ರಾಜ್ಯದಲ್ಲಿ ತಗ್ಗಿದ ವರ್ಷಧಾರೆ: ಕರಾವಳಿ, ಒಳನಾಡಿನಲ್ಲಿ ಸಾಧಾರಣ ಮಳೆ

bangalore rains
Published on

ಬೆಂಗಳೂರು: ರಾಜ್ಯದಲ್ಲಿ ಭಾರೀ ಮಳೆಯ ಅಬ್ಬರ ಕಡಿಮೆಯಾಗುತ್ತಿದ್ದು, ಸಾಧಾರಣ ಪ್ರಮಾಣದ ಮಳೆ ಮಾತ್ರ ಸುರಿಯುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ ಬಹುತೇಕ ಗಾಳಿ ಬೀಸುವ ಪ್ರಮಾಣವೂ ಕಡಿಮೆಯಾಗಿದ್ದು, ಸರ್ಕಾರಕ್ಕೆ ಆತಂಕ ತಂದೊಡಿದ್ದ ಪ್ರವಾಹ ಪರಿಸ್ಥಿತಿ ತಹಬಂದಿಗೆ ಬಂದಿದೆ.

ಇದರ ಹೊರತಾಗಿಯೂ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿಯ ವಿವಿಧ ಭಾಗಗಳಲ್ಲಿ ಗುರುವಾರ ವ್ಯಾಪಕವಾಗಿ ಮಳೆಯಾಗಿದೆ. ಸೋಮವಾರದ ವರೆಗಿನ ಮುನ್ಸೂಚನೆಯಂತೆ ಸಾಧಾರಣ ಪ್ರಮಾಣದ ಮಳೆಯೇ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದೇ ವೇಳೆ ಒಳನಾಡು ಪ್ರದೇಶಗಳಲ್ಲೂ ಸಾಧಾರಣ ಪ್ರಮಾಣದ ಮಳೆ ಮುಂದುವರಿಯಲಿದೆ. ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿ ಸಾಧಾರಣ ವರ್ಷಧಾರೆ ಆಗಲಿದ್ದರೆ, ಉತ್ತರ ಒಳನಾಡು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಪ್ರಮಾಣದ ಮಳೆಯಾಗಲಿದೆ.

ರಾಜಧಾನಿ ಬೆಂಗಳೂರು ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಹಗುರದಿಂದ ಸಾಧಾರಣ ಪ್ರಮಾಣದ ವರ್ಷಧಾರೆ ಆಗಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net