

| ರವಿ ಗೋಸಾವಿ ಬೆಳಗಾವಿ
ಬಾಲ್ಯ ವಿವಾಹ ಎಂಬ ಸಾಮಾಜಿಕ ಪಿಡುಗು ತೊಲಗಿಸಲು ಸರ್ಕಾರ ಕಾನೂನು ತಂದರೂ ಹಿಂಬಾಗಿಲಿನಿಂದ ಅಂಥ ಪ್ರಕರಣಗಳು ನಡೆಯುತ್ತಲೇ ಇವೆ. ಆದರೆ, ಕದ್ದುಮುಚ್ಚಿ ನಡೆಯುವ ಬಾಲ್ಯ ವಿವಾಹವನ್ನು ‘ಪ್ರೀತಿ’ಯೇ ತಡೆಯುತ್ತಿರುವುದು ವಿಶೇಷ.
ಓದುವ ಹೆಣ್ಣು ಮಕ್ಕಳು ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿ-ಪ್ರೇಮದ ಪಾಶಕ್ಕೆ ಸಿಲುಕಿದಾಗ ಪಾಲಕರು ಅಪ್ರಾಪ್ತ ವಯಸ್ಸಿನಲ್ಲೇ ಮದುವೆ ಮಾಡಲು ಮುಂದಾಗುತ್ತಾರೆ. ಶಿಕ್ಷಾರ್ಹ ಅಪರಾಧವಾಗಿರುವ ಇಂಥ ಕೃತ್ಯಗಳಿಗೆ ಲವ್ವೇ ಬ್ರೇಕ್ ಹಾಕುತ್ತಿದ್ದು, ರಾಜ್ಯದಲ್ಲಿ ಸಾವಿರಾರು ಬಾಲ್ಯ ವಿವಾಹಗಳನ್ನು ಕಾನೂನಾತ್ಮಕವಾಗಿಯೇ ತಡೆಯಲು ಪ್ರೇಮಿಗಳೇ ಆಸರೆಯಾಗಿದ್ದಾರೆ.
ರಿಂಗಣಿಸುತ್ತಿದೆ ಸಹಾಯವಾಣಿ: ಬಾಲ್ಯವಿವಾಹ ನಿಷೇದ ಕಾಯ್ದೆ ಹಾಗೂ ಬಾಲ್ಯವಿವಾಹ ತಡೆಯುವ ಸಹಾಯವಾಣಿ ಹಾಗೂ ಕಾನೂನಿನ ಬಗ್ಗೆ ಶಾಲಾ-ಕಾಲೇಜು, ವಿದ್ಯಾರ್ಥಿ ನಿಲಯಗಳಲ್ಲಿ ‘ಬಾಲ್ಯ ವಿವಾಹದಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳ ಕುರಿತು’ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ನಿರಂತರವಾಗಿ ಅರಿವು ಮೂಡಿಸುತ್ತಲೇ ಇದ್ದಾರೆ. ಇದೆಲ್ಲದರ ಫಲ ಎನ್ನುವಂತೆ ಸಹಾಯವಾಣಿ ದಿನವೂ ರಿಂಗಣಿಸುತ್ತಿದ್ದು, ಸಹಪಾಠಿಗಳ ಸಂಕಷ್ಟಕ್ಕೆ ಸ್ನೇಹಿತರೇ ಧ್ವನಿಯಾಗುತ್ತಿದಾರೆ.
ಕಳೆದ ಎರಡು ವರ್ಷಗಳಿಂದ ಬಾಲ್ಯ ವಿವಾಹದ ಬಗ್ಗೆ ಮಾಹಿತಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಮಾಹಿತಿ ಆಧರಿಸಿ ಅಧಿಕಾರಿಗಳ ಸಮೇತ ವಿವಾಹ ಸ್ಥಳಕ್ಕೆ ಭೇಟಿ ನೀಡಿ ಬಾಲಕಿಯರನ್ನು ರಕ್ಷಿಸುತ್ತೇವೆ ಎನ್ನುತ್ತಾರೆ ಮಕ್ಕಳ ಸಹಾಯವಾಣಿ 1098ರ ಸಿಬ್ಬಂದಿ ವಿಠ್ಠಲ ವಟವಟಿ.
ಬಹುತೇಕ ಪ್ರಕರಣಗಳಲ್ಲಿ ವಿವಾಹದ ಸಿದ್ಧ್ದೆ ಹಾಗೂ ಸ್ಥಳದ ಮಾಹಿತಿಯನ್ನು ಬಾಲಕಿಯ ಗೆಳತಿಯರೇ ತಿಳಿಸುತ್ತಾರೆ. ಇಷ್ಟಪಟ್ಟ ಹುಡುಗಿಯ ಲಗ್ನ ಮತ್ತೊಬ್ಬರೊಂದಿಗೆ ಆಗುತ್ತಿದೆ ಎಂದು ಅದನ್ನು ತಡೆಗಟ್ಟಲು ಯುವಕರು ಹಲವು ಬಾರಿ ಗೋಗರೆದ ಪ್ರಕರಣಗಳು ಇವೆ. ಇನ್ನೂ ಕೆಲವು ಸಂದರ್ಭದಲ್ಲಿ ನೆರೆಹೊರೆ ಹಾಗೂ ಸಂಬಂಧಿಗಳಲ್ಲಿನ ದ್ವೇಷ ಹಾಗೂ ಕಾಳಜಿಯಿಂದಲೂ ವಿವಾಹ ತಡೆಗೆ ಪ್ರಯತ್ನಿಸುತ್ತಾರೆ ಎಂದು ಮಕ್ಕಳ ರಕ್ಷಣಾ ಘಟಕದ ಬೆಳಗಾವಿ ಮಕ್ಕಳ ರಕ್ಷಣಾಧಿಕಾರಿ ಲೋಕೇಶ್ ಜಗಳೂರು ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ಹುಲಸೂರು(ಭಾಲ್ಕಿ): ಅಪ್ರಾಪ್ತ ವಿದ್ಯಾರ್ಥಿನಿಯನ್ನು ಮದುವೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಲ್ಕಿ ತಾಲೂಕಿನ ಗ್ರಾಮವೊಂದರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಶಿಕ್ಷಕ ಸಂದೀಪಕುಮಾರ ಅಜುರೆ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಡಿಡಿಪಿಐ ಸಲೀಂ ಪಾಶಾ ಸೋಮವಾರ ಆದೇಶಿಸಿದ್ದಾರೆ. ಶಿಕ್ಷಕ ಅಜುರೆ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಕಳೆದ ಮಾರ್ಚ್ನಲ್ಲಿ ಮದುವೆಯಾಗಿದ್ದ.