ಕಡಿಮೆ ಎತ್ತರ, ಸಂಚಾರ ಸಂಚಕಾರ

Low altitude, traffic jam
ಗೊಳಸಂಗಿ ಸಮೀಪದ ಬಸವನ ಬಾಗೇವಾಡಿ ರೋಡ್ (ತೆಲಗಿ) ರೈಲು ಸೇತುವೆ ನಿಯಂತ್ರಣದ ಹಳಿಯಲ್ಲಿ ಬುಧವಾರ ರಾತ್ರಿ ಕಬ್ಬು ಸಾಗಾಣಿಕೆಯ ಟ್ಯಾಕ್ಟರ್ ಸಿಲುಕಿಕೊಂಡಿರುವುದು.
Published on

ಗೊಳಸಂಗಿ: ಬಸವನ ಬಾಗೇವಾಡಿ ರೋಡ್ (ತೆಲಗಿ) ರೈಲು ಸೇತುವೆ ನಿಯಂತ್ರಣ ಹಳಿಯ ಎತ್ತರ ಕಡಿಮೆ ಇರುವುದರಿಂದ ಕಬ್ಬು ಸಾಗಣೆ ಮಾಡುವ ಖಾಲಿ ಟ್ಯಾಕ್ಟರ್ ಸಿಲುಕಿಕೊಂಡು, ನಂತರ ಜೆಸಿಬಿ ಮೂಲಕ ಹಳಿ ಮೇಲೆತ್ತಿ ಬಿಡಿಸಿರುವ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.

ಸೇತುವೆಯ ಎತ್ತರ 3.95 ಮೀಟರ್ ಇದ್ದರೆ ಹೊರ ಬದಿ ಹಾಕಲಾದ ಸೇತುವೆ ನಿಯಂತ್ರಣದ ಹಳಿ 3.70 ಮೀಟರ್ ಎತ್ತರ ಹೊಂದಿದೆ. ಇದನ್ನೂ ಮೀರಿ ಲೋಡ್ ತುಂಬಿದ ಲಾರಿ, ಟ್ಯಾಕ್ಟರ್‌ಗಳು ಇಲ್ಲಿ ಸಂಚರಿಸುವುದು ಕಷ್ಟ. ಆದರೆ, ಬೀಳಗಿ, ಜಮಖಂಡಿ, ಮುಧೋಳ, ಕಾರಜೋಳ ಮತ್ತು ನಾಯನೇಗಲಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸಲು ಇದು ಸಂಪರ್ಕ ಸೇತುವೆಯಾಗಿದೆ. ಜತೆಗೆ ಕೂಡಗಿ ಎನ್‌ಟಿಪಿಸಿ ಉಷ್ಣ ವಿದ್ಯುತ್ ಘಟಕದ ಬೂದಿಯ ಟ್ಯಾಂಕರ್‌ಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ.

ಆದ್ದರಿಂದ ಈ ಮಾರ್ಗವಾಗಿ ಸಂಚರಿಸುವಾಗ ಕೆಲವು ವಾಹನ ಅವಘಡಕ್ಕೀಡಾಗಿರುವುದೂ ಉಂಟು. ಆದ್ದರಿಂದ ಈ ಸೇತುವೆಯ ನಿಯಂತ್ರಣಕ್ಕಾಗಿ ಅಳವಡಿಸಲಾದ ಎರಡೂ ಬದಿಯ ಹಳಿಯನ್ನು ಇನ್ನಷ್ಟು ಎತ್ತರ ಮಾಡಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬುದು ಗೂಡ್ಸ್ ವಾಹನ ಸವಾರರ ಬೇಡಿಕೆಯಾಗಿದೆ.

ಬಸವನ ಬಾಗೇವಾಡಿ ರೈಲು ಸೇತುವೆ ಸುರಂಗ ಮಾರ್ಗವಾಗಿ ಪ್ರತಿನಿತ್ಯ ಕಬ್ಬಿನ ಲಾರಿಗಳು ಸಂಚರಿಸುತ್ತವೆ. ಅದರಲ್ಲಿ ಬಹುತೇಕ ಲಾರಿಗಳು ಇಲ್ಲಿ ತೊಂದರೆಗೆ ಸಿಲುಕಿಕೊಳ್ಳುವುದು ಸಾಮಾನ್ಯವಾಗಿದೆ. ಆದರೂ ಸೇತುವೆಯ ಎತ್ತರ ಹೆಚ್ಚಿಸಬೇಕೆಂಬ ನಮ್ಮ ಬೇಡಿಕೆ ಇನ್ನೂ ಈಡೇರಿಲ್ಲ. -ಅರವಿಂದ ಕೊಪ್ಪದ ಅಧ್ಯಕ್ಷರು, ಗ್ರಾ.ಪಂ., ತೆಲಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net