ಮೂವರ ಮೇಲೆ ದಾಳಿ ಮಾಡಿದ ಹುಚ್ಚುನಾಯಿ ವೃದ್ಧೆಯ ಮುಖವನ್ನೇ ಕಚ್ಚಿ ತಿಂದಿದೆ!

mad dog attack
Published on

ಅರಕಲಗೂಡು: ತಾಲೂಕಿನ ಕೇರಳಾಪುರ ಗ್ರಾಮದಲ್ಲಿ ಮನೆ ಮುಂದೆ ಕುಳಿತಿದ್ದ 70 ವರ್ಷದ ವೃದ್ಧೆ ಮೇಲೆ ದಾಳಿ ನಡೆಸಿದ ಹುಚ್ಚು ನಾಯಿ ಅವರ ಮುಖ ಮತ್ತು ಬಾಯಿ ಕಚ್ಚಿ ವಿಕಾರಗೊಳಿಸಿದೆ. ಸಮೀಪದಲ್ಲೇ ಆಟವಾಡುತ್ತಿದ್ದ 3 ವರ್ಷದ ಬಾಲಕಿ ಸೇರಿ ಮೂವರ ಮೇಲೆ ದಾಳಿ ನಡೆಸಿದ್ದು, ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ಕೇರಳಾಪುರ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಕಾಣಿಸಿಕೊಂಡ ಹುಚ್ಚುನಾಯಿ ಗ್ರಾಮಸ್ಥರ ಮೇಲೆಲ್ಲ ದಾಳಿ ನಡೆಸಲು ಮುಂದಾಗಿದ್ದು, ಹಲವರು ಮನೆಯೊಳಗೆ ಓಡಿಹೋಗಿ ಬಾಗಿಲು ಹಾಕಿಕೊಂಡರು. ಮನೆ ಮುಂದೆ ಆಟವಾಡುತ್ತಿದ್ದ ಹೇಮಂತಕುಮಾರ್ ಅವರ ಮೂರು ವರ್ಷದ ಮಗಳು ತನುಶ್ರೀ ಮೇಲೂ ದಾಳಿ ಮಾಡಿದ್ದು, ಮಗುವಿನ ಬಲಗೈ ಮಾಂಸ ಖಂಡ ಕಿತ್ತು ಬಂದಿದೆ. ವೃದ್ಧೆಯ ಮೇಲೆ ದಾಳಿ ಮಾಡಿದ ನಾಯಿ, ಮುಖದ ಮಾಂಸಖಂಡ ಕಿತ್ತು ಬರುವಂತೆ ಕಚ್ಚಿದೆ. ಅವರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಜನತೆ ಮನೆಯಿಂದ ಹೊರ ಬರಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ.

ಹಲವೆಡೆ ಹುಚ್ಚುನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಾವು ನೋವು ಸಂಭವಿಸುತ್ತಲೇ ಇವೆ. ಇತ್ತೀಚಿಗೆ ತುಮಕೂರು ಜಿಲ್ಲೆ ಕುಣಿಗಲ್​ ಪಟ್ಟಣದ ವಾರ್ಡ್ ನಂಬರ್​ 2ರಲ್ಲಿ ಮೂರೂವರೆ ವರ್ಷದ ​ಬಾಲಕನೊಬ್ಬ ಹುಚ್ಚುನಾಯಿ ದಾಳಿಗೆ ಬಲಿಯಾಗಿದ್ದ. ಮತ್ತೊಬ್ಬ ಬಾಲಕ ಗಂಭೀರ ಗಾಯಗೊಂಡಿದ್ದ. ಇನ್ನಾದರೂ ಸಂಬಂಧಪಟ್ಟವರು ಇಂತಹ ಘಟನೆ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net