ರಾತ್ರೋರಾತ್ರಿ ಪ್ರೇಯಸಿಯನ್ನು ಮನೆಯಿಂದ ಕರೆದೊಯ್ದ ಪ್ರಿಯಕರ: ಬೆಳ್ಳಂಬೆಳಗ್ಗೆ ಇಬ್ಬರು ಶವವಾಗಿ ಪತ್ತೆ!

Lovers Death
Published on

ವಿಜಯವಾಡ: ಮನೆಯಲ್ಲಿ ಮದುವೆಗೆ ಒಪ್ಪುವುದಿಲ್ಲ ಎಂಬ ಭಯದಿಂದ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ನಾಗರ್​ ಕರ್ನೂಲ್​ ಜಿಲ್ಲೆಯ ಬಾಲ್ಮೂರ್​ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಮೃತ ಪ್ರೇಮಿಗಳನ್ನು ಬಾಲ್ಮೂರ್​ ವಲಯದ ಬಿಲ್ಲಕಲ್ಲು ಗ್ರಾಮದ ಅಖಿಲಾ (19) ಮತ್ತು ಅದೇ ವಲಯದ ಚೆಂಚುಗುಡೆಮ್​ ಗ್ರಾಮದ ನಿಮ್ಮಲಾ ಅನಿಲ್​ (20) ಎಂದು ಗುರುತಿಸಲಾಗಿದೆ. ಇಬ್ಬರು ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.

ಮಗಳ ಪ್ರೀತಿಯ ವಿಚಾರ ತಿಳಿದ ಅಖಿಲಾ ಪಾಲಕರು ಆಕೆಯನ್ನು ಬೈದು ಮದುವೆಗೆ ನಿರಾಕರಿಸಿದ್ದರು. ಬಳಿಕ ಅಖಿಲಾ ತನ್ನ ಬಾಯ್​ಫ್ರೆಂಡ್​ ಅನಿಲ್​ಗೆ ವಿಚಾರ ಮುಟ್ಟಿಸಿದ್ದಳು. ಅನಿಲ್​ ಭಾನುವಾರ ರಾತ್ರಿ ಬಿಲ್ಲಕಲ್ಲುಗೆ ಆಗಮಿಸಿ, ಅಖಲಾಳನ್ನು ಕರೆದೊಯ್ದಿದ್ದ.

ಬಳಿಕ ಸೋಮವಾರ ಬೆಳಗ್ಗೆ 4.40ರ ಸುಮಾರಿಗೆ ಅನಿಲ್​ ತನ್ನ ಸ್ನೇಹಿತನಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದ. ಬಳಿಕ ಸ್ನೇಹಿತ, ಇತರರ ಜತೆಗೂಡಿ ಅರಣ್ಯ ಪ್ರದೇಶವನ್ನು ಹುಡುಕಾಡಿದ್ದಾರೆ. ಆದರೆ, ಪ್ರೇಮಿಗಳು ಪತ್ತೆಯಾಗಲಿಲ್ಲ. ಸೋಮವಾರ ಬೆಳಗ್ಗೆ ದನಗಾಹಿಗಳ ಕಣ್ಣಿಗೆ ಪ್ರೇಮಿಗಳ ಶವ ಪತ್ತೆಯಾಗಿದೆ.

ಬಿಲ್ಲಕಲ್ಲುದ ರಷ್ಯನ್​ ಪಾಂಡ್​ ಫಾರೆಸ್ಟ್​ ಡಿಪಾರ್ಟ್​ಮೆಂಟ್​ ಬೇಸ್​ ಕ್ಯಾಮ್​ ಹಿಂಭಾಗದ ಮರವೊಂದರಲ್ಲಿ ಪ್ರೇಮಿಗಳಿಬ್ಬರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಳಿಕ ದನಗಾಹಿಗಳು ಪೊಲೀಸರಿಗೆ ಮಾಹಿತಿ ನೀಡಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net