ಲೋವರ್​ ಸರ್ಕ್ಯೂಟ್​ ಹಿಟ್​: ಹಳಿ ತಪ್ಪಿದ ರೈಲ್ವೆ ಸಂಬಂಧಿ ಷೇರುಗಳ ಬೆಲೆ

railway-stock
Published on

ಮುಂಬೈ: ಷೇರು ಮಾರುಕಟ್ಟೆಯ ಪರಿಸ್ಥಿತಿ ಈಗ ತುಂಬಾ ಹದಗೆಟ್ಟಿದೆ. ಚುನಾವಣೆ ಫಲಿತಾಂಶದ ಪರಿಣಾಮ ಷೇರುಪೇಟೆಯಲ್ಲಿ ಕಂಡುಬರುತ್ತಿದೆ. ಸರ್ಕಾರಿ ಕಂಪನಿಗಳ ಷೇರುಗಳಲ್ಲಿ ಭಾರಿ ಕುಸಿತ ಕಂಡುಬಂದಿದೆ. ರೈಲ್ವೆ ವಲಯದ ಕಂಪನಿಗಳ ಸ್ಥಿತಿಯೂ ಸಾಕಷ್ಟು ನಿರಾಶಾದಾಯಕವಾಗಿದೆ. ರೈಲ್ ವಿಕಾಸ್ ನಿಗಮ್, ಐಆರ್‌ಎಫ್‌ಸಿ, ಐಆರ್‌ಸಿಟಿಸಿ ಷೇರುಗಳಲ್ಲಿ ಶೇ. 20ರಷ್ಟು ಕುಸಿತ ಕಂಡುಬಂದಿದೆ. ಕಳೆದ ಒಂದು ವರ್ಷದಲ್ಲಿ ಈ ಕಂಪನಿಗಳ ಷೇರುಗಳಲ್ಲಿ ಭಾರೀ ಏರಿಕೆಯಾಗಿತ್ತು. ಆದರೆ ಈಗ ಚುನಾವಣೆ ಫಲಿತಾಂಶವು ಹೂಡಿಕೆದಾರರ ಚಿತ್ತವನ್ನು ಹಾಳು ಮಾಡಿದೆ.

ಇರ್ಕಾನ್ ಇಂಟರ್‌ನ್ಯಾಶನಲ್ ಷೇರುಗಳ ಬೆಲೆಯಲ್ಲಿ ಈಗ 20 ಪ್ರತಿಶತದಷ್ಟು ಇಳಿಕೆಯಾಗಿದೆ. ಈ ಕಂಪನಿಯ ಷೇರುಗಳ ಬೆಲೆ 229.60 ರೂ.ಗೆ ಕುಸಿದಿದೆ. ಈ ಷೇರುಗಳಲ್ಲಿ ಲೋವರ್ ಸರ್ಕ್ಯೂಟ್ ಹಿಟ್​ ಆಗಿವೆ.

ಐಆರ್‌ಎಫ್‌ಸಿ ಷೇರುಗಳ ಬೆಲೆಯಲ್ಲಿಯೂ ಭಾರಿ ಇಳಿಕೆಯಾಗಿದೆ. ಮಂಗಳವಾರ ಈ ಕಂಪನಿಯ ಷೇರುಗಳ ಬೆಲೆ ಬಿಎಸ್‌ಇಯಲ್ಲಿ ರೂ 190ಕ್ಕೆ ಪ್ರಾರಂಭವಾಯಿತು. ಆದರೆ, ಸ್ವಲ್ಪ ಸಮಯದ ನಂತರ ರೂ 151.20 ಕ್ಕೆ ಕುಸಿಯಿತು.

ಕಳೆದ ಒಂದು ವರ್ಷದಲ್ಲಿ ಹೂಡಿಕೆದಾರರನ್ನು ಶ್ರೀಮಂತರನ್ನಾಗಿ ಮಾಡಿದ ರೈಲ್ವೇ ಕಂಪನಿ ಎಂದರೆ ರೈಲ್ ವಿಕಾಸ್ ನಿಗಮ. ಮಂಗಳವಾರ ಈ ಕಂಪನಿಯ ಷೇರುಗಳ ಬೆಲೆ ಶೇಕಡಾ 20 ರಷ್ಟು ಕುಸಿದಿದೆ. ಕಂಪನಿಯ ಷೇರುಗಳು ಬಿಎಸ್‌ಇಯಲ್ಲಿ 323.60 ರೂ. ಇದೆ.

ಐಆರ್​ಸಿಟಿಸಿ ಷೇರಿನ ಬೆಲೆ ಸಹ 20 ಪ್ರತಿಶತದಷ್ಟು ಕುಸಿತವನ್ನು ಕಂಡಿದೆ. ಈ ಕಂಪನಿಯ ಷೇರುಗಳ ಬೆಲೆ 843.35 ರೂಪಾಯಿಗೆ ಕುಸಿದಿದೆ.

ಮಲ್ಟಿಬ್ಯಾಗರ್ ಸ್ಟಾಕ್ ಆಗಿರುವ ತಿತರ್‌ಗಢ್ ಷೇರುಗಳ ಬೆಲೆಗಳು ಕೂಡ 20 ಪ್ರತಿಶತದಷ್ಟು ಕುಸಿತ ಕಂಡಿದೆ. ಈ ಷೇರಿನ ಇಂಟ್ರಾ-ಡೇ ಕನಿಷ್ಠ ಮಟ್ಟವು ರೂ 1194.35 ಆಗಿದೆ. ಅದೇ ಸಮಯದಲ್ಲಿ, ಟೆಕ್ಸ್ಮಾಕೊ ರೈಲ್ ಮತ್ತು ಇಂಜಿನಿಯರಿಂಗ್ ಷೇರುಗಳ ಬೆಲೆಯೂ 20% ರಷ್ಟು ಕುಸಿದಿದೆ. ಮಧ್ಯಾಹ್ನದ ವೇಳೆಗೆ ಈ ಕಂಪನಿಯ ಷೇರುಗಳ ಬೆಲೆ 185 ರೂ. ಮುಟ್ಟಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net