ಪ್ರಿಯತಮೆಯಿಂದಲೇ ಪ್ರಿಯಕರನ ಕೊಲೆ

Published on

ನಂಜನಗೂಡು: ಖಾಸಗಿ ಫೋಟೋ ಮತ್ತು ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿದ ಪ್ರಿಯಕರನನ್ನು ಸೋಮವಾರ ರಾತ್ರಿ ಆತನ ಪ್ರಿಯತಮೆ ತನ್ನ ಸಹೋದರನೊಂದಿಗೆ ಸೇರಿ ನಗರದ ನರಸೇಗೌಡ ರಸ್ತೆಯ 8ನೇ ತಿರುವಿನಲ್ಲಿ ಭೀಕರವಾಗಿ ಕೊಲೆ ಮಾಡಿದ್ದಾರೆ.

ಎಚ್.ಡಿ. ಕೋಟೆ ತಾಲೂಕಿನ ಹಂಪಾಪುರ ಹೋಬಳಿಯ ಸಿದ್ದೇಗೌಡನಹುಂಡಿ ನಿವಾಸಿ ರಾಜೇಶ್ ಮೃತರು. ಮೈಸೂರಿನ ಕ್ಯಾತಮಾರನಹಳ್ಳಿ ಗ್ರಾಮದ ಪ್ರೇಮಾ ನಂಜನಗೂಡಿನ ಶ್ರೀರಾಂಪುರ ಬಡಾವಣೆಯ ನಾರಾಯಣ ಎಂಬುವವರನ್ನು 15 ವರ್ಷಗಳ ಹಿಂದೆ ವಿವಾಹವಾಗಿದ್ದಳು. ಒಂದು ತಿಂಗಳ ಹಿಂದೆ ನಾರಾಯಣ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿಯ ಸ್ನೇಹಿತನಾಗಿದ್ದ ರಾಜೇಶ್ ಆಗಾಗ್ಗೆ ಮನೆಗೆ ಬರುತ್ತಿದ್ದ ಎನ್ನಲಾಗಿದ್ದು, ಪರಿಚಯ ಸಲುಗೆಗೆ ತಿರುಗಿ ಇಬ್ಬರ ಮಧ್ಯೆ ಸಂಬಂಧ ಬೆಳೆದಿತ್ತು. ಇಬ್ಬರೂ ತಮ್ಮ ಖಾಸಗಿ ಕ್ಷಣಗಳ ಫೋಟೋ ಮತ್ತು ವಿಡಿಯೋಗಳನ್ನು ಪರಸ್ಪರ ವರ್ಗಾಯಿಸಿಕೊಂಡಿದ್ದರು.

ರಾಜೇಶ್ ಪ್ರೇಮಾಗೆ ಹಣ ಕೊಟ್ಟಿದ್ದು, ವಾಪಸ್ ಕೊಡುವಂತೆ ಕೇಳಿದ್ದಾನೆ. ಇದೇ ವಿಚಾರವಾಗಿ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಅಲ್ಲದೆ ಹಣ ವಾಪಸ್ ಕೊಡದಿದ್ದಲ್ಲಿ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ವೈರಲ್ ಮಾಡುವುದಾಗಿಯೂ ರಾಜೇಶ್ ಬೆದರಿಕೆ ಹಾಕಿದ್ದನು. ಇದರಿಂದ ಕುಪಿತಳಾಗಿದ್ದ ಪ್ರೇಮಾ, ರಾಜೇಶ್‌ನನ್ನು ಸೋಮವಾರ ತನ್ನ ಮನೆಗೆ ಕರೆಸಿಕೊಂಡಿದ್ದಾಳೆ. ಈ ವೇಳೆ ಪ್ರೇಮಾ ಮತ್ತು ಆಕೆ ಸಹೋದರ ಶಿವು ಇಬ್ಬರೂ ಸೇರಿ ರಾಜೇಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಎಚ್ಚೆತ್ತ ರಾಜೇಶ್ ಮನೆಯಿಂದ ತಪ್ಪಿಸಿಕೊಂಡು ಓಡಿಹೋಗಿದ್ದಾನೆ. ಕೂಡಲೇ ಅವನನ್ನು ಬೆನ್ನತ್ತಿದ ಪ್ರೇಮಾ ಮತ್ತು ಶಿವು ಅಡ್ಡಗಟ್ಟಿ, ಹಲ್ಲೆ ನಡೆಸಿ, ತಲೆಗೆ ಸಿಮೆಂಟ್ ಇಟ್ಟಿಗೆಯಿಂದ ಹೊಡೆದಿದ್ದಾರೆ. ಕೆಳಗೆ ಬಿದ್ದ ರಾಜೇಶ್ ತಲೆ ಮೇಲೆ ಕಲ್ಲು ಚಪ್ಪಡಿ ಎತ್ತಿಹಾಕಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಉಪ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ, ಡಿವೈಎಸ್‌ಪಿ ರಘು, ಪಟ್ಟ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಬಸವರಾಜು, ಪಿಎಸ್‌ಐ ಪ್ರಕಾಶ್ ಮದ್ಲೂರು ಭೇಟಿ ನೀಡಿ ಪರಿಶೀಲಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ನಂತರ ಆರೋಪಿಗಳನ್ನು ಬಂಧಿಸಿದರು. ಆರೋಪಿಗಳನ್ನು ಮಂಗಳವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net