ಜನನಾಯಕನಿಗೆ ನಮೋ ಎಂದ ದೇಶವಾಸಿಗಳು

Modi 71
Published on

ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಜನ್ಮದಿನ ಪ್ರಯುಕ್ತ ಶುಕ್ರವಾರ ದೇಶಾದ್ಯಂತ ಹಲವು ಕಾರ್ಯಕ್ರಮ ಗಳು ಆಯೋಜನೆಯಾಗಿದ್ದವು. ವಿಶೇಷವಾಗಿ ಕೋವಿಡ್ ಲಸಿಕೆ ಅಭಿಯಾನದಲ್ಲಿ ಹೊಸ ದಾಖಲೆ ನಿರ್ವಣವಾಗಿದೆ. ಮೋದಿ ಹುಟ್ಟುಹಬ್ಬಕ್ಕೆ ದೇಶವಾಸಿಗಳ ಕೊಡುಗೆ ಇದುವೇ ಎಂದು ಬಿಜೆಪಿ ಹೇಳಿದೆ. ಈ ನಡುವೆ, ಪ್ರಧಾನಿ ಹುಟ್ಟುಹಬ್ಬ ಸಂದರ್ಭವನ್ನು ಜನಸಂಪರ್ಕಕ್ಕೆ ಬಳಸಿಕೊಂಡಿರುವ ಭಾರತೀಯ ಜನತಾ ಪಾರ್ಟಿ ಮೋದಿಯವರ ಸಾರ್ವಜನಿಕ ಬದುಕಿನ ಸಾಧನೆಯ ಅಂಶಗಳನ್ನು ಜನರಿಗೆ ಮನವರಿಕೆ ಮಾಡುವ ಪ್ರಯತ್ನ ಆರಂಭಿಸಿದೆ.

ಗಣ್ಯರಿಂದ ಶುಭಾಶಯ: ರಾಷ್ಟ್ರಪತಿ ರಾಮನಾಥ ಕೋವಿಂದ, ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಗೃಹ ಸಚಿವ ಅಮಿತ್ ಷಾ ಮತ್ತು ಸಚಿವ ಸಂಪುಟದ ಸಹೋದ್ಯೋಗಿಗಳು, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಬಿಎಸ್​ಪಿ ನಾಯಕಿ ಮಾಯಾವತಿ, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಸೇರಿ ಹಲವು ಗಣ್ಯರು ಪ್ರಧಾನಮಂತ್ರಿಯವರಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.

ವಿದೇಶಿ ಗಣ್ಯರು: ನೇಪಾಳ ಪ್ರಧಾನಿ ಶೇರ್ ಬಹಾದುರ್ ದೇವುಬಾ, ಶ್ರೀಲಂಕಾ ರಾಷ್ಟ್ರಪತಿ ಗೋಟಬಯ ರಾಜಪಕ್ಸ, ಪ್ರಧಾನಿ ಮಹಿಂದಾ ರಾಜಪಕ್ಸ ಸೇರಿ ಹಲವು ವಿದೇಶಿ ಗಣ್ಯರು ಮೋದಿಯವರಿಗೆ ಶುಭ ಕೋರಿದ್ದಾರೆ.

ಉಡುಗೊರೆ ಹರಾಜಿಗೆ ಭಾರಿ ಬೇಡಿಕೆ: ಪ್ರಧಾನಮಂತ್ರಿಗೆ ಹಲವರು ನೀಡಿದ ಉಡುಗೊರೆ ಗಳನ್ನು ಹರಾಜು ಹಾಕುವ ಪ್ರಕ್ರಿಯೆಯನ್ನು ಕೇಂದ್ರ ಸಂಸ್ಕೃತಿ ಸಚಿವಾಲಯ https://pmmementos.gov.in/ ಮೂಲಕ ಆರಂಭಿಸಿದೆ. 1,300 ಉಡುಗೊರೆಗಳ ಯಾದಿಯಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರ ಜಾವೆಲಿನ್ ಕೂಡ ಸೇರಿಕೊಂಡಿದೆ. ಶುಕ್ರವಾರ ಸಂಜೆ ವೇಳೆಗೆ ಜಾವೆಲಿನ್ ಮೊತ್ತ 1.5 ಕೋಟಿ ರೂಪಾಯಿ ಆಗಿತ್ತು. ಉಡುಗೊರೆಗಳ ಹರಾಜಿನಿಂದ ಸಂಗ್ರಹವಾಗುವ ಹಣ ‘ನಮಾಮಿ ಗಂಗೆ’ ಯೋಜನೆಗೆ ವಿನಿಯೋಗವಾಗಲಿದೆ.

ಸೇವಾ ಔರ್ ಸಮರ್ಪಣ ಅಭಿಯಾನ: ಪ್ರಧಾನಿ ನರೇಂದ್ರ ಮೋದಿ ಅವರ 20 ವರ್ಷಗಳ ಸಾರ್ವಜನಿಕ ಬದುಕಿನ ಕಿರುಚಿತ್ರಣವನ್ನು ಜನರಿಗೆ ತಲುಪಿಸುವ 20 ದಿನಗಳ ಕಾರ್ಯಕ್ರಮವನ್ನು (ಅಕ್ಟೋಬರ್ 7ರ ತನಕ)ಬಿಜೆಪಿ ಆಯೋಜಿಸಿದೆ. ಈ ಅಭಿಯಾನಕ್ಕೆ ಶುಕ್ರವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಚಾಲನೆ ನೀಡಿದರು.

ಪ್ರಮುಖ ವಿದ್ಯಮಾನಗಳು

  • ಮೋದಿ ಚಿತ್ರ ಹೊಂದಿರುವ 14 ಕೋಟಿ ರೇಷನ್ ಬ್ಯಾಗ್​ಗಳನ್ನು ವಿತರಿಸಲು ಬಿಜೆಪಿ ಕ್ರಮ ತೆಗೆದುಕೊಂಡಿದೆ.
  • ವಿವಿಧ ರಾಜ್ಯಗಳ ಆಯ್ದ 71 ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಬಿಜೆಪಿ ಕಾರ್ಯಕರ್ತರು ನಡೆಸಿದ್ದಾರೆ.
  • ಅಕ್ಟೋಬರ್ 2ರಂದು ಗಾಂಧಿ ಜಯಂತಿ ದಿನ ದೇಶಾದ್ಯಂತ ಬೃಹತ್ ಪ್ರಮಾಣದ ಸ್ವಚ್ಛತಾ ಅಭಿಯಾನ ನಡೆಸಲು ಸಿದ್ಧತೆ ನಡೆದಿದೆ. ಅದೇ ರೀತಿ, ಖಾದಿ ಮತ್ತು ಸ್ಥಳೀಯ ಉತ್ಪನ್ನಗಳ ಬಳಕೆಗೆ ಉತ್ತೇಜನ ನೀಡುವ ಕೆಲಸಕ್ಕೂ ಬಿಜೆಪಿ ಮುಂದಾಗಿದೆ.
  • ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರು ಒಟ್ಟು 5 ಕೋಟಿ ಪೋರ್ಸ್ಟ್ ಕಾರ್ಡ್​ಗಳನ್ನು ಪ್ರಧಾನಮಂತ್ರಿಯವರಿಗೆ ರವಾನಿಸಿದ್ದು, ಜನ್ಮದಿನದ ಶುಭಾಶಯ ಕೋರಿದ್ದಾರೆ.
  • ಪ್ರಧಾನಿ ಮೋದಿ ಜನ್ಮದಿನವನ್ನು ಕಾಂಗ್ರೆಸ್ ಪಕ್ಷ ‘ರಾಷ್ಟ್ರೀಯ ನಿರುದ್ಯೋಗ ದಿನ’ ಎಂದು ಘೋಷಿಸಿ, ಸರಣಿ ಟ್ವೀಟ್ ಮಾಡಿದೆ.

ಪ್ರಚಾರ ವಾಹನಕ್ಕೆ ಚಾಲನೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಜೀವನ ಹಾಗೂ ಸಾಧನೆ ಪ್ರಚಾರ ಮಾಡುವ ಎಲ್​ಇಡಿ ವಾಹನಕ್ಕೆ ಶುಕ್ರವಾರ ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಡಾ ಸಂದೀಪ್ ಚಾಲನೆ ನೀಡಿದರು. ನರೇಂದ್ರ ಮೋದಿ ಅವರ 20 ವರ್ಷಗಳ ರಾಜಕೀಯ, ಸಾಮಾಜಿಕ ಜೀವನದ ತುಣುಕುಗಳನ್ನು ನವಭಾರತ ಮೇಳದಲ್ಲಿ ಪ್ರದರ್ಶಿಸುವ ಡಿಜಿಟಲ್ ಎಲ್​ಇಡಿ ವ್ಯಾನ್ ಇದಾಗಿದೆ. ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಸಚಿವ ಎಸ್.ಟಿ. ಸೋಮಶೇಖರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಯುವ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷ ಮಧುಕೇಶ್ವರ ದೇಸಾಯಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನರೇಂದ್ರ ಮೋದಿಯವರು ಜಾರಿಗೊಳಿಸಿದ ಜನಪರ-ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಇದು ಉತ್ತಮ ಕಾರ್ಯ ಎಂದು ಅತಿಥಿಗಳು ಅಭಿಪ್ರಾಯಪಟ್ಟರು. ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ, ಉಪಾಧ್ಯಕ್ಷ ವಸಂತ ಗೌಡ, ಕೋಶಾಧ್ಯಕ್ಷ ಅನಿಲ್ ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಜಗದೀಶ್ ಚಂದ್ರ ಮತ್ತು ಪ್ರಶಾಂತ್ ಕೆ ವಿ, ಬೆಂಗಳೂರಿನ ಮೂರು ಜಿಲ್ಲೆಗಳ ಅಧ್ಯಕ್ಷರು, ಯುವ ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net