

ಮುಂಬೈ: ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಅವರ ಮಗಳು ಸೋನಾಕ್ಷಿ ಸಿನ್ಹಾ ಇತ್ತೀಚೆಗೆ ತಮ್ಮ ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ಅವರನ್ನು ವಿವಾಹವಾದರು. ಕಳೆದ 7 ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದ ಈ ಜೋಡಿ ಕುಟುಂಬಸ್ಥರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸೋನಾಕ್ಷಿ ಮದುವೆಯಲ್ಲಿ ಆಕೆಯ ತಾಯಿ ಪೂನಂ ಸಿನ್ಹಾ ಮತ್ತು ತಂದೆ ಶತ್ರುಘ್ನ ಸಿನ್ಹಾ ಕಾಣಿಸಿಕೊಂಡಿದ್ದರು. ಆದರೆ ನಟಿಯ ಸಹೋದರರಾದ ಲವ್ ಮತ್ತು ಕುಶ್ ಮದುವೆಯಲ್ಲಿ ಭಾಗಿಯಾಗಿರಲಿಲ್ಲ.
ಮದುವೆಯಲ್ಲಿ ಪಾಲ್ಗೊಳ್ಳದಿರಲು ಕಾರಣ ಏನಿರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿತ್ತು. ಮದುವೆಗೆ ಬಾರದಿರಲು ಕಾರಣ ಏನು ಎಂದು ಲವ್ ಸಿನ್ಹಾ ಅವರನ್ನು ಕೇಳಲಾಗಿತ್ತು. ಆದರೆ ಲವ್ ಈ ಪ್ರಶ್ನೆಗೆ ಸ್ವಲ್ಪ ಸಮಯದ ನಂತರ ಉತ್ತರಿಸುವುದಾಗಿ ಹೇಳಿದ್ದರು. ಇದೀಗ ಮದುವೆಗೆ ಯಾಕೆ ಬರಲಿಲ್ಲ ಎಂಬ ಪ್ರಶ್ನೆಗೆ ನಟಿಯ ಸಹೋದರ ಲವ್ ಕಾರಣ ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.
ನಟಿಯ ಮದುವೆಗೆ ಬಾರದಿರಲು ಕಾರಣವನ್ನು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಎಕ್ಸ್ ಖಾತೆಯಲ್ಲಿ ಲವ್ ಬರೆದುಕೊಂಡಿದ್ದಾರೆ. ಅಸಲಿಗೆ ಜೂನ್ 23ರಂದು ಮಾಡಿದ ಮೊದಲ ಪೋಸ್ಟ್ನಲ್ಲಿ, ತಮ್ಮ ವಿರುದ್ಧ ಆನ್ಲೈನ್ನಲ್ಲಿ ನಡೆಯುತ್ತಿರುವ ಅಭಿಯಾನದಿಂದ ಕುಟುಂಬದೊಂದಿಗಿನ ಬಾಂಧವ್ಯಕ್ಕೆ ಧಕ್ಕೆಯಾಗುವುದಿಲ್ಲ ಎಂದು ಹೇಳಿದ್ದರು. ಅಲ್ಲದೆ ಮದುವೆಗೆ ಹಾಜರಾಗದಿರುವ ನನ್ನ ನಿರ್ಧಾರದ ಕಾರಣ, ತಪ್ಪು ಕಲ್ಪನೆಗಳ ಆಧಾರದ ಮೇಲೆ ನನ್ನ ವಿರುದ್ಧ ಆನ್ಲೈನ್ ಅಭಿಯಾನವನ್ನು ಪ್ರಾರಂಭಿಸುವ ಪ್ರಯತ್ನಗಳು ನನ್ನ ಕುಟುಂಬವು ಯಾವಾಗಲೂ ನನ್ನ ಆದ್ಯತೆಯಾಗಿದೆ ಎಂಬ ಅಂಶವನ್ನು ಬದಲಾಯಿಸುವುದಿಲ್ಲ ಎಂದು ಬರೆದುಕೊಂಡಿದ್ದರು.
ಇದೀಗ ಮತ್ತೊಂದು ಪೋಸ್ಟ್ ಮಾಡಿದ್ದು, ನಾನು ಯಾಕೆ ಸೋನಾಕ್ಷಿ ಸಿನ್ಹಾ ಮದುವೆಯಲ್ಲಿ ಭಾಗಿಯಾಗಿಲ್ಲ ಎಂಬ ಕಾರಣಗಳು ತುಂಬಾ ಸ್ಪಷ್ಟವಾಗಿವೆ. ಏನೇ ಸಂಭವಿಸಿದರೂ ನಾನು ಕೆಲವು ಜನರೊಂದಿಗೆ ಬೆರೆಯುವುದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಅಲ್ಲದೆ ಪಿಆರ್ ತಂಡವು ಪ್ರಸ್ತುತಪಡಿಸುವ ಸೃಜನಶೀಲ ಕಥೆಗಳನ್ನು ಅವಲಂಬಿಸುವ ಬದಲು ಮಾಧ್ಯಮದ ಸದಸ್ಯರೊಬ್ಬರು ತಮ್ಮ ಸಂಶೋಧನೆಯನ್ನು ಮಾಡಿದ್ದಾರೆ ಎಂಬುದು ನನಗೆ ಖುಷಿಯಾಗಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)