ನಿಮ್ಮ ಶತ್ರುಗಳನ್ನು ಪ್ರೀತಿಸಿ...

Yesu (FILEminimizer)
Published on
ಯೇಸು ಕ್ರಿಸ್ತ ತನ್ನ ಜನ ಹಾಗೂ ಶಿಷ್ಯರಿಗೆ ನೀಡಿದ ಅನೇಕ ಬೋಧನೆಗಳಲ್ಲಿ ಇದೂ ಒಂದು: ನಿಮ್ಮ ಶತ್ರುಗಳನ್ನು ಪ್ರೀತಿಸಿ, ನಿಮ್ಮನ್ನು ದ್ವೇಷಿಸುವವ ರನ್ನು ಸತ್ಕರಿಸಿ, ಶಪಿಸುವವರನ್ನು ಆಶೀರ್ವದಿಸಿ, ನಿಂದಿಸುವವರಿಗಾಗಿ ಪ್ರಾರ್ಥಿಸಿ, ನಿಮ್ಮ ಒಂದು ಕೆನ್ನೆಗೆ ಹೊಡೆಯುವವನಿಗೆ ಇನ್ನೊಂದು ಕೆನ್ನೆಯನ್ನು ಒಡ್ಡಿರಿ. ನಿಮ್ಮ ಮೇಲಂಗಿಯನ್ನು ಕಿತ್ತುಕೊಳ್ಳುವವನಿಗೆ ಒಳ ಅಂಗಿಯನ್ನೂ ತೆಗೆದುಕೊಳ್ಳಲು ಬಿಡಿ. ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ನಿಮ್ಮಲ್ಲಿರುವುದನ್ನು ಕೊಡಿ. ನಿಮ್ಮ ಸೊತ್ತನ್ನು ಕಸಿದುಕೊಳ್ಳುವವನಿಂದ ಅದನ್ನು ವಾಪಸು ಕೇಳದಿರಿ. ಇದಿಷ್ಟು ಅಲ್ಲದೆ, ಇತರರು ನಿಮಗೆ ಏನೇನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋ ಅದನ್ನೆ ನೀವು ಅವರಿಗೆ ಮಾಡಿ. ನಿಮ್ಮನ್ನು ಪ್ರೀತಿಸುವವರನ್ನೇ ನೀವು ಪ್ರೀತಿಸಿದರೆ ಅದೇನು ಪುಣ್ಯ? ಪಾಪಿಷ್ಟರು ಸಹ ತಮ್ಮನ್ನು ಪ್ರೀತಿಸುವವರನ್ನು ಪ್ರೀತಿಸುತ್ತಾರಲ್ಲವೇ? ಸಾಲ ತೀರಿಸುವಂಥ ನಂಬಿಗಸ್ಥರಿಗೇ ಸಾಲಕೊಟ್ಟರೆ ಅದೇನು ಪುಣ್ಯ? ಕೊಟ್ಟಷ್ಟೂ ಬರುತ್ತದೆಂದು ಪಾಪಿಷ್ಟರೂ ಸಾಲ ಕೊಡುತ್ತಾರಲ್ಲವೇ? ಆದುದರಿಂದ, ನಿಮ್ಮ ಶತ್ರುಗಳಿಗೆ ಒಳಿತು ಮಾಡಿದರೆ ನಿಮಗೆ ಮಹತ್ತಾದ ಸಂಭಾವನೆ ದೊರಕುವುದು. ನೀವು ಮಹೋನ್ನತ ದೇವರ ಮಕ್ಕಳಾಗುವಿರಿ.

ನಿಮ್ಮ ತಂದೆಯಾದ ದೇವರಂತೆ ನೀವೂ ದಯಾ ವಂತರಾಗಿರಿ. ನೀವು ಇತರರ ಬಗ್ಗೆ ತೀರ್ಪು ಕೊಡಬೇಡಿ. ಆಗ ದೇವರು ನಿಮ್ಮ ಬಗ್ಗೆ ತೀರ್ಪು ಕೊಡುವುದಿಲ್ಲ. ಪರರನ್ನು ದಂಡನೆಗೆ ಗುರಿಪಡಿಸ ಬೇಡಿ, ದೇವರು ನಿಮ್ಮನ್ನೂ ದಂಡನೆಗೆ ಗುರಿಪಡಿಸು ವುದಿಲ್ಲ. ಪರರಿಗೆ ಕೊಡಿ, ದೇವರು ನಿಮಗೂ ಕೊಡುವರು. ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದು ಕೊಡುವರು ಎಂದು ಸುದೀರ್ಘವಾಗಿ ನೀತಿಮಾತುಗಳನ್ನು ಬೋಧಿಸಿದರು. ನಿಂದೆ, ಅವಮಾನ, ಕ್ರೌರ್ಯ ಗಳೇ ತಾಂಡವವಾಡುತ್ತಿದ್ದ ಯೇಸುವಿನ ಕಾಲ ಘಟ್ಟದಲ್ಲಿ ಈ ಮಾತುಗಳು ತೀರ ಅಸಹಜ ಎನಿಸಿದರೂ ಬಿಸಿಲಿನ ಬೇಗೆಯಲ್ಲಿ ಬೇಯುವವ ರಿಗೆ ತಂಗಾಳಿಯಂತೆ ಸಾಂತ್ವನ ನೀಡುತ್ತ, ಅವರನ್ನು ಹೊಸದೊಂದು ಬದುಕಿಗೆ ಅಣಿ ಮಾಡಿದವು. ಹೊಸದೊಂದು ಜೀವನ ಕ್ರಮವನ್ನೇ ಅವರು ಅಳವಡಿಸಿಕೊಳ್ಳುವಂತೆ ಯೇಸು ಪ್ರೇರೇಪಿಸಿ ಜಗತ್ತಿನಲ್ಲಿ ಪ್ರೀತಿ, ಸಹನೆ, ವಿಶ್ವಾಸವನ್ನು ವಿಜೃಂಭಿಸುತ್ತ ಮಾನವ ಬದುಕಿನ ದಿಕ್ಕನ್ನೇ ಬದಲಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net