

ಬೆಂಗಳೂರು: ಉಪ ಚುನಾವಣೆ ಗೆಲುವಿಗೆ ಕಾಂಗ್ರೆಸ್ ‘ಅನುಕಂಪದ ಔಷಧ’ ಹುಡುಕಿಕೊಂಡಿದೆ. ಎರಡು ವಿಧಾನಸಭಾ ಕ್ಷೇತ್ರ ಮತ್ತು ಒಂದು ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸು ಸಾಧಿಸಿದರೆ ರಾಜ್ಯ ರಾಜಕೀಯದಲ್ಲಿ ಮತ್ತು ಪಕ್ಷದಲ್ಲಿ ಆಗಬಹುದಾದ ಬದಲಾವಣೆಗಳನ್ನು ಗ್ರಹಿಸಿರುವ ಕೈ ನಾಯಕರು ಗೆಲುವಿನ ಪತಾಕೆ ಹಾರಿಸಲೇಬೇಕೆಂದು ನಿಶ್ಚಯಿಸಿದ್ದಾರೆ.
ಶಿರಾ ಕಲಿಸಿದ ಪಾಠ: ತುಮಕೂರು ಜಿಲ್ಲೆ ಶಿರಾ ವಿಧಾನಸಭಾ ಕ್ಷೇತ್ರವನ್ನು ಕಳೆದ ಉಪ ಚುನಾವಣೆಯಲ್ಲಿ ತನ್ನದಾಗಿಸಿಕೊಂಡ ಬಿಜೆಪಿ, ಆ ಕ್ಷೇತ್ರದ ಇತಿಹಾಸದಲ್ಲಿ ದಾಖಲೆ ಬರೆಯಿತು. ಈ ಸೋಲನ್ನು ನಿರೀಕ್ಷಿಸದ ಕಾಂಗ್ರೆಸ್ ನಾಯಕರು ಎಲ್ಲಿ ಎಡವಿದೆವು ಎಂದು ಪದೇಪದೆ ಕನವರಿಸಿದ್ದಾರೆ. ಅಂದು ಪಕ್ಷದ ರಾಜ್ಯ ಘಟಕದಿಂದ ಶಿಫಾರಸಾಗಿದ್ದ ಅಭ್ಯರ್ಥಿ ಬಗ್ಗೆ ಹೈಕಮಾಂಡ್ಗೆ ಒಲವಿರಲಿಲ್ಲ ಎಂಬ ಸ್ಪಷ್ಟ ಸಂದೇಶ ಬಂದಿತ್ತು. ಆದರೆ, ರಾಜ್ಯ ಘಟಕದ ಶಿಫಾರಸನ್ನು ಒಪ್ಪಿ ಕೊಳ್ಳುವ ಅನಿವಾರ್ಯತೆಯಲ್ಲಿ ಹೈಕಮಾಂಡ್ ಸಿಲುಕಿತು. ಚುನಾವಣೆ ಫಲಿತಾಂಶ ಬಂದ ಬಳಿಕ ಹೈಕಮಾಂಡ್ ಮುಂದೆ ರಾಜ್ಯ ಘಟಕ ತಲೆ ಎತ್ತದ ಸ್ಥಿತಿ ನಿರ್ವಣವಾಯಿತು. ಇದೇ ಕಾರಣಕ್ಕೆ ಈ ಬಾರಿ ಅಭ್ಯರ್ಥಿ ಆಯ್ಕೆಗೆ ಮೂರು ತಿಂಗಳಿನಿಂದಲೇ ಕಸರತ್ತು ನಡೆಸಿತು. ಮಸ್ಕಿಯಲ್ಲಿ ಬಸನಗೌಡ ತುರವಿಹಾಳಗೆ ಹೈಕಮಾಂಡ್ನಿಂದ ಟಿಕೆಟ್ ಖಾತ್ರಿಯಾದ ಮೇಲೆಯೇ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಗಿದೆ. ಬಸವಕಲ್ಯಾಣದಲ್ಲಿ ಶಾಸಕರಾಗಿದ್ದ ಬಿ.ನಾರಾಯಣರಾವ್ ಪತ್ನಿ ಮಲ್ಲಮ್ಮ ಬಗ್ಗೆಯೇ ರಾಜ್ಯ ನಾಯಕರಿಗೆ ಹೆಚ್ಚಿನ ಒಲವಿದ್ದುದರಿಂದ ಹೈಕಮಾಂಡ್ ಸಮ್ಮತಿಸಿತು. ಚುನಾವಣೆ ನಿಗದಿಯಾಗದ ಸಿಂದಗಿಗೆ ಇತ್ತೀಚೆಗೆ ಪಕ್ಷಕ್ಕೆ ಬಂದ ದಿ.ಮನಗೂಳಿ ಪುತ್ರ ಅಶೋಕ್ ಮನಗೂಳಿ ಅವರನ್ನು ಆಯ್ಕೆ ಮಾಡಿದೆ. ಅವರು ಪಕ್ಷಕ್ಕೆ ಸೇರುವ ಸಂದರ್ಭದಲ್ಲಿಯೇ ಟಿಕೆಟ್ ಖಾತರಿ ಮಾಡಲಾಗಿತ್ತು. ಹಾಗೆಯೇ ಬೆಳಗಾವಿ ಕ್ಷೇತ್ರದಲ್ಲಿ ಲಕ್ಷಿ್ಮೕ ಹೆಬ್ಬಾಳ್ಕರ್ ಸಹೋದರ ಚನರಾಜ್ ಸೂಕ್ತವೋ ಅಥವಾ ಜಿಲ್ಲೆಯ ಒಬ್ಬರು ಶಾಸಕರನ್ನೇ ಕಣಕ್ಕಿಳಿಸಿದರೆ ಸೂಕ್ತವೋ ಎಂಬುದನ್ನೂ ಹೈಕಮಾಂಡ್ ವಿವೇಚನೆಗೆ ಬಿಡುವ ಸಾಧ್ಯತೆ ಹೆಚ್ಚಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸ್ಪರ್ಧೆಗೆ ಒಲವು ಹೊಂದಿದ್ದಾರೆ.
ಶಿವಸೇನೆ ಸ್ಪರ್ಧೆ: ಬೆಳಗಾವಿ ಲೋಕಸಭಾ ಕ್ಷೇತ್ರ ಸೇರಿ ರಾಜ್ಯದಲ್ಲಿ ಘೊಷಣೆಯಾಗಿರುವ ಬಸವಕಲ್ಯಾಣ ಮತ್ತು ಮಸ್ಕಿ ಕ್ಷೇತ್ರಗಳ ವಿಧಾನಸಭಾ ಉಪ ಚುನಾವಣೆಯಲ್ಲಿ ಶಿವಸೇನಾ ವತಿಯಿಂದ ಅಧಿಕೃತ ಅಭ್ಯರ್ಥಿ ಕಣಕ್ಕಿಳಿಸಲಾಗುವುದು ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಕೆ.ಪಿ ಪಾಟೀಲ ತಿಳಿಸಿದ್ದಾರೆ.
ಅಚ್ಚರಿಯ ಆಯ್ಕೆ ನಿರೀಕ್ಷೆ: ಬೆಳಗಾವಿ ಲೋಕಸಭೆ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಹೊಸಮುಖ ಹಾಗೂ ಸಾಮಾನ್ಯ ಕಾರ್ಯಕರ್ತರಿಗೆ ಮಣೆ ಹಾಕುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಕೋರ್ ಕಮಿಟಿ ಸಭೆಯಲ್ಲಿ ವಿಸõತ ಚರ್ಚೆ, ಪ್ರಭಾರಿಗಳು ನೀಡಿದ ವರದಿ ಅವಲೋಕಿಸಿ ತಲಾ 3 ಹೆಸರುಗಳನ್ನು ಅಂತಿಮಗೊಳಿಸಿ, ವರಿಷ್ಠರಿಗೆ ಶಿಫಾರಸು ಮಾಡಲಾಗುತ್ತದೆ. ಶನಿವಾರ ನಡೆಯಲಿರುವ ಸಭೆಯ ಜಾಡು ಇದೇ ತೆರನಾಗಿರುತ್ತದೆ. ಪಕ್ಷದ ಕೇಂದ್ರ ಚುನಾವಣಾ ಸಮಿತಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಕೇಂದ್ರದ ಮಾಜಿ ಸಚಿವ ದಿವಂಗತ ಸುರೇಶ್ ಅಂಗಡಿ ಕುಟುಂಬಕ್ಕೆ ನೀಡಬೇಕೆಂಬ ಒತ್ತಡ, ಪ್ರಭಾವಿಗಳು ಲಾಬಿ ನಡೆಸುತ್ತಿದ್ದು, ಹಿಂದುತ್ವವಾದಿ ಪ್ರಮೋದ್ ಮುತಾಲಿಕ್ ಬೇಡಿಕೆಯಿಟ್ಟಿದ್ದಾರೆ. ಬಸವಕಲ್ಯಾಣದಲ್ಲೂ ಆಕಾಂಕ್ಷಿಗಳ ದೊಡ್ಡ ದಂಡು ಇದೆ. ಆದರೆ ಪಕ್ಷದ ಮೇಲೆ ಹಿಡಿತ, ಒಡನಾಟ, ನಿಕಟ ಸಂಪರ್ಕವುಳ್ಳ ಹೊಸಮುಖ, ಸಾಮಾನ್ಯ ಕಾರ್ಯಕರ್ತನಿಗೆ ಆದ್ಯತೆ ನೀಡಲಿದೆ.
ಅಧಿಕೃತ ಘೊಷಣೆ ಬಾಕಿ: ಮಸ್ಕಿ ಕ್ಷೇತ್ರಕ್ಕೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅಭ್ಯರ್ಥಿ ಎಂದು ಅಧಿಕೃತ ಘೊಷಣೆಯಷ್ಟೇ ಬಾಕಿಯಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿಯುವಲ್ಲಿ ಕಾರಣರಾದವರ ಪೈಕಿ ಪ್ರತಾಪಗೌಡ ಒಬ್ಬರಾಗಿದ್ದಾರೆ. ಉಪ ಚುನಾವಣೆಗೆ ಟಿಕೆಟ್ ನೀಡುವ ಜತೆಗೆ ಗೆದ್ದ ಬಳಿಕ ಮಂತ್ರಿ ಪದವಿ ನೀಡುವುದಾಗಿ ಬಿಎಸ್ವೈ ಭರವಸೆ ನೀಡಿದ್ದು, ವರಿಷ್ಠರೂ ಸಮ್ಮತಿಸಿದ್ದಾರೆ.