

ಭುವನೇಶ್ವರ: ಲವ್ ಈಸ್ ಬ್ಲೈಂಡ್ (ಪ್ರೀತಿ ಕುರುಡು) ಎನ್ನೋದು ಬಹಳ ಹಿಂದಿನ ಗಾದೆ. ಪ್ರೀತಿಗಾಗಿ ಹುಚ್ಚು ಸಾಹಸಕ್ಕೆ ಕೈಹಾಕುವವರನ್ನು ಅರಿತೇ ಇಂಥದ್ದೊಂದು ಗಾದೆ ಸೃಷ್ಟಿಯಾಗಿರುವುದು. ಆದರೆ ಬೆಂಗಳೂರಿನಲ್ಲಿ ನೆಲೆಸಿರುವ ಯುವಕನೊಬ್ಬ ಮಾಡಿರುವುದು ಅಂತಿಂಥ ಸಾಹಸವಲ್ಲ, ಅದೇನು ನೀವೇ ನೋಡಿ.
ಒಡಿಶಾದ ಬೊಗರೈ ಬ್ಲಾಕ್ನ ಪಲಸಿಯಾ ಗ್ರಾಮದ 27 ವರ್ಷದ ಯುವಕ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾನೆ. ಇವನಿಗೆ ಸಾಮಾಜಿಕ ಜಾಲತಾಣದಲ್ಲಿ ಪಶ್ಚಿಮ ಬಂಗಾಳದ ಪೂರ್ವ ಮೇದಿನೀಪುರ ಜಿಲ್ಲೆಯ ಯುವತಿಯ ಜತೆ ಕೆಲ ತಿಂಗಳ ಹಿಂದೆ ಪ್ರೀತಿ ಅಂಕುರಿಸಿದೆ.
ಸರಿ, ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದರು. ಏ.17 ಮುಹೂರ್ತವೂ ಫಿಕ್ಸ್ ಆಯಿತು. ಆದರೆ ಅವರ ಗ್ರಹಚಾರ ಕೆಟ್ಟಿತ್ತು. ಮಧ್ಯ ಲಾಕ್ಡೌನ್ ಜಾರಿಯಾಗಿಬಿಟ್ಟಿತು. ಆದರೆ ನಾನೊಂದು ತೀರ... ನೀನೊಂದು ತೀರ... ಎನ್ನುತ್ತಿದ್ದ ಈ ಯುವಜೋಡಿ ಹೇಗಾದರೂ ಸೈ ಮದುವೆಯಾಗಿಯೇ ಬಿಡೋಣ ಎಂಬ ನಿರ್ಧಾರಕ್ಕೆ ಬಂದರು.
ಹೇಳಿಕೇಳಿ ಮೇದಿನೀಪುರ ಕರೊನಾದ ಹಾಟ್ಸ್ಪಾಟ್ ಆಗಿದೆ. ಆದರೆ ವಿರಹವೇದನೆಯಲ್ಲಿದ್ದ ಈ ಯುವಕನಿಗೆ ಅದ್ಯಾವುದೂ ಲೆಕ್ಕಕ್ಕೆ ಬರಲೇ ಇಲ್ಲ. ಇವನು ಮಾಡಿದ ಸಾಹಸ ಇಷ್ಟಕ್ಕೇ ಮುಗಿಯಲಿಲ್ಲ.
ಧೂಮ್ಧಾಮ್ ಮದುವೆಗೆ ಸರ್ಕಾರ ಬ್ರೇಕ್ ಹಾಕಿತ್ತು. ಸಂಚಾರವನ್ನೂ ಮಾಡುವಂತಿರಲಿಲ್ಲ. ಆದರೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದ ಈ ಯುವಕ 16 ಬೈಕ್ಗಳಲ್ಲಿ ತನ್ನ ಸ್ನೇಹಿತರನ್ನು ಕರೆದುಕೊಂಡು ಪೊಲೀಸರ ಕಣ್ಣು ತಪ್ಪಿಸಿ ಹುಡುಗಿಯ ಮನೆಗೆ ಹೋಗುವಲ್ಲಿ ಸಕ್ಸಸ್ ಆಗಿಬಿಟ್ಟ. ಅವನ ಮನೆಯಿಂದ ಅವಳ ಮನೆ ಇದ್ದುದು 9 ಕಿ.ಮೀ ದೂರದಲ್ಲಿ. ಸ್ಥಳೀಯ ಆರೋಗ್ಯ ಕಾರ್ಯಕರ್ತರು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಮಾಹಿತಿಯನ್ನೂ ನೀಡಿರಲಿಲ್ಲ.
ಇನ್ನೇನು ಮದುವೆಯೂ ಆಯಿತು. ಮದುವೆಯಾದ ನಂತರ ಪತ್ನಿ ಮತ್ತು ನಾದಿನಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಮೂರು ವಾರ ನೆಮ್ಮದಿಯಾಗಿದ್ದ.
ಸುಖವಾಗಿ ಸಂಸಾರ ಮಾಡಿಕೊಂಡು ಇರೋಣ ಎಂದು ಕನಸು ಕಾಣುತ್ತಿದ್ದ ಯುವಕನಿಗೆ ಬರಸಿಡಿಲು ಬಡಿದದ್ದು ಆಶಾ ಕಾರ್ಯಕರ್ತೆಯರು ಮನೆಯ ಬಾಗಿಲಿಗೆ ಬಂದಾಗ! ಮದುವೆಯಾಗಿ ಮನೆಗೆ ಬಂದ ನಂತರ ನೆರೆಹೊರೆಯವರು ಆಶಾ ಕಾರ್ಯಕರ್ತರಿಗೆ ತಿಳಿಸಿದ್ದರು. ಪ್ರಯಾಣ ಮಾಡಿದ್ದರಿಂದ ಆರೋಗ್ಯ ಕಾರ್ಯಕರ್ತರು ದಂಪತಿ ಹಾಗೂ ಕುಟುಂಬದವರ ಗಂಟಲು ದ್ರವ ಪರೀಕ್ಷೆ ಮಾಡಿದ್ದರು.
ಈ ಯುವಕನಿಗೆ ಈಗ ಕರೊನಾ ಸೋಂಕು ಇರುವುದು ಪತ್ತೆಯಾಗಿದೆ. ಆದರೆ ಪತ್ನಿ ಮತ್ತು ನಾದಿನಿ ಸೇರಿದಂತೆ ಕುಟುಂಬದವರಿಗೆ ನೆಗೆಟಿವ್ ವರದಿ ಬಂದಿದೆ. ಅಪ್ಪ-ಅಮ್ಮನ ವರದಿ ಇನ್ನೂ ಬಂದಿಲ್ಲ. ಮದುವೆಯಲ್ಲಿ ಪಾಲ್ಗೊಂಡಿದ್ದ ಗ್ರಾಮಸ್ಥರಲ್ಲಿ ಭೀತಿ ಶುರುವಾಗಿದ್ದು, ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್)