‘ಆಸರೆ’ ಅನಾಥಾಶ್ರಮದಲ್ಲಿ ಬೆಳೆಯುತ್ತಿರುವ ರಾಮ್‌ಗೆ (ಮುಕುಂದ್) ಶಾಲಾ ದಿನಗಳಲ್ಲಿಯೇ ಅಪರಿಚಿತಳ ಮೇಲೆ ಮನಸ್ಸಾಗುತ್ತದೆ. ಅವಳಿಗೆ ತನ್ನ ಪ್ರೀತಿಯನ್ನು ನಿವೇದಿಸಿಕೊಳ್ಳಲು ಹೋಗುವ ವೇಳೆಗೆ ಅವನಿಂದ ಅವಳು ದೂರ ಹೋಗಿಬಿಡುತ್ತಾಳೆ. ಬಳಿಕ ಪದವಿಯಲ್ಲಿ ರಾಶಿಕಾಳ (ಶ್ವೇತಾ) ಪ್ರೀತಿಯಲ್ಲಿ ರಾಮ್ ಬೀಳುತ್ತಾನೆ. ಆದರೆ, ಅವಳದು ಕೇವಲ ಆಕರ್ಷಣೆ. ಆಕೆಯಿಂದ ವಂಚನೆಗೊಳಗಾಗಿ ಇನ್ನುಮುಂದೆ ಈ ಲವ್ ಸಹವಾಸನೇ ಬೇಡ ಎನ್ನುವಾಗಲೇ ರಾಮ್ ಬದುಕಿನಲ್ಲಿ ಮೇರಿ (ದಿಯಾ) ಬರುತ್ತಾಳೆ. ಈಗಾಗಲೇ ಎರಡು ಬಾರಿ ನೊಂದಿರುವ ರಾಮ್‌ಗೆ ಮೇರಿ ಮೇಲೆ ಪ್ರೀತಿಗಿಂತ ಅಪನಂಬಿಕೆಯೇ ಹೆಚ್ಚು. ಈ ಪ್ರೇಮ ಬಹಳ ದಿನ ಇರುವುದಿಲ್ಲ ಎಂದು ಆತನೇ ಹೇಳಿಕೊಳ್ಳುವ ವಿಚಾರ ಅವಳ ಗಮನಕ್ಕೆ ಬರುತ್ತದೆ. ಹೀಗಿರುವಾಗಲೇ ದೊಡ್ಡ ಅವಘಡವೊಂದು ಸಂಭವಿಸಿಬಿಡುತ್ತದೆ. ಅಷ್ಟಕ್ಕೂ ಆ ಅವಘಡ ಏನು? ಅದರಿಂದ ರಾಮ್ ಮತ್ತೊಮ್ಮೆ ಕಲಿಯುವ ‘ಪ್ರೇಮ’ಪಾಠವಾದರೂ ಏನು? ತಿಳಿಯಲು ‘ಲವ್ ಸೀಸನ್ಸ್’ ಸಿನಿಮಾ ನೋಡಬೇಕಷ್ಟೇ. ಯುವಕರ ತಾರುಣ್ಯದಲ್ಲಿ ಪ್ರೀತಿ ಚಿಗುರುವ ವಿವಿಧ ಹಂತಗಳನ್ನು ಇಲ್ಲಿ ತೋರಿಸಲಾಗಿದೆ. ಕಥೆ ತಾಜಾತನದಿಂದ ಕೂಡಿದ್ದು, ನಿರೂಪಣೆ ಗೊಂದಲವಾಗಿದೆ. ಮೊದಲರ್ಧದಲ್ಲಿ ಹಾಸ್ಯ, ಹರಟೆ, ಬದುಕಿನ ಹೋರಾಟದಲ್ಲಿಯೇ ಸಾಗುತ್ತದೆ. ದ್ವಿತೀಯಾರ್ಧದಲ್ಲಿ ಇಡೀ ಮೂರು ಲವ್‌ಸ್ಟೋರಿ ಹೇಳುವ ಮೂಲಕ ಒಂದೆಡೆ ಭಾರ ಹಾಕಿದ್ದಾರೆ ಕೃತ್ವಿಕ್. ಸಮಾಜದಿಂದ ತಿರಸ್ಕೃತಳಾದ ಹೆಣ್ಣೊಬ್ಬಳಿಗೆ ಜೀವನದ ಪುನರ್ವಸತಿ ಕಲ್ಪಿಸುವಂತಹ ವಿಚಾರ ಗಮನ ಸೆಳೆಯುತ್ತದೆ. ಹೊಸಬರಾದರೂ ಮುಕುಂದ್, ದಿಯಾ ಕೀರ್ತಿ, ಚಂದನಾ ಹಾಗೂ ಶ್ವೇತಾ ಉತ್ತಮವಾಗಿ ನಟಿಸಿದ್ದಾರೆ. ರಾಜೇಶ್ ನಟರಂಗ, ಮಂಡ್ಯ ರಮೇಶ್, ಸಂಗೀತಾ ಅನಿಲ್ ಪಾತ್ರಗಳು ಸ್ಫೂರ್ತಿದಾಯಕವಾಗಿವೆ. ವೀರ್ ಸಮರ್ಥ್ ಸಂಗೀತ ಚೆನ್ನಾಗಿ ಮೂಡಿಬಂದಿದೆ.