ಜನನಿಬಿಡ ರಸ್ತೆಯಲ್ಲೇ ಪ್ರೇಮಿಗಳಿಬ್ಬರ ರೊಮ್ಯಾನ್ಸ್​: ವಿಡಿಯೋ ವೈರಲ್​ ಬೆನ್ನಲ್ಲೇ ಸವಾರನಿಗೆ ಶಾಕ್​

Bike Romance
Published on

ಲಖನೌ: ಯುವಜೋಡಿಯೊಂದು ಜನನಿಬಿಡ ರಸ್ತೆಯಲ್ಲೇ ಬೈಕ್​ ಸವಾರಿ ಮಾಡುತ್ತಾ ರೊಮ್ಯಾನ್ಸ್​ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಈ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಖನೌದ ಹಜರತ್​ಗಂಜ್​ ಏರಿಯಾದಲ್ಲಿ ನಡೆದಿದೆ. ವಿಡಿಯೋವನ್ನು ಟ್ವಿಟರ್​ ಬಳಕೆದಾರರೊಬ್ಬರು ಶೇರ್​ ಮಾಡಿಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಪ್ರೇಮಗಳಿಬ್ಬರು ಕಪ್ಪು ಬಣ್ಣದ ಬಟ್ಟೆ ಧರಿಸಿದ್ದಾರೆ. ದ್ವಿಚಕ್ರ ವಾಹನದ ಹಿಂಬದಿಯ ಸೀಟಿನಲ್ಲಿ ಕೂರಬೇಕಾಗಿದ್ದ ಹುಡುಗಿ, ಸ್ಕೂಟರ್​ ಓಡಿಸುತ್ತಿರುವ ಪ್ರಿಯಕರ ಮುಂದೆ ಎದುರು-ಬದುರಾಗಿ ಕುಳಿತು ಆತನನ್ನು ತಬ್ಬಿಕೊಂಡಿದ್ದಾಳೆ. ತನ್ನ ಎರಡು ಕಾಲುಗಳಿಂದ ಪ್ರಿಯಕರನ ನಡುವನ್ನು ಬಳಸಿ, ಹಿಂಬದಿ ಸೀಟಿನ ಮೇಲೆ ಕಾಲುಗಳನ್ನು ಇಟ್ಟಿದ್ದಾಳೆ. ಕೈಯಿಂದ ಪ್ರಿಯಕರನನ್ನು ಗಟ್ಟಿಯಾಗಿ ತಬ್ಬಿಕೊಂಡಿರುವ ಹುಡುಗಿ ಆತನ ಕೆನ್ನೆಗೆ ಚುಂಬಿಸುತ್ತಿರುವ ದೃಶ್ಯವಿದೆ. ಅಕ್ಕಪಕ್ಕದಲ್ಲಿ ಸಾಕಷ್ಟು ವಾಹನಗಳು ಸಂಚರಿಸುತ್ತಿದ್ದರೂ ಇಬ್ಬರು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ರೊಮ್ಯಾನ್ಸ್​ನಲ್ಲಿ ತೊಡಗಿರುವುದು ವಿಡಿಯೋದಲ್ಲಿದೆ.

ಪ್ರೇಮಿಗಳಿಬ್ಬರನ್ನು ನೋಡಿ ಸಾರ್ವಜನಿಕರೇ ಮುಜುಗರ ಪಟ್ಟುಕೊಂಡಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಇಬ್ಬರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯ ಮಾಡಿದ್ದಾರೆ.

ಇದೀಗ ಆರೋಪಿ ಬೈಕ್​ ಸವಾರನನ್ನು ಬಂಧಿಸಲಾಗಿದೆ. ಆರೋಪಿಯನ್ನು ವಿಕ್ಕಿ ಎಂದು ಗುರುತಿಸಲಾಗಿದೆ. ಹುಡುಗಿ ಅಪ್ರಾಪ್ತೆಯಾಗಿರುವುದರಿಂದ ಆಕೆಯನ್ನು ಬಂಧಿಸದೇ, ಬುದ್ಧಿಮಾತು ಹೇಳಿ ಕಳುಹಿಸಲಾಗಿದೆ. ಘಟನೆಯ ಬಗ್ಗೆ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಮಾತನಾಡಿದ್ದು, ಯುವಜೋಡಿಯ ನಡವಳಿಕೆಯು ಸಭ್ಯತೆಯನ್ನು ಮೀರಿದೆ. ಅಲ್ಲದೆ, ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಅಪರಾಧವಾಗಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net