

ಮಾಸ್ಕೋ: ಬಳಸಿ ಬಿಸಾಡುವ ಪ್ಲಾಸ್ಟಿಕ್, ರಬ್ಬರ್ ಸಾಮಾಗ್ರಿಗಳನ್ನು ಒಂದು ವೇಳೆ ಪ್ರಾಣಿಗಳು ತಿಂದರೆ ಅವುಗಳ ಜೀವಕ್ಕೇ ಕುತ್ತು ಬರುತ್ತದೆ ಎನ್ನುವುದರ ಕುರಿತಾಗಿ ಅನೇಕ ಜಾಗೃತಿ ಅಭಿಯಾನಗಳು ನಡೆಯುತ್ತಲೇ ಇರುತ್ತವೆ. ಆದರೂ ಎಚ್ಚೆತ್ತುಕೊಳ್ಳದ ಜನರಿಂದಾಗಿ ಮೃಗಾಲಯದ ಪೋಲಾರ್ ಬೇರ್ ಒಂದು ಪ್ರಾಣ ಬಿಟ್ಟಿರುವ ಘಟನೆ ರಷ್ಯಾದಲ್ಲಿ ನಡೆದಿದೆ.
ರಷ್ಯಾದ ಯೆಕಟೆರಿನ್‌ಬರ್ಗ್‌ನಲ್ಲಿರುವ ಮೃಗಾಲಯದಲ್ಲಿರುವ ಗಂಡು ಪೋಲಾರ್ ಬೇರ್ (ಹಿಮಕರಡಿ) ಉಮ್ಕಾ ಸೋಮವಾರದಂದು ಊಟ ಮಾಡಲು ಮುಂದಾಗಿದೆ. ತನ್ನ ಕೇರ್ ಟೇಕರ್ ತಂದುಕೊಟ್ಟ ಊಟವನ್ನು ತಿನ್ನುವಾಗ ಅಲ್ಲಿಯೇ ಅಸ್ವಸ್ಥವಾಗಿ ಬಿದ್ದಿದೆ. 25 ವರ್ಷ ವಯಸ್ಸಾಗಿದ್ದ ಉಮ್ಕಾಗೆ ವೈದ್ಯರು ಚಿಕಿತ್ಸೆ ನೀಡುವಷ್ಟರಲ್ಲಿ ಅದು ಪ್ರಾಣ ಬಿಟ್ಟಿದೆ. ಅದರ ಮರಣೋತ್ತರ ಪರೀಕ್ಷೆ ಮಾಡಿದಾಗ ಅದರ ಹೊಟ್ಟೆಯಲ್ಲಿ ರಬ್ಬರ್ ಬಾಲ್ ಇರುವುದು ಕಂಡುಬಂದಿದೆ. ಅದೇ ಕಾರಣಕ್ಕೆ ಉಮ್ಕಾ ಪ್ರಾಣ ಬಿಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಮೃಗಾಲಯಕ್ಕೆ ಬಂದ ವೀಕ್ಷಕರಲ್ಲಿ ಯಾರೋ ಪೋಲಾರ್ ಬೇರ್ನ ಗಮನ ಸೆಳೆಯಲು ಬಾಲ್ ಎಸೆದಿರಬೇಕು. ಏನೋ ತಿಂಡಿ ಇರಬಹುದು ಎಂದು ತಪ್ಪು ತಿಳಿದ ಬೇರ್ ಅದನ್ನು ನುಂಗಿ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.
ಮೃಗಾಲಯದಲ್ಲಿ ಉಮ್ಕಾಗೆ ಐನಾ ಹೆಸರಿನ ಹೆಣ್ಣು ಪೋಲಾರ್ ಬೇರ್ ಅತ್ಯಂತ ಒಳ್ಳೆಯ ಸ್ನೇಹಿತೆಯಾಗಿತ್ತು. ಉಮ್ಕಾ ಮೃತವಾದಾಗಿನಿಂದ ಐನಾ ಸಾಕಷ್ಟು ನೊಂದಿದೆ. ಒಬ್ಬಂಟಿಯಾಗಿ ನಿರಾಸಕ್ತಿಯಿಂದ ಕುಳಿತುಕೊಳ್ಳುತ್ತಿದೆ ಎಂದು ಮೃಗಾಲಯದ ಸಿಬ್ಬಂದಿ ತಿಳಿಸಿದ್ದಾರೆ. ಐನಾ ಬಗ್ಗೆ ಹೆಚ್ಚಿನ ಗಮನ ಕೊಡುವುದಾಗಿ ತಿಳಿಸಲಾಗಿದೆ. (ಏಜೆನ್ಸೀಸ್)