ಭಾಷೆಗೆ ಇರುವ ಅಭಿಮಾನ ನಮ್ಮ ನಾಡು, ಊರು, ಪರಿಸರದ ಮೇಲೆಯೂ ಇರಬೇಕು. ನಾಡು ಇದ್ದರೆ ಮಾತ್ರ ಭಾಷೆ ಇರುತ್ತದೆ. ಹಾಗಾಗಿ, ನಮ್ಮ ನಾಡಿನ ರಕ್ಷಣೆಯಾಗಬೇಕು. ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಬರೀ ಮಾತಷ್ಟೇ ಆಗದೆ ಪರಿಸರವನ್ನು ಪ್ರೀತಿಸಬೇಕು. ಹಾಗೆಯೇ ನೆಲ-ಜಲದ ಬಗ್ಗೆ ಅಪಾರ ಅಭಿಮಾನ ಹೊಂದಬೇಕು. ಬೂಟಾಟಿಕೆ ಬಿಟ್ಟು ನೀರಿನ ಸರಿಯಾದ ಬಳಕೆ ಮಾಡಿ, ಮಾಲಿನ್ಯವನ್ನು ತಡೆಯಬೇಕು. ನೆಲ-ಜಲ, ಪರಿಸರ ಸ್ವಚ್ಛವಾಗಿದ್ದಾಗ ಮಾತ್ರ ನಾಡಿನ ಜನರು ಆರೋಗ್ಯದಿಂದ ಇರುತ್ತಾರೆ. ಕನ್ನಡದ ಬಗ್ಗೆ ಕೀಳರಿಮೆ ಬಿಟ್ಟು, ಗೌರವದಿಂದ ಮಾತನಾಡಬೇಕು. ನಾವು ಎಷ್ಟು ಮಾತನಾಡುತ್ತೇವೆಯೋ ಬೇರೆಯವರು ಕೂಡ ನಮ್ಮ ಭಾಷೆಯತ್ತ ಆಕರ್ಷಿತರಾಗುತ್ತಾರೆ. ಇಂದಿನ ಯುವಜನತೆ ಜವಾಬ್ದಾರಿ ಅರಿತು ನಾಡಿಗೆ ಕೊಡುಗೆ ನೀಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು.