ಹೊಸ ಬಜೆಟ್​ನಲ್ಲಿ ಚರಂಡಿ ಅಭಿವೃದ್ಧಿಗೂ ಆದ್ಯತೆ; ಬೃಹತ್ ಪ್ರಮಾಣದ ತ್ಯಾಜ್ಯ ಉತ್ಪಾದಕರಿಗೆ ಸಂಸ್ಕರಣೆ ಕಡ್ಡಾಯ

drainage
Published on

ಬೆಂಗಳೂರು: ಹವಾಮಾನ ಬದಲಾವಣೆಯ ಪರಿಣಾಮವನ್ನು ಕಡಿಮೆ ಮಾಡಲು ಮತ್ತು ಬೆಂಗಳೂರಿನಲ್ಲಿ ಪ್ರವಾಹವನ್ನು ನಿಯಂತ್ರಿಸಲು 3,000 ಕೋಟಿ ರೂ. ಗಳ ಯೋಜನೆಯನ್ನು ವಿಶ್ವಬ್ಯಾಂಕ್‌ ನೆರವಿನೊಂದಿಗೆ ಅನುಷ್ಠಾನಗೊಳಿಸುವ ಬಗ್ಗೆ ಬಜೆಟ್​ನಲ್ಲಿ ಪ್ರಸ್ತಾಪಿಸಲಾಗಿದೆ. ಈ ಯೋಜನೆಯ ಕೆಳಗೆ ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸಲು ಎಲ್ಲಾ ಕೆರೆಗಳಿಗೆ Sluice Gateಗಳನ್ನು ಅಳವಡಿಸಲಾಗುವುದು. ಇದರಿಂದ ನೀರಿನ ಹರಿವಿನ ವೇಗ ಮತ್ತು ಪ್ರಮಾಣವನ್ನು ನಿಯಂತ್ರಿಸಲು ಅನುಕೂಲವಾಗುವುದು.

ಪ್ರಸ್ತುತ ಬೆಂಗಳೂರು ನಗರದಲ್ಲಿ 1,850 ಎಂ.ಎಲ್.ಡಿ. ತ್ಯಾಜ್ಯ ನೀರು ಉತ್ಪತ್ತಿಯಾಗುತ್ತಿದ್ದು, ಇದರಲ್ಲಿ 1,500 ಎಂ.ಎಲ್.ಡಿ. ತ್ಯಾಜ್ಯ ನೀರಿನ ಸಂಸ್ಕರಣಾ ಸಾಮರ್ಥ್ಯ ಈಗಾಗಲೇ ಇದೆ. ಹೆಚ್ಚುವರಿಯಾಗಿ 350 ಎಂ.ಎಲ್‌.ಡಿ. ಸಾಮರ್ಥ್ಯವನ್ನು ಒದಗಿಸುವುದರ ಮೂಲಕ ಸಂಪೂರ್ಣ ತ್ಯಾಜ್ಯ ನೀರನ್ನು ಸಂಸ್ಕರಿಸಿದಂತೆ ಆಗುತ್ತದೆ.

ವಾಣಿಜ್ಯ ಮಳಿಗೆಗಳು, ಆಸ್ಪತ್ರೆಗಳು, ಹೋಟೆಲ್‌ಗಳು ಸೇರಿದಂತೆ ಬೃಹತ್ ತ್ಯಾಜ್ಯ ಉತ್ಪಾದಕರು ತಮ್ಮ ಹಂತದಲ್ಲಿಯೇ ತ್ಯಾಜ್ಯವನ್ನು ಸಂಸ್ಕರಿಸುವುದನ್ನು ಕಡ್ಡಾಯಗೊಳಿಸುವ ಮೂಲಕ ಸ್ಥಳೀಯವಾಗಿಯೇ ತ್ಯಾಜ್ಯ ಸಂಸ್ಕರಣೆಗೆ ಒತ್ತು ನೀಡಲಾಗುವುದು ಎಂದು ಬಜೆಟ್​ನಲ್ಲಿ ಉಲ್ಲೇಖಿಸಲಾಗಿದೆ.

ಮೆಗಾಸಿಟಿ ರಿವಾಲ್ವಿಂಗ್ ನಿಧಿಯಡಿ ದಿನಂಪ್ರತಿ ಒಟ್ಟು 440 ದಶಲಕ್ಷ ಲೀಟರ್ ತ್ಯಾಜ್ಯನೀರಿನ ಸಂಸ್ಕರಣಾ ಸಾಮರ್ಥ್ಯದ ನಾಲ್ಕು ಹೊಸ ಘಟಕಗಳ ಕಾಮಗಾರಿಗಳನ್ನು 1,200 ಕೋಟಿ ರೂ. ಮೊತ್ತದಲ್ಲಿ ಕೈಗೊಳ್ಳಲಾಗಿದೆ.

ಕಸ ನಿರ್ವಹಣೆ ಹೇಗೆ?
ಬೆಂಗಳೂರು ನಗರದಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಒಂದೇ ವಾಹನದಲ್ಲಿ ಹಸಿ ಕಸ ಹಾಗೂ ಒಣ ಕಸ ಸಂಗ್ರಹಿಸುವ ವಿನ್ಯಾಸದ ಆಟೋ ಟಿಪ್ಪರುಗಳು ಹಾಗೂ ಕಾಂಪಾಕ್ಟರುಗಳು ಕಾರ್ಯಾಚರಣೆ ಮಾಡಲಿವೆ. ಆಯಾ ವಾರ್ಡ್ ಗಳಲ್ಲಿಯೇ ತ್ಯಾಜ್ಯ ಸಂಸ್ಕರಣೆ ಮಾಡಲು ಪ್ರತಿ ವಾರ್ಡ್‌ಗೆ ಒಂದರಂತೆ ಆಧುನಿಕ ತಂತ್ರಜ್ಞಾನ ಆಧಾರಿತ ವಾಸನೆರಹಿತ ತ್ಯಾಜ್ಯ ಸಂಸ್ಕರಣಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net