ಚಿನ್ನದ ಗಟ್ಟಿ ಆಸೆಗೆ ಬಿದ್ದು ಲಕ್ಷ ಲಕ್ಷ ಹಣ ಕಳೆದುಕೊಂಡ!

Published on

ಚಿನ್ನದ ಬದಲಿಗೆ ಬಟ್ಟೆ ಬ್ಯಾಗ್ ನೀಡಿದ ವಂಚಕರು

 ಪಾಂಡವಪುರ : ಅಲ್ಪ ಮೊತ್ತಕ್ಕೆ ಅರ್ಧ ಕೆ.ಜಿ. ಚಿನ್ನದ ಗಟ್ಟಿ ಕೊಡುವುದಾಗಿ ನಂಬಿಸಿ ಹಣ ಪಡೆದು ಚಿನ್ನದ ಬದಲಾಗಿ ಬಟ್ಟೆ ಬ್ಯಾಗ್‌ವೊಂದನ್ನು ನೀಡಿ ವಂಚಕರು ಚಾಣಾಕ್ಷತನದಿಂದ ಪರಾರಿಯಾಗಿದ್ದಾರೆ.

ತಮಿಳುನಾಡು ಕನ್ಯಾಕುಮಾರಿ ಜಿಲ್ಲೆಯ ಆಗಸ್ನೀಶ್‌ವರಂ ತಾಲೂಕಿನ ಕನ್ನಾಂಪಿವಿಳೈ ಗ್ರಾಮದ ಎನ್.ರಾಜೇಂದ್ರನ್ ಅವರ ಮಗ ರಾಜು ಹಣ ಕಳೆದುಕೊಂಡವರು.

ಹಣ ಕಳೆದುಕೊಂಡ ರಾಜು ಮದುವೆಯಾಗಲು ವಧುವಿನ ಹುಡುಕಾಟಕ್ಕಾಗಿ ಮೊಬೈಲ್ ಸಂಖ್ಯೆಯೊಂದಿಗೆ ತನ್ನ ಸ್ವವಿವರಗಳನ್ನು ಮ್ಯಾಟ್ರಿಮೋನಿಯಲ್ಲಿ ಹಂಚಿಕೊಂಡಿದ್ದ. ಮ್ಯಾಟ್ರಿಮೋನಿ ಮೂಲಕ ವ್ಯಕ್ತಿಯ ವಿವರ ಪಡೆದುಕೊಂಡ ವಂಚಕರು ಆತನ ಮೊಬೈಲ್‌ಗೆ ವಿವಿಧ ಮೊಬೈಲ್ ಸಂಖ್ಯೆಗಳಿಂದ ಕರೆದ ಮಾಡಿ ನಮ್ಮ ಬಳಿ ಒಂದು ಕೆಜಿ ಚಿನ್ನದ ಗಟ್ಟಿ ಇದ್ದು, ಮಾರುಕಟ್ಟೆ ದರಕ್ಕಿಂತ ಅತಿ ಕಡಿಮೆ ಬೆಲೆಗೆ ಅಂದರೆ 23 ಲಕ್ಷ ರೂ.ಗೆ ಅದನ್ನು ಮಾರಾಟ ಮಾಡುವುದಾಗಿ ತಿಳಿಸಿದ್ದಾರೆ. ಇದಕ್ಕೆ ಒಪ್ಪದ ರಾಜು ನನ್ನ ಬಳಿ ಅಷ್ಟೊಂದು ಹಣವಿಲ್ಲ. ನನಗೆ ಚಿನ್ನ ಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾನೆ. ಬೆನ್ನು ಬಿದ್ದ ವಂಚಕರು ಕೊನೆಗೆ ಅರ್ಧ ಕೆ.ಜಿ ಚಿನ್ನವನ್ನು 10 ಲಕ್ಷ ರೂ.ಗೆ ಕೊಡುವುದಾಗಿ ಬೆನ್ನು ಬಿದ್ದು ನಂಬಿಸಿದ್ದಾರೆ.

ವಂಚಕರ ಮಾತಿಗೆ ಮರಳಾದ ರಾಜುವಿಗೆ ಹಣ ತೆಗೆದುಕೊಂಡು ಬೆಂಗಳೂರಿಗೆ ಬರುವಂತೆ ತಿಳಿಸಿದ್ದಾರೆ. ಅಲ್ಲಿಂದ ಗೂಗಲ್ ಮ್ಯಾಪ್ ಹಾಕಿಕೊಂಡು ಪಾಂಡವಪುರ ತಾಲೂಕಿನ ಜಕ್ಕನಹಳ್ಳಿ ವೃತ್ತಕ್ಕೆ ಬರುವಂತೆ ತಿಳಿಸಿದ್ದಾರೆ. ವಂಚಕರ ಮಾತಿನ ಮೇಲೆ ನಂಬಿಕೆ ಇಟ್ಟು ರಾಜು ತನ್ನ ಸ್ನೇಹಿತನೊಂದಿಗೆ ಕಾರಿನಲ್ಲಿ ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ಅಲ್ಲಿಂದ ವಂಚಕರು ತಿಳಿಸಿದ ಸ್ಥಳಕ್ಕೆ ಮಂಗಳವಾರ ಬೆಳಗಿನ ಜಾವ 5.30ಕ್ಕೆ ತಲುಪಿದ್ದಾನೆ. ಜಕ್ಕನಹಳ್ಳಿ ಮಂಡ್ಯ ರಸ್ತೆಯಲ್ಲಿರುವ ಹೇಮಾವತಿ ಕಾಲುವೆ ಸೇತುವೆ ಬಳಿ ಭೇಟಿಯಾದ ವೇಳೆ ವಂಚಕರು ಹಣ ಪಡೆದುಕೊಂಡು ಬಟ್ಟೆ ಬ್ಯಾಗ್ ನೀಡಿ ಈ ಸ್ಥಳದಲ್ಲಿ ಬ್ಯಾಗ್ ತೆರೆಯಬೇಡಿ. ಸ್ವಲ್ಪ ಮುಂದೆ ಹೋಗಿ ತೆರೆದು ನೋಡುವಂತೆ ತಿಳಿಸಿ ಹಣ ಪಡೆದು ಪರಾರಿಯಾಗಿದ್ದಾರೆ. ಬ್ಯಾಗ್ ತೆರೆದು ನೋಡಿದಾಗ ಖಾಲಿ ಬ್ಯಾಗ್ ಪತ್ತೆಯಾಗಿದ್ದು, ತಾನು ಮೋಸ ಹೋಗಿರುವುದು ಗೊತ್ತಾಗಿದೆ.

ಈ ಸಂಬಂಧ ವಂಚನೆಗೊಳಗಾದ ರಾಜು ಬುಧವಾರ ನೀಡಿದ ದೂರಿನ ಮೇರೆಗೆ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net