅವಲಂಬನೆಯಾಗಿದ್ದು, ಪ್ರತಿ ವರ್ಷ 5.70 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ ಎಂದರು.
ದೇಶದಲ್ಲಿ 7.5 ಕೋಟಿ ಮಾದಕವ್ಯಸನಿಗಳಿದ್ದಾರೆ. ಪ್ರತಿದಿನ 10 ಜನರು ಮಾದಕ ವ್ಯಸನಗಳಿಗೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪ್ರತಿ 10 ಜನರಲ್ಲಿ ಇಬ್ಬರು 15 ವರ್ಷಕ್ಕಿಂತ
ಕಡಿಮೆ ವಯೋಮಾನದವರೇ ಆಗಿರುವುದು ನೋವಿನ ಸಂಗತಿ ಎಂದರು.
ಯುವಕರು ಭವಿಷ್ಯದ ಚಿಂತನೆ, ಮುಂದಾಲೋಚನೆ ಮಾಡದೇ ತತ್ ಕ್ಷಣದ ಸುಖ, ಸಂತೋಷ ಅನುಭವಿಸಲು ಪಾಶ್ಚಿಮಾತ್ಯ ಜೀವನ ಶೈಲಿಯ ಬೆನ್ನತ್ತಿ ಕೆಲ ಅಡ್ಡದಾರಿಗಳನ್ನು ತುಳಿಯುತ್ತಿದ್ದಾರೆ ಎಂದರು.
ಸಬ್ ಇನ್‌ಸ್ೆಕ್ಟರ್ ಹನುಮಂತರಾಜು ಮಾತನಾಡಿ, ಇಂತಹ ಆತಂಕಕಾರಿ ಪ್ರಕರಣಗಳು
ಕಂಡುಬಂದ ತಕ್ಷಣವೇ ವ್ಯಕ್ತಿಗತವಾಗಿ ಅಥವಾ 112 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಪೊಲೀಸ್ ಇಲಾಖೆಗೆ ತಿಳಿಸುವ ಮೂಲಕ ಸಮಾಜಕ್ಕೆ ಕಂಟಕವಾಗುವಂತಹ ಜಾಲಗಳನ್ನು ಪತ್ತೆ ಹಚ್ಚಿ ಮಟ್ಟ ಹಾಕುವಲ್ಲಿ ಸಹಕರಿಸುವಂತೆ ವಿನಂತಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆಚ್.ಎಸ್. ನಿರಂಜನಾರಾಧ್ಯ, ಭಾರತವು ಯುವಜನತೆಯೇ ಹೆಚ್ಚಿರುವ ರಾಷ್ಟ್ರವಾಗಿದ್ದು, ಯುವಶಕ್ತಿಯಿಂದಲೇ ಶೀಘ್ರ ವೇಗದಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಯನಗರ ಪೊಲೀಸ್ ಠಾಣೆಯ ಸಿಬ್ಬಂದಿ, ಸಪ್ತಗಿರಿ ಪದವಿ ಪೂರ್ವ ಕಾಲೇಜಿನ ಅಧ್ಯಾಪಕ ಹಾಗೂ ನಿರ್ವಾಹಕ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net