

ಆಲೂರು: ತಾಲೂಕಿನ ಸೊಪ್ಪಿನ ಹಳ್ಳಿಯಲ್ಲಿ ಬುಧವಾರ ಸವರ್ಣೀಯ ವ್ಯಕ್ತಿಯೊಬ್ಬ ದಲಿತ ಯುವಕನನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದು, ಆರೋಪಿಯ ಅಣ್ಣನ ಮಗಳನ್ನು ಪ್ರೀತಿಸಿದ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಗ್ರಾಮದ ಮಧು (23) ಎಂಬಾತನನ್ನು ಅದೇ ಊರಿನ ರೂಪೇಶ್ ಎಂಬಾತ ಬುಧವಾರ ಮಧ್ಯಾಹ್ನ ತನ್ನ ಸಿಂಗಲ್ ಬ್ಯಾರಲ್ ತೋಟ ಬಂದೂಕಿನಿಂದ ಗುಂಡು ಹಾರಿಸಿ ಹತೈಗೈದಿದ್ದಾನೆ. ಮಧು ರೂಪೇಶನ ಅಣ್ಣನ ಮಗಳನ್ನು ಪ್ರೀತಿಸಿದ್ದ. ಯುವತಿ ಕಡೆಯವರು ಪೋಕ್ಸೋ ಕಾಯ್ದೆಯಡಿ ದೂರು ನೀಡಿದ್ದರಿಂದ ಪೊಲೀಸರಿಂದ ಬಂಧನಕ್ಕೊಳ ಗಾಗಿದ್ದ ಮಧು, ಜಾಮೀನಿನ ಮೇಲೆ ಬಿಡುಗಡೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ.
ಈ ನಡುವೆ, ಬೆಂಗಳೂರಿನಲ್ಲಿ ಲಾಕ್ಡೌನ್ ಘೊಷಣೆಯಾದ್ದರಿಂದ ಮಂಗಳವಾರ ಊರಿಗೆ ಮರಳಿದ್ದ ಮಧು, ಬುಧವಾರ ಮಧ್ಯಾಹ್ನ ಭೈರಾಪುರಕ್ಕೆ ಹೋಗುತ್ತಿದ್ದಾಗ ಮಾರ್ಗಮಧ್ಯೆ ಎದುರಾದ ರೂಪೇಶ್, ಆತನೊಂದಿಗೆ ಜಗಳ ಮಾಡುತ್ತ ಗುಂಡು ಹಾರಿಸಿದ್ದಾನೆ. ಘಟನೆಯಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ವಣವಾಗಿದೆ.